ADVERTISEMENT

ಐಎಎಸ್ ಕನಸು ಕಂಡಿದ್ದ ದಾಖಲೆಗಳ ಸೃಷ್ಟಿಕರ್ತ!

ವಿವಿಧ ಇಲಾಖೆಗಳ 290 ಸೀಲುಗಳು ಜಪ್ತಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2018, 20:18 IST
Last Updated 3 ಅಕ್ಟೋಬರ್ 2018, 20:18 IST
ಗಿರೀಶ್
ಗಿರೀಶ್   

ಬೆಂಗಳೂರು: ಐಎಎಸ್ ಅಧಿಕಾರಿಯಾಗುವ ಕನಸು ಕಂಡಿದ್ದ ಎಚ್‌.ಎನ್‌.ಗಿರೀಶ್ (28) ಎಂಬಾತ, ಸಿದ್ಧತೆಗೆ ಹಣ ಹೊಂದಿಸಲು ಸರ್ಕಾರಿ ದಾಖಲೆಗಳನ್ನು ಸೃಷ್ಟಿಸುವ ದಂಧೆಗಿಳಿದು ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅತಿಥಿಯಾಗಿದ್ದಾನೆ.

ಕುಣಿಗಲ್ ತಾಲ್ಲೂಕು ಹೊಡಗಟ್ಟ ಗ್ರಾಮದ ಗಿರೀಶ್, ಮೂರು ವರ್ಷಗಳಿಂದ ಶ್ರೀಗಂಧಕಾವಲು ಸಮೀಪದ ಚಂದ್ರಶೇಖರ್‌ ಲೇಔಟ್‌ನಲ್ಲಿ ನೆಲೆಸಿದ್ದ. ಆರೋಪಿಯಿಂದ ವಿವಿಧ ಇಲಾಖೆಗಳ 290 ಸೀಲುಗಳು, ₹ 7.75 ಲಕ್ಷ ನಗದು, ನಕಲಿ ದಾಖಲೆಗಳು, ಸೀಲು ತಯಾರಿಸುವ ಯಂತ್ರ ಹಾಗೂ ಡೈರಿಯೊಂದನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಗಿರೀಶ್ ವಿರುದ್ಧ, ರಾಜರಾಜೇಶ್ವರಿ ವಲಯದ ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಮುತ್ತುರಾಜು ಅವರು ಸೆ.30ರಂದು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ಕೊಟ್ಟಿದ್ದರು. ‘ಇತ್ತೀಚೆಗೆ ಸಲ್ಲಿಕೆಯಾಗಿದ್ದ ಕೆಲ ಭೂದಾಖಲೆಗಳನ್ನು ಪರಿಶೀಲಿಸಿದಾಗ, ಅವುಗಳ ಅಸಲೀತನದ ಬಗ್ಗೆ ಸಂಶಯ ಮೂಡಿತು. ದಾಖಲೆ ಸಲ್ಲಿಸಿದವರನ್ನೇ ಕರೆಸಿ ವಿಚಾರಣೆ ನಡೆಸಿದಾಗ ಗಿರೀಶ್ ಎಂಬಾತನೇ ಅವುಗಳ ಸೃಷ್ಟಿಕರ್ತ ಎಂಬುದು ಗೊತ್ತಾಯಿತು. ಹೀಗಾಗಿ, ಆತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ದೂರಿನಲ್ಲಿ ಮನವಿ ಮಾಡಿದ್ದರು.

ADVERTISEMENT

ಗೆಳೆಯ ಕಲಿಸಿದ ವಿದ್ಯೆ: 2011ರಲ್ಲಿ ಬಿ.ಕಾಂ ಪದವಿ ಮುಗಿಸಿದ ಗಿರೀಶ್, ಸರ್ಕಾರಿ ಹುದ್ದೆ ಪಡೆಯಲು ನಾನಾ ಕಸರತ್ತು ನಡೆಸಿದ್ದ. ಹಲವು ಬಾರಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದರೂ, ಕೆಲಸ ಸಿಗುವಂತಹ ಫಲಿತಾಂಶ ಮಾತ್ರ ಬರಲಿಲ್ಲ. ಕೊನೆಗೆ ‘ಎಚ್‌ಡಿಬಿಎಲ್ ಫೈನಾನ್ಶಿಯಲ್’ ಖಾಸಗಿ ಸಂಸ್ಥೆಯಲ್ಲಿ ಸೇಲ್ಸ್ ಆಫೀಸರ್ ಆಗಿ ಕೆಲಸಕ್ಕೆ ಸೇರಿದ್ದ.

2015ರಲ್ಲಿ ಸಾಲ ಮಾಡಲು ಗ್ರಾಹಕರೊಬ್ಬರಿಗೆ ಟ್ಯಾಕ್ಸ್ ಪೇಯ್ಡ್‌ ರೆಸಿಪ್ಟ್‌ನ ಅವಶ್ಯಕತೆ ಇತ್ತು. ಆ ದಾಖಲೆ ಗ್ರಾಹಕರ ಬಳಿ ಇರದಿದ್ದಾಗ ತಾನೇ ಅದರ ಹುಡುಕಾಟ ಪ್ರಾರಂಭಿಸಿದ್ದ. ಆಗ ನೆರವಿಗೆ ಬಂದ ಆತನ ಸ್ನೇಹಿತ ಇರ್ಫಾನ್ ಖಾನ್, ‘ಲಗ್ಗೆರೆಯಲ್ಲಿ ಭಾಸ್ಕರ್ ಎಂಬಾತ ಎಂಥ ದಾಖಲೆಗಳನ್ನು ಬೇಕಾದರೂ ತಯಾರಿಸಿ ಕೊಡುತ್ತಾನೆ’ ಎಂದು ಹೇಳಿದ್ದ. ಅಂತೆಯೇ ಭಾಸ್ಕರ್‌ನನ್ನು ಸಂಪರ್ಕಿಸಿದ್ದ ಗಿರೀಶ್, ಆತನಿಂದ ನಕಲಿ ಟ್ಯಾಕ್ಸ್ ಪೇಯ್ಡ್ ರೆಸಿಪ್ಟ್ ಪಡೆದುಕೊಂಡಿದ್ದ.

ಇದಾದ ನಂತರ ಆತನ ಜತೆ ಗಿರೀಶ್‌ಗೆ ಗೆಳೆತನ ಬೆಳೆಯಿತು. ಈ ಆತ್ಮೀಯತೆಯ ಬೆನ್ನಲ್ಲೇ ಭಾಸ್ಕರ್, ‘ನಾನೇ ಸರ್ಕಾರಿ ದಾಖಲೆಗಳನ್ನು ತಯಾರಿಸುತ್ತೇನೆ. ಯಾವುದೇ ಇಲಾಖೆಯ ಸೀಲು ಹಾಗೂ ಅಧಿಕಾರಿಯ ಸಹಿಯನ್ನು ಬೇಕಾದರೂ ನಮೂದಿಸಿ ಕೊಡುತ್ತೇನೆ’ ಎಂದು ಹೇಳಿದ್ದ. ಆನಂತರ ಗಿರೀಶ್ ದಂಧೆಗೆ ಸಂಪೂರ್ಣ ಕೈಜೋಡಿಸಿದ್ದ.

ಹೀಗಿರುವಾಗ, ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ವಂಚಿಸಿದ ಆರೋಪದಡಿ ಪೀಣ್ಯ ಪೊಲೀಸರು 2016ರಲ್ಲಿ ಭಾಸ್ಕರ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಿದರು. ಗೆಳೆಯ ಕಂಬಿ ಹಿಂದೆ ಸೇರುತ್ತಿದ್ದಂತೆಯೇ ಗಿರೀಶ್ ಆ ದಂಧೆಯನ್ನು ಮುಂದುವರಿಸಿದ್ದ
ಎಂದು ಪೊಲೀಸರು ಮಾಹಿತಿ ನೀಡಿದರು.

ಹೆತ್ತವರ ಆಸೆ ನುಚ್ಚು ನೂರು

‘ನಾನು ಐಎಎಸ್ ಅಧಿಕಾರಿ ಆಗಬೇಕೆಂಬುದು ಹೆತ್ತವರ ಆಸೆಯಾಗಿತ್ತು. ಆ ಗುರಿ ಮುಟ್ಟಲು ಲಕ್ಷಾಂತರ ರೂಪಾಯಿ ಹಣ ಬೇಕಾಗಿತ್ತು. ಅದಕ್ಕಾಗಿ ಈ ದಂಧೆಗೆ ಇಳಿದುಬಿಟ್ಟೆ. ಇನ್ನು ಯಾವತ್ತೂ ನಾನು ಐಎಎಸ್ ಅಧಿಕಾರಿಯಾಗಲು ಸಾಧ್ಯವಿಲ್ಲ. ನನ್ನ ದುರ್ಬುದ್ಧಿಯಿಂದ ಪೋಷಕರ ಆಸೆ, ಕನಸು ನುಚ್ಚು ನೂರಾಯಿತು’ ಎಂದು ಹೇಳುತ್ತ ಗಿರೀಶ್ ವಿಚಾರಣೆ ವೇಳೆ ದುಃಖತಪ್ತನಾಗಿದ್ದಾಗಿ ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.