ಬೆಂಗಳೂರು: ‘ನಗರಾಭಿವೃದ್ಧಿ ಇಲಾಖೆಯ ವಿಭಾ ಗಾಧಿಕಾರಿ’ ಎಂಬುದಾಗಿ ಹೇಳಿ ಜನರು ಹಾಗೂ ಸರ್ಕಾರದ ಅಧಿಕಾರಿಗಳನ್ನು ವಂಚಿಸುತ್ತಿದ್ದ ಆರೋಪಿ ಎನ್. ಚಂದ್ರಪ್ಪ (36) ಎಂಬುವರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಬಸವೇಶ್ವರನಗರದ ಕಿರ್ಲೋಸ್ಕರ್ ಬಡಾವಣೆಯ ನಿವಾಸಿ ಚಂದ್ರಪ್ಪ, ವಿಧಾನಸೌಧದಲ್ಲಿ ಹೆಚ್ಚು ಸುತ್ತಾಡುತ್ತಿದ್ದ. ವಿಭಾಗಾಧಿಕಾರಿ ಎಂಬು ದಾಗಿ ಹೇಳಿಕೊಂಡು ಹಲವರನ್ನು ವಂಚಿಸುತ್ತಿದ್ದ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ವಿಧಾನಸೌಧದಲ್ಲೇ ಆರೋಪಿಯನ್ನು ಬಂಧಿಸ ಲಾಯಿತು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ವಿಭಾಗಾಧಿಕಾರಿ, ನಗರಾಭಿವೃದ್ಧಿ ಇಲಾಖೆ’ ಎಂಬ ಹೆಸರಿನಲ್ಲಿ ನಕಲಿ ಗುರುತಿನ ಚೀಟಿ ಸೃಷ್ಟಿಸಿಕೊಂಡಿದ್ದ. ಕರ್ನಾಟಕ ಸರ್ಕಾರದ ಸಚಿವಾಲಯದಿಂದ ಗುರುತಿನ ಚೀಟಿ ನೀಡಿರುವ ರೀತಿಯಲ್ಲಿ, ಗುರುತಿನ ಚೀಟಿ ನಂ. 193/2019 ಎಂಬುದಾಗಿಯೂ ನಮೂದಿಸಿಕೊಂಡಿದ್ದ. ಹಲವರು ಈ ಗುರುತಿನ ಚೀಟಿ ನಿಜನೆಂದು ನಂಬಿದ್ದರು.’
‘ನಕಲಿ ಗುರುತಿನ ಚೀಟಿಯನ್ನು ಸಾರ್ವಜನಿಕರು ಹಾಗೂ ಅಧಿಕಾರಿಗಳಿಗೆ ಆರೋಪಿ ತೋರಿಸುತ್ತಿದ್ದ. ನಗರಾಭಿವೃದ್ಧಿ ಇಲಾಖೆಯಲ್ಲಿರುವ ಹಲವು ಕಾಮಗಾರಿ, ಕೆಲಸ ಕೊಡಿಸುವ ಆಮಿಷವೊಡ್ಡಿ ಹಲವರಿಂದ ಹಣ ಪಡೆಯುತ್ತಿದ್ದನೆಂಬ ಮಾಹಿತಿ ಇದೆ’ ಎಂದು ತಿಳಿಸಿವೆ.
‘ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಸಂದರ್ಭದಲ್ಲೂ ತಾನೊಬ್ಬ ಸರ್ಕಾರಿ ಅಧಿಕಾರಿಯೆಂದು ಸುಳ್ಳು ಹೇಳಿದ್ದ. ಆತನ ಬಳಿಯ ಗುರುತಿನ ಚೀಟಿ ಜಪ್ತಿ ಮಾಡಿ ಪರಿಶೀಲಿಸಿದಾಗ, ಆತ ನಕಲಿ ವಿಭಾಗಾಧಿಕಾರಿ ಎಂಬುದು ತಿಳಿಯಿತು. ಈತನ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.