ADVERTISEMENT

ಕಾಂಗ್ರೆಸ್ ಪ್ರಣಾಳಿಕೆ ಕುರಿತು ಸುಳ್ಳು ಪೋಸ್ಟ್: ಗೋವಾದಲ್ಲಿ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 19 ಮೇ 2024, 16:08 IST
Last Updated 19 ಮೇ 2024, 16:08 IST
   

ಬೆಂಗಳೂರು: ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣೆ ಪ್ರಣಾಳಿಕೆ ಬಗ್ಗೆ ಸುಳ್ಳು ಸುದ್ದಿ ಪೋಸ್ಟ್ ಮಾಡಿದ್ದ ಆರೋಪದಡಿ ವಿನಿತ್ ನಾಯ್ಕ್ ಅಲಿಯಾಸ್ ಭಿಕುಮಾತ್ರೆ ಎಂಬುವವರನ್ನು ನಗರದ ಸೈಬರ್ ಕ್ರೈಂ ಠಾಣೆ ಪೊಲೀಸರು ಗೋವಾದಲ್ಲಿ ಬಂಧಿಸಿದ್ದಾರೆ.

‘ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಆರೋಪಿ ಪೋಸ್ಟ್ ಪ್ರಕಟಿಸಿದ್ದ. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತ ಜೆ. ಸರವಣನ್ ಅವರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿತ್ತು. ತಾಂತ್ರಿಕ ಪುರಾವೆಗಳನ್ನು ಆಧರಿಸಿ ಆರೋಪಿಯನ್ನು ಗೋವಾದಲ್ಲಿ ಬಂಧಿಸಲಾಗಿದ್ದು, ನಗರಕ್ಕೆ ಕರೆತರಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಹಿಂದಿ ಸಿನಿಮಾವೊಂದರ ಪಾತ್ರಧಾರಿ ಹೆಸರು ಭಿಕುಮಾತ್ರೆ. ಇದೇ ಹೆಸರು ಬಳಸಿಕೊಂಡು ಆರೋಪಿ, ‘ಎಕ್ಸ್‌’ನಲ್ಲಿ ಖಾತೆ ತೆರೆದಿದ್ದ. ‘ಭಿಕುಮಾತ್ರೆ (ಮೋದಿ ಫ್ಯಾಮಿಲಿ)’ ಎಂಬುದಾಗಿ ಬರೆದುಕೊಂಡಿದ್ದ. ಇದೇ ಖಾತೆಯಲ್ಲಿಯೇ ಏಪ್ರಿಲ್ 22ರಂದು ಸುಳ್ಳು ಪೋಸ್ಟ್ ಪ್ರಕಟಿಸಿದ್ದ.’

ADVERTISEMENT

‘ಹಿಂದೂ–ಮುಸ್ಲಿಂ ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡುವ ಹಾಗೂ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಉದ್ದೇಶ ಪೋಸ್ಟ್‌ನಲ್ಲಿರುವುದಾಗಿ ದೂರುದಾರರು ಆರೋಪಿಸಿದ್ದರು. ಜತೆಗೆ, ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ತರುವ ಕೃತ್ಯವೆಂದು ದೂರಿದ್ದರು’ ಎಂದು ಪೊಲೀಸರು ಹೇಳಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ತಿರುಚಿ ವಿಡಿಯೊ ಸೃಷ್ಟಿಸಿದ್ದ ಆರೋಪಿ, ಅದನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದ್ದ. ವಿಡಿಯೊ ಎಲ್ಲೆಡೆ ಹರಿದಾಡುತ್ತಿದ್ದಂತೆ, ಹೆದರಿ ಅಳಿಸಿ ಹಾಕಿದ್ದನೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದರು.

‘ಗೋವಾದ ವಿನೀತ್, ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದನೆಂದು ಗೊತ್ತಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಕೋರಲಾಗುವುದು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.