ADVERTISEMENT

ಭ್ರೂಣದ ಆರೋಗ್ಯ ವೃದ್ಧಿಗೆ ‘ಎಫ್ಎಂಸಿ’: ವಿರಳ ಕಾಯಿಲೆಗಳ ತಡೆಗೂ ಸಹಕಾರಿ

ವರುಣ ಹೆಗಡೆ
Published 29 ಸೆಪ್ಟೆಂಬರ್ 2024, 23:30 IST
Last Updated 29 ಸೆಪ್ಟೆಂಬರ್ 2024, 23:30 IST
ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ
ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ   

ಬೆಂಗಳೂರು: ಭ್ರೂಣದ ಆರೋಗ್ಯ ವೃದ್ಧಿಯ ಜೊತೆಗೆ ವಿರಳ ಕಾಯಿಲೆಗಳೂ ಸೇರಿದಂತೆ ವಂಶವಾಹಿ ಸಂಬಂಧಿ ಸಮಸ್ಯೆಗಳ ಚಿಕಿತ್ಸೆಗಾಗಿ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ‘ಫೀಟಲ್ ಮೆಡಿಸಿನ್ ಸೆಂಟರ್’ (ಎಫ್‌ಎಂಸಿ) ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿದೆ.

ಸರ್ಕಾರಿ ವ್ಯವಸ್ಥೆಯಡಿ ಕಾರ್ಯಾರಂಭಿಸುವ ಪ್ರಥಮ ಕೇಂದ್ರ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಲಿದೆ. ಭ್ರೂಣದ ಬೆಳವಣಿಗೆ ಮತ್ತು ಆರೋಗ್ಯದ ಮೌಲ್ಯಮಾಪನ, ಭ್ರೂಣ ಕಾಯಿಲೆಗಳ ಪತ್ತೆ, ನಿರ್ವಹಣೆ ಹಾಗೂ ಚಿಕಿತ್ಸೆಗೆ ಈ ಕೇಂದ್ರ ಸಹಕಾರಿಯಾಗಲಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು (ಕೆಪಿಟಿಸಿಎಲ್) ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಅಡಿ ಈ ಕೇಂದ್ರ ನಿರ್ಮಾಣಕ್ಕೆ ₹ 1 ಕೋಟಿ ದೇಣಿಗೆ ನೀಡಿದೆ. ಒಟ್ಟು  1.5 ಕೋಟಿ ವೆಚ್ಚದಲ್ಲಿ ಕೇಂದ್ರ ನಿರ್ಮಾಣವಾಗಲಿದ್ದು, ಅಗತ್ಯ ವೈದ್ಯಕೀಯ ಪರಿಕರಗಳ ಖರೀದಿ ಪ್ರಕ್ರಿಯೆ ನಡೆಯುತ್ತಿದೆ.

ವಂಶವಾಹಿ ಸಂಬಂಧಿ ಸಮಸ್ಯೆಯಿಂದ ಸಿಕಲ್‌–ಸೆಲ್, ಅನೀಮಿಯಾ, ಥಲಸ್ಸೇಮಿಯಾ ಸೇರಿ ವಿವಿಧ ವಿರಳ ಕಾಯಿಲೆಗಳಿಂದ ಬಾಧಿತರಾಗುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಈ ಕಾಯಿಲೆಗಳ ಚಿಕಿತ್ಸಾ ವೆಚ್ಚ ದುಬಾರಿಯಾಗಿರುವುದರಿಂದ ಜೀವನಪೂರ್ತಿ ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದ ಜನನಪೂರ್ವವೇ ಈ ಸಮಸ್ಯೆಗಳನ್ನು ಪತ್ತೆ ಮಾಡಿ, ಚಿಕಿತ್ಸೆ ಒದಗಿಸಲು ಸಂಸ್ಥೆ ಕ್ರಮವಹಿಸಿದೆ.

ADVERTISEMENT

ಶಿಶು ಮರಣ ತಡೆ: 

ಅವಧಿ ಪೂರ್ವ ಜನನ, ಜನ್ಮಜಾತ ಅಂಗವೈಕಲ್ಯ, ಹೃದಯ ಕಾಯಿಲೆ, ನರ ಸಂಬಂಧಿ ಸಮಸ್ಯೆ ಸೇರಿ ವಿವಿಧ ಕಾರಣದಿಂದ ಶಿಶು ಮರಣ ಪ್ರಕರಣಗಳು ವರದಿಯಾಗುತ್ತಲೇ ಇವೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ನಗರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 2,557 ನವಜಾತ ಶಿಶುಗಳು ಮೃತಪಟ್ಟಿವೆ. ಶಿಶು ಮರಣ ತಡೆಗೆ ವಿಶೇಷ ನವಜಾತ ಶಿಶು ಆರೈಕೆ ಘಟಕ, ಕಾಂಗರೂ ಮದರ್‌ ಕೇರ್, ನವಜಾತ ಶಿಶುಗಳ ಆಂಬುಲೆನ್ಸ್ ಸೇವೆ ಸೇರಿ ವಿವಿಧ ಕ್ರಮಗಳನ್ನು ಕೈಗೊಂಡರೂ ನಿರೀಕ್ಷಿತ ಮಟ್ಟದ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಆದ್ದರಿಂದ ಎಫ್‌ಎಂಸಿ ಮೂಲಕ ಭ್ರೂಣಾವಸ್ಥೆಯಿಂದಲೇ ಮೇಲ್ವಿಚಾರಣೆಗೆ ಕ್ರಮಕೈಗೊಳ್ಳಲಾಗಿದೆ. ಇದರಿಂದ ನವಜಾತ ಶಿಶು ಮರಣ ಪ್ರಮಾಣ ತಗ್ಗಿಸಲು ಸಾಧ್ಯ ಎನ್ನುತ್ತಾರೆ ಸಂಸ್ಥೆಯ ವೈದ್ಯರು.   

‘ಗರ್ಭಾವಸ್ಥೆಯ ಮೊದಲ ಮೂರು ತಿಂಗಳ ಒಳಗೆ ಭ್ರೂಣದ ಅಸಹಜತೆ, ಅಂಗ ನ್ಯೂನತೆ, ರಚನಾತ್ಮಕ ಹಾಗೂ ಆನುವಂಶಿಕ ಸಮಸ್ಯೆಗಳು ಸೇರಿ ಒಟ್ಟಾರೆ ಆರೋಗ್ಯವನ್ನು ನಿರ್ಣಯಿಸಲಾಗುತ್ತದೆ. ಅಗತ್ಯ ಇದ್ದಲ್ಲಿ ಭ್ರೂಣಾವಸ್ಥೆಯಲ್ಲಿಯೇ ಚಿಕಿತ್ಸೆ ನೀಡಿ, ಸಮಸ್ಯೆ ಪರಿಹರಿಸಲಾಗುವುದು. ವಿವಿಧ ಸರ್ಕಾರಿ ಆರೋಗ್ಯ ವಿಮೆಯಡಿ ಬಿಪಿಎಲ್ ಕುಟುಂಬದವರಿಗೆ ಕೇಂದ್ರದಲ್ಲಿ ಉಚಿತ ವೈದ್ಯಕೀಯ ಸೇವೆ ಸಿಗಲಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ. ಸಂಜಯ್ ಕೆ.ಎಸ್. ತಿಳಿಸಿದರು.

ಡಾ. ಸಂಜಯ್ ಕೆ.ಎಸ್.
ಫೀಟಲ್‌ ಮೆಡಿಸಿನ್‌ನಲ್ಲಿ ಪರಿಣಿತಿ ಹೊಂದಿದ ವೈದ್ಯರು ನಮ್ಮಲ್ಲಿದ್ದಾರೆ. ಕೇಂದ್ರವನ್ನು ಸಜ್ಜುಗೊಳಿಸಲಾಗುತ್ತಿದ್ದು ಮುಂದಿನ ಎರಡು ತಿಂಗಳಲ್ಲಿ ಕಾರ್ಯಾರಂಭಿಸಲಿದೆ
ಡಾ. ಸಂಜಯ್ ಕೆ.ಎಸ್. ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕ
ಅಂಕಿ–ಅಂಶಗಳು
‘ಆರೋಗ್ಯಯುತ ಮಗುವಿಗೆ ಸಹಕಾರಿ’
‘ಭ್ರೂಣದಲ್ಲಿ ಸರಿಪಡಿಸಲಾಗದ ಗಂಭೀರ ಸ್ವರೂಪದ ಸಮಸ್ಯೆ ಕಂಡು ಬಂದಲ್ಲಿ ಜನಿಸಿದ ಒಂದು ವರ್ಷದೊಳಗೆ ಮಗು ಮರಣ ಹೊಂದುವ ಸಾಧ್ಯತೆಗಳು ಹೆಚ್ಚಿದ್ದ ಸಂದರ್ಭದಲ್ಲಿ ತಾಯಿಯ ಆರೋಗ್ಯಕ್ಕೆ ತೊಂದರೆ ಆಗುವ ಮುನ್ನವೇ ಕಾನೂನು ಅನ್ವಯ ಗರ್ಭಪಾತಕ್ಕೆ ಕೇಂದ್ರ ನೆರವಾಗಲಿದೆ. ಈ ಮೂಲಕ ನ್ಯೂನತೆಯುಳ್ಳ ಶಿಶುಗಳ ಜನನ ಹೆರಿಗೆ ಸಂದರ್ಭದಲ್ಲಿ ಹಾಗೂ ನಂತರ ಒಂದು ವರ್ಷದ ಅವಧಿಯಲ್ಲಿ ಶಿಶು ಮರಣದಂತಹ ಸಮಸ್ಯೆಗಳನ್ನು ತಡೆಯಲು ಕೇಂದ್ರ ಸಹಕಾರಿಯಾಗಲಿದೆ’ ಎಂದು ಸಂಸ್ಥೆಯ ವೈದ್ಯರು ವಿವರಿಸಿದರು. ‘ಅಂಗ ನ್ಯೂನತೆ ಬುದ್ಧಿ ಮಾಂದ್ಯತೆ ದೃಷ್ಟಿ ಮತ್ತು ಶ್ರವಣ ದೋಷ ಮಿದುಳಿನ ಸಮಸ್ಯೆ ರಕ್ತ ಕಣಗಳ ಸಮಸ್ಯೆ ಶ್ವಾಸಕೋಶದ ಸಮಸ್ಯೆ ಸೇರಿ ನವಜಾತ ಶಿಶುಗಳಲ್ಲಿ ಕಾಣಿಸಿಕೊಳ್ಳುವ ವಿವಿಧ ಸಮಸ್ಯೆಗಳನ್ನು ತಡೆಯಲು ಈ ಕೇಂದ್ರ ನೆರವಾಗಲಿದೆ. ಕೇಂದ್ರಕ್ಕೆ ಬರುವವರಿಗೆ ಆಪ್ತ ಸಮಾಲೋಚನೆಯನ್ನೂ ಒದಗಿಸಲಾಗುತ್ತದೆ. ಈಗಾಗಲೇ ಮೊದಲ ಮಗು ಆನುವಂಶಿಕ ಸಮಸ್ಯೆಗೆ ಒಳಗಾಗಿದ್ದಲ್ಲಿ ಎರಡನೇ ಮಗು ಈ ಸಮಸ್ಯೆಗೆ ಒಳಗಾಗದಂತೆ ತಡಯಲು ಕೇಂದ್ರ ನೆರವಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.