ಬೆಂಗಳೂರು: ‘ಪೆರಿಫೆರಲ್ ವರ್ತುಲ ರಸ್ತೆ (ಪಿಆರ್‌ಆರ್) ಯೋಜನೆಯಡಿ ಸ್ವಾಧೀನ ಪಡೆಯುವ ಭೂಮಿಗೂ 2013ರ ಕೇಂದ್ರ ಸರ್ಕಾರದ ಭೂಸ್ವಾಧೀನ ಮತ್ತು ಪುನರ್ವಸತಿ ಕಾಯ್ದೆಯಡಿ ಪರಿಹಾರ ನೀಡಬೇಕು. ಇಲ್ಲದಿದ್ದರೆ, ಯೋಜನೆಯನ್ನೇ ಕೈಬಿಡಬೇಕು’ ಎಂದು ಪಿಆರ್‌ಆರ್ ರೈತ ಹಾಗೂ ನಿವೇಶನದಾರರ ಸಂಘ ಸೋಮವಾರ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮಾವಳಿಪುರ ಬಿ.ಶ್ರೀನಿವಾಸ್, ‘ಬೆಂಗಳೂರಿನ ಉತ್ತರ ಭಾಗದಲ್ಲಿರುವ 65 ಕಿ.ಮೀ. ವರ್ತುಲ ರಸ್ತೆ ಅಭಿವೃದ್ಧಿಗೆ ಬಿಡಿಎ 2005ರಲ್ಲಿ ಬಿಡಿಎ ಯೋಜನೆ ರೂಪಿಸಿದ್ದು, 1,810 ಎಕರೆ ಭೂಮಿ ಸ್ವಾಧೀನಕ್ಕಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಈವರೆಗೆ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಈ ಕುರಿತು ಬಿಡಿಎ ಮತ್ತು ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದರೂ ರೈತರಿಗೆ ಪರಿಹಾರ ಕುರಿತಂತೆ ತೀರ್ಮಾನ ಕೈಗೊಂಡಿಲ್ಲ’ ಎಂದು ಆರೋಪಿಸಿದರು.
‘ಸದ್ಯ ಇಲ್ಲಿ ಎಕರೆ ಜಮೀನಿಗೆ ಮಾರುಕಟ್ಟೆಯಲ್ಲಿ ₹10 ಕೋಟಿಯಿಂದ ₹14 ಕೋಟಿವರೆಗೆ ಬೆಲೆ ಇದೆ. ಯೋಜನೆಗೆ ಜಮೀನು ನೀಡಲು ಸಿದ್ಧರಿದ್ದೇವೆ. 2013ರ ಕಾಯ್ದೆಯಡಿ ಬೆಲೆ ನಿಗದಿಪಡಿಸಿ ಪರಿಹಾರ ನೀಡಬೇಕು ಅಥವಾ ಯೋಜನೆ ಕೈಬಿಟ್ಟು, ಜಮೀನುದಾರರು, ನಿವೇಶನದಾರರಿಗೆ ಎನ್‌ಒಸಿ ನೀಡುವ ಬಗ್ಗೆ ತೀರ್ಮಾನ ಮಾಡಬೇಕು‘ ಎಂದು ಒತ್ತಾಯಿಸಿದರು.
‘ಈ ಬಗ್ಗೆ ಮುಖ್ಯಮಂತ್ರಿ ಸೇರಿ ಎಲ್ಲ ಸಚಿವರಿಗೆ ಮನವಿ ಮಾಡಲಾಗುವುದು’ ಎಂದು ತಿಳಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ರಘು, ಉಪಾಧ್ಯಕ್ಷರಾದ ಗೌತಮ್ ಚಂದ್, ಗೋವಿಂದರಾಜು, ಜಂಟಿ ಕಾರ್ಯದರ್ಶಿ ಗೋಪಾಲ ರೆಡ್ಡಿ, ವೆಂಕಟೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.