ADVERTISEMENT

ಬೆಂಗಳೂರು | ನಗರದ ಮಕ್ಕಳಿಗೆ ಕೃಷಿ ಪ್ರವಾಸ: ಸಚಿವ ಎಚ್.ಕೆ. ಪಾಟೀಲ

ಜೀವ ಚೈತನ್ಯ ಕೃಷಿ ಕಾರ್ಯಾಗಾರದಲ್ಲಿ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಮಾಹಿತಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 15:19 IST
Last Updated 22 ಅಕ್ಟೋಬರ್ 2024, 15:19 IST
ಜೀವ ಚೈತನ್ಯ ಕೃಷಿ ಪದ್ಧತಿಯಲ್ಲಿ ಬೆಳೆದ ತರಕಾರಿಯನ್ನು ಎಚ್.ಕೆ. ಪಾಟೀಲ ವೀಕ್ಷಿಸಿದರು. ಎಸ್.ಜಿ. ಸಿದ್ಧರಾಮಯ್ಯ, ಗ್ರೀನ್ ಪಾಥ್ ಸಂಸ್ಥೆಯ ಸಂಸ್ಥಾಪಕ ಎಚ್‌.ಆರ್. ಜಯರಾಮ್, ಬಿಡಿಎಐ ಸಂಸ್ಥೆಯ ಕಾರ್ಯದರ್ಶಿ ಮಹೇಶ್ ಮೆಲ್ವಿನ್‌ ಉಪಸ್ಥಿತರಿದ್ದರು – ಪ್ರಜಾವಾಣಿ ಚಿತ್ರ 
ಜೀವ ಚೈತನ್ಯ ಕೃಷಿ ಪದ್ಧತಿಯಲ್ಲಿ ಬೆಳೆದ ತರಕಾರಿಯನ್ನು ಎಚ್.ಕೆ. ಪಾಟೀಲ ವೀಕ್ಷಿಸಿದರು. ಎಸ್.ಜಿ. ಸಿದ್ಧರಾಮಯ್ಯ, ಗ್ರೀನ್ ಪಾಥ್ ಸಂಸ್ಥೆಯ ಸಂಸ್ಥಾಪಕ ಎಚ್‌.ಆರ್. ಜಯರಾಮ್, ಬಿಡಿಎಐ ಸಂಸ್ಥೆಯ ಕಾರ್ಯದರ್ಶಿ ಮಹೇಶ್ ಮೆಲ್ವಿನ್‌ ಉಪಸ್ಥಿತರಿದ್ದರು – ಪ್ರಜಾವಾಣಿ ಚಿತ್ರ    

ಬೆಂಗಳೂರು: ‘ನಗರದ ಮಕ್ಕಳಿಗೆ ಕೃಷಿ ಚಟುವಟಿಕೆಗಳನ್ನು ಪರಿಚಯಿಸಲು ಕೃಷಿ ಪ್ರವಾಸೋದ್ಯಮ ಪ್ರಾರಂಭಿಸಲಾಗುವುದು’ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ಬಯೋಡೈನಾಮಿಕ್ ಅಸೋಸಿಯೇಷನ್‌ ಆಫ್‌ ಇಂಡಿಯಾ (ಬಿಡಿಎಐ) ಸಂಸ್ಥೆಯು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 25ನೇ ವಾರ್ಷಿಕೋತ್ಸವ ಹಾಗೂ ಜೀವ ಚೈತನ್ಯ ಕೃಷಿ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದರು. 

‘ಟೊಮೆಟೊ, ಎಲೆಕೋಸು ಸೇರಿ ವಿವಿಧ ತರಕಾರಿಗಳನ್ನು ಹೇಗೆ ಬೆಳೆಯಲಾಗುತ್ತದೆ ಎನ್ನುವುದು ಬೆಂಗಳೂರಿನ ಮಕ್ಕಳಿಗೆ ತಿಳಿದಿಲ್ಲ. ಹಳ್ಳಿಗಳನ್ನು ನೋಡದಿರುವುದೇ ಇದಕ್ಕೆ ಕಾರಣ. ಆದ್ದರಿಂದ ಕೃಷಿ ಚಟುವಟಿಕೆಯ ಅನುಭವ ಒದಗಿಸಲು ಮಕ್ಕಳನ್ನು ಸಮೀಪದ ತೋಟಗಳಿಗೆ ಕರೆದೊಯ್ಯಲಾಗುತ್ತದೆ. ತರಕಾರಿ ಹಾಗೂ ಹಣ್ಣುಗಳನ್ನು ಕೀಳಲು ಅವಕಾಶಗಳನ್ನೂ ನೀಡಲಾಗುತ್ತದೆ. ಜೀವ ಚೈತನ್ಯ ಕೃಷಿ ಮಾಡುತ್ತಿರುವವರು ಬಯಸಿದಲ್ಲಿ ಅವರ ತೋಟಗಳಿಗೂ ಮಕ್ಕಳನ್ನು ಕರೆತರಲಾಗುತ್ತದೆ. ಇದರಿಂದ ಜೀವ ಚೈತನ್ಯ ಕೃಷಿ ಜನಪ್ರಿಯವಾಗುವ ಜೊತೆಗೆ ಈ ಕೃಷಿ ಉತ್ಪನ್ನಗಳ ಮಾರಾಟವೂ ಹೆಚ್ಚಲಿದೆ’ ಎಂದರು. 

ADVERTISEMENT

‘ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ಕಡಿಮೆ ಮಾಡುವುದು ಸವಾಲಾಗಿದೆ. ರಾಸಾಯನಿಕ, ಆಧುನಿಕ ಕೃಷಿಗೆ ಪರ್ಯಾಯವಾಗಿ ರಾಸಾಯನಿಕ ಮುಕ್ತ ಕೃಷಿ ಪದ್ಧತಿ ಅನುಸರಿಸಿ, ಸ್ಪರ್ಧೆ ಒಡ್ಡಬೇಕು. ಆಗ ಜನರು ಜೀವ ಚೈತನ್ಯ ಕೃಷಿಯಂತಹ ಪದ್ಧತಿ ಕಡೆಗೆ ನೋಡುತ್ತಾರೆ. ಈಗ ಸಾವಯವ ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ದೊರೆಯುತ್ತಿದೆ. 2004ರಲ್ಲಿ ಸಾವಯವ ಕೃಷಿ ನೀತಿ ಅನುಷ್ಠಾನ ಮಾಡಲಾಯಿತು. ಈ ನೀತಿಯನ್ನು ಮುಂದೆ ತೆಗೆದುಕೊಂಡು ಹೋಗಬೇಕಿದ್ದು, ಜೀವ ಚೈತನ್ಯ ಕೃಷಿಗೂ ನೀತಿ ರೂಪಿಸಬೇಕಿದೆ. ಈ ಕೃಷಿ ಪದ್ಧತಿ ಜನಪ್ರಿಯಗೊಳಿಸಲು ಮಠಗಳು, ದೇವಸ್ಥಾನಗಳನ್ನೂ ಬಳಸಿಕೊಳ್ಳಬೆಕು’ ಎಂದು ಹೇಳಿದರು.

ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ, ‘ನಮಗೆ ಇರುವುದು ಒಂದೇ ಭೂಮಿ. ಅದಕ್ಕೆ ವಿಷ ಉಣಿಸಿ, ಕಳೆದುಕೊಂಡರೆ ವಾಸಕ್ಕೆ ಭೂಮಿ ಇರುವುದಿಲ್ಲ. ಈ ಭೂಮಿಗೆ ಎಲ್ಲ ಜೀವರಾಶಿಗಳು ವಾರಸುದಾರರಾಗಿದ್ದರೆ. ಕೃಷಿ ಸಂಸ್ಕೃತಿ ಪ್ರಕೃತಿಗೆ ವಿರುದ್ಧವಾಗಬಾರದು. ಸಾಂಪ್ರದಾಯಿಕ ಕೃಷಿಯನ್ನು ಆಯಾ ನೆಲಮೂಲಕ್ಕೆ ಅನುಗುಣವಾಗಿ ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಈಗ ಮಲೆನಾಡು ಪ್ರದೇಶದ ಬೆಳೆಯನ್ನು ಬಯಲುಸೀಮೆಯಲ್ಲಿ ಬೆಳೆಯಲಾಗುತ್ತಿದೆ. ರೈತರನ್ನು ಹಾದಿ ತಪ್ಪಿಸುವ ರೀತಿ ಪ್ರಯೋಗಗಳನ್ನು ಮಾಡಲಾಗುತ್ತಿದೆ. ದುರಾಸೆಯ ಕೃಷಿ ಪ್ರಯೋಗದಿಂದ ಸಾಲ ಹೆಚ್ಚಾಗಿ, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು. 

ಬೆಳಿಗ್ಗೆಯಿಂದ ಸಂಜೆವರೆಗೆ ನಡೆದ ಕಾರ್ಯಾಗಾರದಲ್ಲಿ ಜೀವ ಚೈತನ್ಯ ಕೃಷಿ ಬಗ್ಗೆ ಚರ್ಚಿಸಲಾಯಿತು. ಈ ಕೃಷಿ ಪದ್ಧತಿ ಹಾಗೂ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಮತ್ತು ತಯಾರಿಸಿದ ಕೃಷಿ ಉತ್ಪನ್ನಗಳು ಇದ್ದವು.

‘ಮಣ್ಣಿನ ಆರೋಗ್ಯ ವೃದ್ಧಿ’ 

‘ಜೀವ ಚೈತನ್ಯ ಕೃಷಿ ನೂರು ವರ್ಷಗಳ ಕಲ್ಪನೆಯಾಗಿದೆ. ಇದನ್ನು ರುಡಾಲ್ಫ್ ಸ್ಟೈನರ್ ಎನ್ನುವವರು ಪರಿಚಯಿಸಿದ್ದರು. ಮಣ್ಣು ಮತ್ತು ಇಡೀ ಬ್ರಹ್ಮಾಂಡದ ಜತೆಗೆ ಸಸ್ಯಗಳು ಹೇಗೆ ವ್ಯವಹರಿಸುತ್ತವೆ ಎನ್ನುವುದನ್ನು ಈ ಪದ್ಧತಿಯಲ್ಲಿ ಕಾಣಬಹುದು. ರಾಸಾಯನಿಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ನಾಶವಾಗಿ ಉತ್ಪಾದನೆಯೂ ಕುಂಠಿತವಾಗುತ್ತದೆ. ರಾಸಾಯನಿಕಯುಕ್ತ ಕೃಷಿ ಉತ್ಪನ್ನಗಳ ಸೇವನೆಯಿಂದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಜೀವ ಚೈತನ್ಯ ಕೃಷಿ ಪದ್ಧತಿಯು ಭೂಮಿಯ ಹಾಗೂ ನಮ್ಮ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದೆ’ ಎಂದು ಬಯೋಡೈನಾಮಿಕ್ ಅಸೋಸಿಯೇಷನ್‌ ಆಫ್‌ ಇಂಡಿಯಾ ಸಂಸ್ಥೆ ಅಧ್ಯಕ್ಷ ಕೆ. ಚಂದ್ರಶೇಖರನ್ ತಿಳಿಸಿದರು.  ‘ಕರ್ನಾಟಕದಲ್ಲಿ ಈ ಕೃಷಿ ಪದ್ಧತಿಗೆ ಆದ್ಯತೆ ನೀಡಬೇಕು. ಇದಕ್ಕೆ ರಾಜ್ಯ ಸರ್ಕಾರದ ಸಹಕಾರ ಅಗತ್ಯ. ಈ ಪದ್ಧತಿ ಮಾಡಲು ಇಚ್ಛಿಸುವವರಿಗೆ ಸಂಸ್ಥೆಯು ಅಗತ್ಯ ಮಾರ್ಗದರ್ಶನ ನೀಡಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.