ಬೆಂಗಳೂರು: ಇಲ್ಲಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆಯ (ಐಎಸ್‌ಇಸಿ) ಜನಸಂಖ್ಯಾ ಸಂಶೋಧನಾ ಕೇಂದ್ರವು ಫೆ.23ರಿಂದ ರಾಜ್ಯದಲ್ಲಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್–6) ಕೈಗೊಳ್ಳಲಿದೆ.
ಈ ಸಂಬಂಧ ಸಂಸ್ಥೆಯು 105 ಕ್ಷೇತ್ರ ಪರಿವೀಕ್ಷಕರಿಗೆ ತರಬೇತಿ ಪ್ರಾರಂಭಿಸಿದೆ. ಈ ತರಬೇತಿಯು ಫೆ.21ರವರೆಗೆ ನಡೆಯಲಿದೆ. ಬಳಿಕ ಮೂರರಿಂದ ನಾಲ್ಕು ತಿಂಗಳ ಅವಧಿಯಲ್ಲಿ ಮುಖ್ಯ ಸಮೀಕ್ಷೆ ನಡೆಯಲಿದೆ.
ನಗರದಲ್ಲಿ ಸಂಸ್ಥೆ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಚಾಲನೆ ನೀಡಿ, ಮಾತನಾಡಿದರು. ‘ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ನೀತಿಗಳನ್ನು ರೂಪಿಸಲು ಈ ಸಮೀಕ್ಷೆ ಸಹಕಾರಿಯಾಗಲಿದೆ. ಇದು ಮಹತ್ವದ ಸಮೀಕ್ಷೆಯಾಗಿದ್ದು, ಜನರ ಆರೋಗ್ಯದ ಸ್ಥಿತಿಗತಿಯೂ ತಿಳಿಯಲಿದೆ. ಈವರೆಗೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 5 ಸುತ್ತುಗಳಲ್ಲಿ ನಡೆದಿದೆ. 6ನೇ ಸುತ್ತಿನ ಸಮೀಕ್ಷೆಯನ್ನು ಈಗ ಕೈಗೊಳ್ಳಲಾಗಿದೆ’ ಎಂದು ಹೇಳಿದರು.
ಸಮೀಕ್ಷೆಯ ಯೋಜನಾ ನಿರ್ದೇಶಕ ಡಾ.ಸಿ.ಎಂ. ಲಕ್ಷ್ಮಣ, ‘ಇದೇ ಮೊದಲ ಬಾರಿಗೆ ಕರ್ನಾಟಕವನ್ನು ಉತ್ತರ ಮತ್ತು ದಕ್ಷಿಣವೆಂದು ವಿಂಗಡಿಸಿ, ಸಮೀಕ್ಷೆ ನಡೆಸಲಾಗುತ್ತಿದೆ. ಉತ್ತರ ಭಾಗವನ್ನು ಗೋವಾಕ್ಕೆ ಸೇರ್ಪಡೆ ಮಾಡಲಾಗಿದೆ. ಸಮೀಕ್ಷೆಯಲ್ಲಿ ನೀರು, ನೈರ್ಮಲ್ಯ, ಅಡುಗೆ ಎಣ್ಣೆ, ಕೈತೊಳೆಯುವ ವ್ಯವಸ್ಥೆ ಸೇರಿ ಕುಟುಂಬಕ್ಕೆ ಸಂಬಂಧಿಸಿದ ವಿವಿಧ ಮಾಹಿತಿ ಹಾಗೂ ವೈಯಕ್ತಿಕ ಆರೋಗ್ಯ ಮಾಹಿತಿ ಸಂಗ್ರಹಿಸಲಾಗುತ್ತದೆ’ ಎಂದು ತಿಳಿಸಿದರು.
‘ರಾಜ್ಯದಲ್ಲಿ 26,400 ಕುಟುಂಬಗಳು ಸಮೀಕ್ಷೆಗೆ ಒಳಪಡಲಿವೆ. ಅವುಗಳಲ್ಲಿ ದಕ್ಷಿಣ ಕರ್ನಾಟಕ ವ್ಯಾಪ್ತಿಗೆ 15 ಜಿಲ್ಲೆಗಳಿಂದ 13,200 ಕುಟುಂಬಗಳು ಬರಲಿವೆ’ ಎಂದು ಹೇಳಿದರು.
‘ತಾಯಂದಿರ ಹಾಗೂ ಶಿಶು ಮರಣ, ಅಪೌಷ್ಟಿಕತೆ ಮತ್ತು ರಕ್ತ ಹೀನತೆ ತಗ್ಗಿಸಲು ಸಹ ಈ ಸಮೀಕ್ಷೆ ಪೂರಕವಾಗಲಿದೆ. ಈ ಸಮೀಕ್ಷೆಯು ರಾಜ್ಯದ ಜನರ ಆರೋಗ್ಯ ಸ್ಥಿತಿಗತಿಯನ್ನು ಸೂಚಿಸಲಿದೆ. ಆದ್ದರಿಂದ ಜನರು ಅಗತ್ಯ ಮಾಹಿತಿ ಒದಗಿಸಬೇಕು. ಕ್ಷೇತ್ರ ಪರಿವೀಕ್ಷಕರಿಗೆ ತರಬೇತಿ ಪೂರ್ಣಗೊಳಿಸಿದ ಬಳಿಕ ಮುಖ್ಯ ಸಮೀಕ್ಷೆ ಕೈಗೊಳ್ಳಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.