ಬೆಂಗಳೂರು: ರಾಜರಾಜೇಶ್ವರಿ ನಗರ ವಲಯದ ಮಲ್ಲತಹಳ್ಳಿಯಲ್ಲಿ ನಕಲಿ ನಕ್ಷೆ ಸಿದ್ಧಪಡಿಸಿಕೊಂಡು ಕಟ್ಟಡ ನಿರ್ಮಿಸುತ್ತಿದ್ದವರ ವಿರುದ್ಧ ಬಿಬಿಎಂಪಿಯು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
ಮಲ್ಲತಹಳ್ಳಿ ಗ್ರಾಮದ ಸರ್ವೆ ನಂಬರ್ 6 ಮತ್ತು 7ರ ಜಮೀನಿನ ಮಾಲೀಕರಾದ ಜಿ. ಲಕ್ಷ್ಮಿ ಪ್ರಸಾದ್, ಜಿಪಿಎ ಹೊಂದಿರುವ ಲ್ಯಾಕ್ವೆನ್ ಡೆವಲಪರ್ಸ್ ಪಾಲುದಾರರಾದ ಡಿ. ಹರ್ದೀಪ್ ಮತ್ತು ಎ. ವಿಜಯಕುಮಾರ್ ಅವರಿಗೆ ಕಟ್ಟಡದ ನಕ್ಷೆಯನ್ನು (ಪಿ.ಆರ್.ಜೆ ನಂ-3384/23-24) 2023ರ ನವೆಂಬರ್ 3ರಂದು ಬಿಬಿಎಂಪಿ ಅನುಮೋದಿಸಿದೆ.
ಮಂಜೂರು ನಕ್ಷೆಯಂತೆ ನೆಲ ಮಾಳಿಗೆ, ನೆಲ ಅಂತಸ್ತು, ಮೂರು ಅಂತಸ್ತು ಮತ್ತು ಟೆರಸ್ ಅಂತಸ್ತು ಸೇರಿ 1388.69 ಚದರ ಮೀಟರ್ ನಿರ್ಮಿತ ಪ್ರದೇಶವಿರಬೇಕು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ನಕಲಿ ನಕ್ಷೆ ಸೃಷ್ಟಿಸಿಕೊಂಡು, ಆರು ಅಂತಸ್ತುಗಳನ್ನು ನಿರ್ಮಿಸಲಾಗುತ್ತಿದೆ. ಒಂದು ಅಂತಸ್ತಿಗೆ ನಾಲ್ಕು ಮನೆಗಳಂತೆ ಒಟ್ಟು 20 ಘಟಕಗಳನ್ನು ನಿರ್ಮಿಸಲಾಗುತ್ತಿದೆ. ನಕಲಿ ನಕ್ಷೆ ತಯಾರಿಸಿ ಪಾಲಿಕೆಗೆ ಮೋಸ ಮಾಡಿರುವುದು ಕಂಡುಬಂದಿರುತ್ತದೆ. ಈ ಸಂಬಂಧ ವ್ಯತಿರಿಕ್ತ ಭಾಗಗಳನ್ನು ತೆರವುಗೊಳಿಸಲು ನೋಟಿಸ್ ನೀಡಲಾಗಿದೆ.
ನಕಲಿ ನಕ್ಷೆ ತಯಾರಿಸಿರುವುದರಿಂದ ಮಾಲೀಕರು ಹಾಗೂ ಡೆವಲಪರ್ಸ್, ವಾಸ್ತುಶಿಲ್ಪಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದ್ದು, ಎಫ್‌ಐಆರ್ ದಾಖಲಾಗಿದೆ ಎಂದು ಬಿಬಿಎಂಪಿ ರಾಜರಾಜೇಶ್ವರಿನಗರ ವಲಯ ಆಯುಕ್ತ ಬಿ.ಸಿ ಸತೀಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.