ಬೆಂಗಳೂರು: ದುಬೈ ‘ಎಮಿರೆಟ್ಸ್ ಏರ್‌ಲೈನ್ಸ್’ ಕಂಪನಿಯಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ₹ 7.10 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ವಂಚನೆ ಬಗ್ಗೆ ಖಾಸಗಿ ಕಂಪನಿಯೊಂದರ ಉದ್ಯೋಗಿ ನೇಹಾ ಎಂಬುವರು ದೂರು ನೀಡಿದ್ದಾರೆ. ಆರೋಪಿಗಳಾದಸೈಯದ್ ಜವಾಜ್ ಅಲಿಯಾಸ್ಅರ್ಮಾನ್ ಹಾಗೂ ಚಾಂದ್ ಎಂಬುವರ ವಿರುದ್ಧ ಅಪರಾಧ ಸಂಚು, ವಂಚನೆ ಹಾಗೂ ನಕಲಿ ದಾಖಲೆ ಸೃಷ್ಟಿಸಿದ ಆರೋಪದಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ನೇಹಾರಿಂದ ಹಣ ಪಡೆದ ಆರೋಪಿಗಳು, ಎಮಿರೆಟ್ಸ್ ಏರ್‌ಲೈನ್ಸ್ ಹೆಸರಿನಲ್ಲಿ ನಕಲಿ ನೇಮಕಾತಿ ಪತ್ರ ನೀಡಿದ್ದರು. ಅದರ ಸಮೇತ ಕಂಪನಿ ಕಚೇರಿಗೆ ಹೋದಾಗಲೇ ಪತ್ರ ನಕಲಿ ಎಂಬುದು ದೂರುದಾರರಿಗೆ ಗೊತ್ತಾಗಿತ್ತು’ ಎಂದು ಮೂಲಗಳು ಹೇಳಿವೆ.
ಮನೆ ಮಾಲೀಕರಿಂದ ಪರಿಚಯ: ‘ಠಾಣೆ ವ್ಯಾಪ್ತಿಯಲ್ಲಿ ನೇಹಾ ವಾಸವಿದ್ದಾರೆ. ಒಳ್ಳೆಯ ಕೆಲಸ ಕೊಡಿಸುವುದಾಗಿ 2019ರ ಏಪ್ರಿಲ್‌ನಲ್ಲಿ ಹೇಳಿದ್ದ ಮನೆ ಮಾಲೀಕ, ಆರೋಪಿ ಸೈಯದ್ ಜವಾಜ್‌ನನ್ನು ಪರಿಚಯ ಮಾಡಿಸಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ನೇಹಾ ಅವರಿಂದ ಶೈಕ್ಷಣಿಕ ಹಾಗೂ ಕೆಲಸದ ಅನುಭವ ಇರುವ ದಾಖಲೆಗಳನ್ನು ಪಡೆದುಕೊಂಡಿದ್ದ ಸೈಯದ್ ಜವಾಜ್ ನಂತರ, ದೂರವಾಣಿಯಲ್ಲಿ ಸಂದರ್ಶನ ಮಾಡಿ ನಂಬಿಸಿದ್ದ. ಬಳಿಕ ಸಂದರ್ಶನ ಹಾಗೂ ದಾಖಲೆ ಪರಿಶೀಲನೆ ಶುಲ್ಕವೆಂದು ₹7.10 ಲಕ್ಷ ಪಡೆದುಕೊಂಡಿದ್ದ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.