ADVERTISEMENT

ಅಂತಃಕರಣ ನೆನೆದ ಒಡನಾಡಿಗಳು: ಅಭಿಮಾನಿಗಳಿಂದ ಅಂತಿಮ ನಮನ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2018, 9:01 IST
Last Updated 31 ಡಿಸೆಂಬರ್ 2018, 9:01 IST
   

ಬೆಂಗಳೂರು:‘ಲೋಕನಾಥ್ ಸಿನಿಮಾಗೆ ಬರುವ ಸಂದರ್ಭದಲ್ಲಿಯೇ ಪ್ರಬುದ್ಧ ನಟನಾಗಿದ್ದರು. ಹಾಗಾಗಿ ಅವರನ್ನು ಯಾರೂ ಲೋಕನಾಥ್ ಅಂತ ಕರೆಯುತ್ತಿರಲಿಲ್ಲ. ಅಂಕಲ್ ಅಂತಲೇ ಕರೆಯುತ್ತಿದ್ದರು’ ಎಂದು ನೆನಪಿಸಿಕೊಂಡರು ನಿರ್ದೇಶಕ ಭಾರ್ಗವ.

‘ಭೂತಯ್ಯನ ಮಗ ಅಯ್ಯು, ಗುರು ಶಿಷ್ಯರು, ನಾ ನಿನ್ನ ಮರೆಯಲಾರೆ, ಮಿಂಚಿನ ಓಟ ಚಿತ್ರಗಳಲ್ಲಿ ಅವರ ಪಾತ್ರ ಮರೆಯಲು ಸಾಧ್ಯವಿಲ್ಲ. ಸಾಹುಕಾರನ ಪಾತ್ರವಾಗಲಿ, ಭಿಕ್ಷುಕನ ಪಾತ್ರವಾಗಲಿ ಅವರು ಸಮರ್ಥವಾಗಿ ನಿರ್ವಹಿಸುತ್ತಿದ್ದರು. ಅವರ ಪಾತ್ರಗಳ ಮೂಲಕ ಸದಾ ನೆನಪಿನಲ್ಲಿ ಇರುತ್ತಾರೆ’ ಎಂದು ಅವರು ನೆನಪು ಮೊಗೆದರು

ಹಲವು ಸಿನಿಮಾಗಳಲ್ಲಿ ಲೋಕನಾಥ್ ಜೊತೆಗೆ ಬಣ್ಣ ಹಚ್ಚಿದ್ದ ದ್ವಾರಕೀಶ್, ’ಅವರಂಥ ದೊಡ್ಡ ನಟ ಅಪರೂಪ‘ ಎಂದು ಬಣ್ಣಿಸಿದರು.

ADVERTISEMENT

’ಸಿಂಗಪುರದಲ್ಲಿ ರಾಜಾ ಕುಳ್ಳ ಸಿನಿಮಾ ಮಾಡದಾಗ ಒಂದು ತಿಂಗಳು ಸಿಂಗಪುರದಲ್ಲಿ ಒಟ್ಟಿಗೆ ಇದ್ದೆವು. ಕಿಟ್ಟು ಪುಟ್ಟು ಚಿತ್ರದಲ್ಲಿ ನನ್ನ ತಂದೆ ಪಾತ್ರ ಮಾಡಿದ್ದರು. ಅವರಂಥ ದೊಡ್ಡ ನಟ ತುಂಬ ಅಪರೂಪ. ಶೂಟಿಂಗ್‌ಗೆ ಸರಿಯಾದ ಸಮಯಕ್ಕೆ ಬರುತ್ತಿದ್ದರು. ಅವರು ಡೈಲಾಗ್ ಡೆಲಿವರಿ ಮಾಡುವ ರೀತಿಯೇ ಸೊಗಸಾಗಿತ್ತು. ನನ್ನ ಇಡೀ ಕುಟುಂಬಕ್ಕೆ ಅವರು ತಂದೆಯಂತೆ ಇದ್ದರು. ನಮ್ಮ ಮನೆ ಊಟ ಅಂದರೆ ಬಳ ಪ್ರೀತಿ ಅವರಿಗೆ. ಅವರು ತೀರಿಕೊಂಡಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ‘ ಎಂದರು ದ್ವಾರಕೀಶ್.

ಸಂಕ್ರಾಂತಿ ಮೂಲಕ ಪರಿಚಯ

ನನ್ನ ಕಥೆ ಆದರಿಸಿದ ಸಂಕ್ರಾಂತಿ ಚಿತ್ರದ ಮೂಲಕ ಲೋಕನಾಥ್ ನನಗೆ ಪರಿಚಯವಾದರು. ಸಿದ್ಧಲಿಂಗಯ್ಯ, ಪುಟ್ಟಣ್ಣ ಕಣಗಾಲ್ ಚಿತ್ರಗಳಲ್ಲಿನ ಅವರ ಪಾತ್ರ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂಥದ್ದು. ಅವರಿಗೆ ಅತ್ಯಂತ ಹೃದಯಪೂರ್ವಕ ವಿದಾಯ ಅರ್ಪಿಸುತ್ತೇನೆ ಎಂದುವಾಣಿಜ್ಯ ಮಂಡಳಿ ಅಧ್ಯಕ್ಷನಾಗತಿಹಳ್ಳಿ ಚಂದ್ರಶೇಖರ್ ನುಡಿದರು.

ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು

ಬಹಳ ಒಳ್ಳೆಯ ನಟ, ಶಿಸ್ತಿನ ವ್ಯಕ್ತಿ. ಸಹಕಲಾವಿದರನ್ನು ಮನೆಯವರ ಥರ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಒಳ್ಳೇ ಜೀವನ ನಡೆಸಿದರು, ಒಳ್ಳೆಯ ಸಿನಿಮಾಗಳನ್ನೂ ಮಾಡಿದರು ಎಂದು ನಟಿಭಾರ್ಗವಿ ನಾರಾಯಣ ನೆನಪಿಸಿಕೊಂಡರು.

ಶ್ರೇಷ್ಠನಟ

ಕನ್ನಡ ಚಿತ್ರರಂಗ ಮಾತ್ರ ಅಲ್ಲ, ಭಾರತೀಯ ಚಿತ್ರರಂಗದಲ್ಲಿಯೇ ಲೋಕನಾಥ್ ಶ್ರೇಷ್ಠ ನಟರು. ಇತ್ತೀಚೆಗಷ್ಟೇ ನಾಗರಹಾವು ಹೊಸ ಅವತಾರದಲ್ಲಿ ಬಂದಿತ್ತು. ಅದರಲ್ಲಿ ವಿಷ್ಣುವರ್ದನ್ ನಾಯಕ. ಲೋಕನಾಥ್ ಪೋಷಕ ಕಲಾವಿದರಾಗಿದ್ದರು. ಆದರೆ ಇಂದು ಅಂಬರೀಷ್, ಲೋಕನಾಥ್ ಇಬ್ಬರೂ ಇಲ್ಲ. ಚಿತ್ರರಂಗಕ್ಕೆ ಬರುವ ಮುಂಚೆಯೇ ರಂಗಭೂಮಿಯಲ್ಲಿ ಲೋಕನಾಥ್ ಅಂಕಲ್ ನನಗೆ ಪರಿಚಯವಾಗಿದ್ದರು. ಅವರು ಒಳಗೆ ಹೊರಗೆ ಎರಡೂ ಒಂದೇ ಥರ ಇದ್ದ ಮನುಷ್ಯ ಎಂದು ನಟ ಸುಂದರ್‌ರಾಜ್ ಭಾವುಕರಾದರು.

ಮಿಸ್ ಮಾಡಿಕೊಳ್ತೀನಿ

‘ಲೋಕನಾಥ್ನಮಗೆಲ್ಲ ಹಿರಿಯರಾಗಿದ್ದರು,ಮಾರ್ಗದರ್ಶಕರಾಗಿದ್ದರು. ಅವರ ಬಳಿ ಕೂತು ತುಂಬ ಕತೆಗಳನ್ನು ಕೇಳುತ್ತಿದ್ದೆವು. ಅವರ ಮಾತುಗಳನ್ನು ಮಿಸ್ ಮಾಡಿಕೊಳ್ಳುತ್ತೇವೆ’ ಎಂದರು ನಟಿ ಭಾರತಿ ವಿಷ್ಣುವರ್ದನ್.

ಕಲಾವಿದನಿಗೆ ಸಾವಿಲ್ಲ

ಲೋಕನಾಥ್ ಅಂಕಲ್ ನನಗೆ ಮೂವತ್ತೈದು ವರ್ಷದಿಂದ ಪರಿಚಯ. ಸಾಕಷ್ಟು ಚಿತ್ರಗಲ್ಲಿ ಒಟ್ಟಿಗೆ ಅಭಿನಯಿಸಿದ್ದೇವೆ. ಇಂದು ಅವರು ಕಾಲದ ಕರೆಗೆ ತಿರುಗಿ ಹೋಗಿದ್ದಾರೆ. ಅವರು ಬಿಟ್ಟು ಹೋದಂಥ ಕಲಾಬದುಕಿನ ಪಾತ್ರಗಳು ಜನಮಾನಸದಲ್ಲಿ ಅಮರವಾಗಲಿ. ಕಲಾವಿದನಿಗೆ ಸಾವಿಲ್ಲ ಎಂದು ನಟ ಜಗ್ಗೇಶ್ ಪ್ರತಿಕ್ರಿಯಿಸಿದರು.

ಒಡನಾಟದ ಅನುಭವ ಶಾಶ್ವತ

ನಾವೆಲ್ಲರೂ ಅವರನ್ನು ಲೋಕನಾಥ್ ಅಂಕಲ್ ಅಂತ್ಲೇ ಕರೀತಿದ್ವಿ. ಅವರು ನಮ್ಮನ್ನು ಅಗಲಿರಬಹುದು. ಆದರೆ ಅವರ ಅನುಭವ ನಮ್ಮನ್ನು ಬಿಟ್ಟುಹೋಗಿಲ್ಲ. ನಮ್ಮ ತಂದೆಯ ಜತೆಯಲ್ಲಿಯೇ ಇಳಿದ ನಟ ಅವರು. ಅವರು ಒಂದು ಚಿತ್ರದಲ್ಲಿ ಪಾತ್ರ ಮಾಡಿದರೆ ನಾಯಕನಷ್ಟೇ ಅದಕ್ಕೆ ಮಹತ್ವ ಬರುತ್ತಿತ್ತು. ವರ್ಷದ ಅಂತ್ಯದಲ್ಲಿ ಅವರು ನಮ್ಮನ್ನು ಬಿಟ್ಟು ಹೋಗಿದ್ದು ದುರಂತ. ಅವರ ದೇಹ ಇಲ್ಲ ಎಂದು ಹೇಳಬೇಕಷ್ಟೆ; ಅವರು ಇಲ್ಲ ಎಂದ ಹೇಳಲು ಸಾಧ್ಯವೇ ಇಲ್ಲ. ಅವರ ಕೆಲಸ, ತತ್ವ ಎಲ್ಲವೂ ನಮ್ಮ ಜತೆಗಿರುತ್ತವೆ. ಅವುಗಳನ್ನು ಸಾಧ್ಯವಾದಷ್ಟೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುತ್ತೇವೆ ಎಂದು ನಟ ರಾಘವೇಂದ್ರ ರಾಜ್‌ಕುಮಾರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.