ಬೆಂಗಳೂರು: ಬೆಂಗಳೂರು ಡಬಲ್ ಮರ್ಡರ್ ಪ್ರಕರಣದ ಮೂವರು ಆರೋಪಿಗಳನ್ನು ಅಮೃತಹಳ್ಳಿ ಪೊಲೀಸರು ಇಂದು (ಬುಧವಾರ) ಬೆಳಿಗ್ಗೆ ಬಂಧಿಸಿದ್ದಾರೆ.
ಏರೋನಿಕ್ಸ್ ಇಂಟರ್‌ನೆಟ್ ಕಂಪನಿ (ಏರೋನಿಕ್ಸ್ ಮೀಡಿಯಾ ಸಂಸ್ಥೆ) ವ್ಯವಸ್ಥಾಪಕ ನಿರ್ದೇಶಕ ಫಣೀಂದ್ರ ಸುಬ್ರಹ್ಮಣ್ಯ ಹಾಗೂ ಸಿಇಒ ವಿನುಕುಮಾರ್ ಅವರ ಕೊಲೆ ಪ್ರಕರಣದ ವಿವರಗಳು ನಗರದ ಜನರನ್ನು ಬೆಚ್ಚಿ ಬೀಳಿಸಿವೆ.
ಪೊಲೀಸರ ಮಾಹಿತಿ ಪ್ರಕಾರ, ಕಂಪನಿಯ ಮಾಜಿ ಉದ್ಯೋಗಿ ಟಿಕ್‌ಟಾಕ್ ಸ್ಟಾರ್ ಶಬರಿಷ್ ಅಲಿಯಾಸ್ ಫಿಲಿಕ್ಸ್ ಹಾಗೂ ಇನ್ನಿಬ್ಬರು ಫಣೀಂದ್ರ ಮತ್ತು ವಿನುಕುಮಾರ್ ಅವರ ಮೇಲೆ ಅಮೃತಹಳ್ಳಿಯ ಪಂಪ ಬಡಾವಣೆಯ 6ನೇ ಅಡ್ಡ ರಸ್ತೆಯಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ಮಂಗಳವಾರ ಸಂಜೆ ಕತ್ತಿ ಹಾಗೂ ಡ್ರ್ಯಾಗರ್‌ನಿಂದ ದಾಳಿ ಮಾಡಿದ್ದರು.
ಹಂತಕರು ಫಣೀಂದ್ರ ಸುಬ್ರಹ್ಮಣ್ಯ ಅವರಿಗೆ ಹಲವು ಬಾರಿ ಇರಿದಿದ್ದಾರೆ. ಅವರ ಮುಖ, ತಲೆ, ಬೆನ್ನು, ಎದೆ, ಹೊಟ್ಟೆ ಮತ್ತು ದೇಹದ ಇತರ ಭಾಗಗಳ ಗಂಭೀರ ಗಾಯಗಳಾಗಿದ್ದವು. ಅವರು ಸಂಜೆ 4.20ರ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ಹೆಬ್ಬಾಳದ ಮಣಿಪಾಲ್ ಆಸ್ಪತ್ರೆಯ ಮೂಲಗಳು ತಿಳಿಸಿವೆ. 'ನಮ್ಮ ಸಿಬ್ಬಂದಿ ಫಣೀಂದ್ರ ಅವರ ಜೀವ ಉಳಿಸಲು ಭಾರಿ ಪ್ರಯತ್ನ ನಡೆಸಿದರು. ಆದರೆ, ತೀವ್ರ ರಕ್ತ ಸ್ರಾವವಾಗಿದ್ದರಿಂದ ಅದು ಸಾಧ್ಯವಾಗಲಿಲ್ಲ. ಬಳಿಕ ಫಣೀಂದ್ರ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು' ಎಂದು ಮೂಲಗಳು ಹೇಳಿವೆ.
ತೀವ್ರವಾಗಿ ಹಲ್ಲೆಗೊಳಗಾಗಿದ್ದ ವಿನುಕುಮಾರ್ ಅವರನ್ನು ಕರೆ ತಂದಾಗ ತಲೆಬುರುಡೆ ಎರಡು ಭಾಗವಾಗಿತ್ತು. ಮೆದುಳು ಹೊರಬಂದಿತ್ತು ಎಂದು ಆಸ್ಟರ್ ಸಿಎಂಐ ಆಸ್ಪತ್ರೆ ಮೂಲಗಳು ತಿಳಿಸಿವೆ. 'ಚಿಕಿತ್ಸೆ ನೀಡಿದರೂ ಅವರು ಬದುಕುಳಿಯಲಿಲ್ಲ. ದೇಹದ ಬೇರೆ ಭಾಗಗಳಿಗೆ ಯಾವುದೇ ಗಾಯಗಳಾಗಿರಲಿಲ್ಲ' ಎಂದು ಮಾಹಿತಿ ನೀಡಿವೆ. ಹಾಗೆಯೇ, ಹಲ್ಲೆ ಮಾಡಲು ಉದ್ದನೆಯ ಕತ್ತಿಯನ್ನು ಬಳಸಿದಂತೆ ಕಾಣುತ್ತದೆ. ವಿನುಕುಮಾರ್ ಅವರ ತಲೆ ತೆಂಗಿನಕಾಯಿಯನ್ನು ಒಡೆದ ಹಾಗೆ ಆಗಿತ್ತು' ಎಂದೂ ವಿವರಿಸಿವೆ.
ಕುಣಿಗಲ್‌ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳು
ಕುಣಿಗಲ್‌ನಲ್ಲಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಬೆಂಗಳೂರಿಗೆ ಕರೆ ತರಲಾಗಿದೆ.
ಬನ್ನೇರುಘಟ್ಟ ರಸ್ತೆಯ ಚಿಕ್ಕನಹಳ್ಳಿ ನಿವಾಸಿ, ಟಿಕ್‌ಟಾಕ್ ಸ್ಟಾರ್ ಶಬರಿಷ್ ಅಲಿಯಾಸ್ ಫಿಲಿಕ್ಸ್ (27), ರೂಪೇನಾ ಅಗ್ರಹಾರದ ವಿನಯ್ ರೆಡ್ಡಿ (23) ಹಾಗೂ ಮಾರೇನಹಳ್ಳಿ ಸಂತು ಅಲಿಯಾಸ್ ಸಂತೋಷ್ ಬಂಧಿತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.