ADVERTISEMENT

ಕಳ್ಳತನ ಪ್ರಕರಣ | ಬಂಧನ ಭೀತಿ: 15 ದಿನ ಕಾರಿನಲ್ಲಿ ಸುತ್ತಾಡಿದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 16:31 IST
Last Updated 21 ನವೆಂಬರ್ 2024, 16:31 IST
<div class="paragraphs"><p>ಬಂಧನ (ಪ್ರಾತಿನಿಧಿಕ ಚಿತ್ರ)</p></div>

ಬಂಧನ (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ಮನೆ ಮಾಲೀಕರು ತೀರ್ಥಯಾತ್ರೆಗೆ ತೆರಳಿದ್ದ ವೇಳೆ ಮನೆಯಲ್ಲಿದ್ದ ಚಿನ್ನಾಭರಣ, ಕಾರು ಕದ್ದೊಯ್ದಿದ್ದ ಇಬ್ಬರು ಆರೋಪಿಗಳು ಬಂಧನದ ಭೀತಿಯಿಂದ 15 ದಿನ ಕಾರಿನಲ್ಲಿ ಸಾವಿರಾರು ಕಿಲೋ ಮೀಟರ್‌ ಪ್ರಯಾಣ ಮಾಡಿದ್ದರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.  

ಕನಕಪುರ ರಸ್ತೆಯ ರಘುವನಹಳ್ಳಿಯ ದೀಪಕ್‌ ಹಾಗೂ ಪವನ್‌ ಎಂಬುವರನ್ನು ಬಂಧಿಸಿದ್ದ ವಿದ್ಯಾರಣ್ಯಪುರ ಠಾಣೆ ಪೊಲೀಸರು, ಚಿನ್ನಾಭರಣ, ಎರಡು ಕಾರು ಹಾಗೂ ಆರು ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು ₹41.36 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದರು.

ADVERTISEMENT

‘ಕಳ್ಳತನದ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಹುಡುಕಾಟ ಆರಂಭಿಸಲಾಯಿತು. ಹೋಟೆಲ್ ಮತ್ತು ಲಾಡ್ಜ್‌ನಲ್ಲಿ ವಾಸ್ತವ್ಯ ಮಾಡಿದರೆ ಸಿಕ್ಕಿಬೀಳಬಹುದೆಂಬ ಕಾರಣಕ್ಕೆ ಇಬ್ಬರೂ ಹದಿನೈದು ದಿನ ಕಾರಿನಲ್ಲಿ ಸುತ್ತಾಡಿದ್ದಾರೆ. ಸುಮಾರು 12 ಸಾವಿರ ಕಿ.ಮೀ. ಪ್ರಯಾಣಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಇಬ್ಬರೂ ಆರೋಪಿಗಳು ಏಳು ಮನೆಗಳ್ಳತನ ಪ್ರಕರಣ ಹಾಗೂ 13 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಲ್ಲಿ ಭಾಗಿ ಆಗಿರುವುದು ತನಿಖೆ ವೇಳೆ ಗೊತ್ತಾಗಿದೆ. ನಗರದ ಬಡಾವಣೆಗಳಲ್ಲಿ ಸಂಜೆ ವೇಳೆ ತಿರುಗಾಡಿ, ಯಾವ ಮನೆಗಳಲ್ಲಿ ದೀಪ ಉರಿಯುತ್ತಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದರು. ಬಳಿಕ ಬೆಳಗಿನ ಜಾವ ನಾಲ್ಕು ಗಂಟೆಗೆ ಬಂದು, ದೀಪ ಉರಿಯುವ ಮನೆಗಳ ಬೀಗ ಮುರಿದು ನಗದು, ಚಿನ್ನಾಭರಣ ದೋಚುತ್ತಿದ್ದರು. ಕೃತ್ಯದಲ್ಲಿ ಮತ್ತೊಬ್ಬ ವ್ಯಕ್ತಿ ಭಾಗಿಯಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.