ADVERTISEMENT

ಉದ್ಯಮಕ್ಕೆ ಪೂರಕ ವಾತಾವರಣ: ಸಹನಾ ಬಾಳ್ಕಲ್

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 16:08 IST
Last Updated 7 ಅಕ್ಟೋಬರ್ 2024, 16:08 IST
ಹವ್ಯಕ ಸಮಾಜದ ಉದ್ಯಮಿಗಳನ್ನು ‘ಹವ್ಯಕ ಉದ್ಯಮಿಗಳು ಹಾಗೂ ಕೈಗಾರೋದ್ಯಮಿಗಳ ಸಮಾವೇಶ’ದಲ್ಲಿ ಸನ್ಮಾನಿಸಲಾಯಿತು
ಹವ್ಯಕ ಸಮಾಜದ ಉದ್ಯಮಿಗಳನ್ನು ‘ಹವ್ಯಕ ಉದ್ಯಮಿಗಳು ಹಾಗೂ ಕೈಗಾರೋದ್ಯಮಿಗಳ ಸಮಾವೇಶ’ದಲ್ಲಿ ಸನ್ಮಾನಿಸಲಾಯಿತು   

ಬೆಂಗಳೂರು: ‘ದೇಶದಲ್ಲಿ ಉದ್ಯಮಕ್ಕೆ ಉತ್ತಮ ವಾತಾವರಣ ಹಾಗೂ ಬೆಂಬಲ ಇದೆ. ತೆರಿಗೆ ವ್ಯವಸ್ಥೆಯನ್ನು ಸರಳೀಕರಣ ಮಾಡಲಾಗುತ್ತಿದೆ, ಇಂಥ ಅವಕಾಶವನ್ನು ಬಳಸಿಕೊಂಡು ಉದ್ಯಮಗಳನ್ನು ಯಶಸ್ವಿಯಾಗಿ ಬೆಳೆಸಬಹುದು ಎಂದು ಜಿಎಸ್‌ಟಿ ಉಪ ಆಯುಕ್ತೆ ಸಹನಾ ಬಾಳ್ಕಲ್ ಹೇಳಿದರು.

ಇಲ್ಲಿನ ಹವ್ಯಕ ಭವನದಲ್ಲಿ ಭಾನುವಾರ ಅಖಿಲ‌ ಹವ್ಯಕ ಮಹಾಸಭೆ ಹಮ್ಮಿಕೊಂಡಿದ್ದ ‘ಹವ್ಯಕ ಉದ್ಯಮಿಗಳು ಹಾಗೂ ಕೈಗಾರೋದ್ಯಮಿಗಳ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.

ಸಹಜವಾಗಿ ಪರಿಸರದ ಪರಿಚಯ ಇರುವ ಮತ್ತು ವಿಶಿಷ್ಟ ಆಹಾರ ಸಂಸ್ಕೃತಿ ಹೊಂದಿರುವ ಹವ್ಯಕರು ಪರಿಸರ ಪ್ರವಾಸೋದ್ಯಮ ಹಾಗೂ ಹವ್ಯಕ ಆಹಾರೋದ್ಯಮಗಳನ್ನು ಸ್ಥಾಪಿಸಲು ಯೋಚಿಸಬಹುದು ಎಂದು ಸಲಹೆ ನೀಡಿದರು.

ADVERTISEMENT

ಮಹಾಸಭೆಯ ಅಧ್ಯಕ್ಷ ಗಿರಿಧರ ಕಜೆ ಮಾತನಾಡಿ, ‘ಡಿಸೆಂಬರ್ 27, 28 ಹಾಗೂ 29ರಂದು ಅರಮನೆ ಮೈದಾನದಲ್ಲಿ ನಡೆಯಲಿದ್ದು, ಪ್ರತಿ ಕ್ಷೇತ್ರದಿಂದ 81 ಸಾಧಕರಂತೆ ಒಟ್ಟು 7 ಕ್ಷೇತ್ರಗಳಿಂದ 567 ಸಾಧಕರನ್ನು ಸನ್ಮಾನಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಗೂಗಲ್ ತಂತ್ರಜ್ಞ ನಾರಾಯಣ ಹೆಗಡೆ, ಟೊಯೊಟಾ ಇಂಡಸ್ಟ್ರೀಸ್‌ ಉಪ ಪ್ರಧಾನ ವ್ಯವಸ್ಥಾಪಕ ಸದಾನಂದ ಹರಿದಾಸ್, ಬಿಸಿನೆಸ್ ಬೈ ಬ್ರಾಹ್ಮಿಣ್ಸ್ (ಬಿಬಿಬಿ) ಸಂಸ್ಥಾಪಕ ಅನಂತ ನಾಗರಾಜ್ ಮಾತನಾಡಿದರು.

ಉದ್ಯಮಿಗಳಾದ ಪ್ರಸನ್ನ ಶಾಸ್ತ್ರಿ, ರಾಮಕೃಷ್ಣ ನಿಸರಾಣಿ, ಲಕ್ಷ್ಮೀನಾರಾಯಣ ಹೆಗಡೆ, ನಾರಾಯಣ ಪ್ರಸನ್ನ ಹಾಗೂ ಕಿರಣ್ ಜಂಬಾನಿ ಅವರನ್ನುಸನ್ಮಾನಿಸಲಾಯಿತು.

ಮಹಾಸಭೆಯ ಉಪಾಧ್ಯಕ್ಷರಾದ ಶ್ರೀಧರ ಭಟ್ ಕೆಕ್ಕಾರು, ಕಾರ್ಯದರ್ಶಿ ಪ್ರಶಾಂತ ಭಟ್ಟ ಮಲವಳ್ಳಿ, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಆದಿತ್ಯ ಹೆಗಡೆ ಕಲಗಾರು, ಸಂಚಾಲಕರಾದ ರಾಮಚಂದ್ರ ಭಟ್ ಕೆಕ್ಕಾರು ಹಾಗೂ ಶ್ರೀರಾಮ ಎಂ.ಎನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.