ADVERTISEMENT

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರೌಡಿಗಳ ನಡುವೆ ಮಾರಾಮಾರಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2024, 16:06 IST
Last Updated 10 ಜೂನ್ 2024, 16:06 IST
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ   

ಬೆಂಗಳೂರು: ಪ್ರಕರಣವೊಂದರಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ರೌಡಿಶೀಟರ್‌ ‘ಕುಳ್ಳ’ ರಿಜ್ವಾನ್‌ ಹಾಗೂ ರೌಡಿಶೀಟರ್‌ ಸಾಗರ್ ಸಹಚರರ ನಡುವೆ ಗಲಾಟೆ ನಡೆದಿದ್ದು, ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂನ್‌ 7ರಂದು ಸಂಜೆ ಕೇಂದ್ರ ಕಾರಾಗೃಹದ ವಿಚಾರಣಾಧೀನ ಕೈದಿಗಳ ವಿಭಾಗದ ಬ್ಯಾರಕ್ 3 ಮತ್ತು 4ರ ಎದುರು ಈ ಗಲಾಟೆ ನಡೆದಿದೆ ಎಂದು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಮಲ್ಲಿಕಾರ್ಜುನ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

‘ವಿಚಾರಣಾಧೀನ ಕೈದಿಗಳಾದ ವಿಶ್ವನಾಥ್, ಮುನಿರಾಜ್, ಜಾಫರ್ ಸಾದಿಕ್, ವಿಶಾಲ್‌ಗೌಡ, ಟಿಪ್ಪು ಸುಲ್ತಾನ್, ಸೆಂಥಿಲ್ ಕುಮಾರ್, ಅಜಯ್ ಸಿಂಗ್, ಕುಮಾರ್, ಇರ್ಷಾದ್ ಪಾಷಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಗಲಾಟೆಯಲ್ಲಿ ಗಾಯಗೊಂಡಿರುವ ವಿಚಾರಣಾಧೀನ ಕೈದಿಗಳಾದ ತೇಜಸ್, ಅಮಿತ್ ಕುಮಾರ್, ಶೇಷಾದ್ರಿ, ಧನುಷ್‌ ಅವರನ್ನು ಕೇಂದ್ರ ಕಾರಾಗೃಹದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

‘ರೌಡಿ ಕುಳ್ಳ ರಿಜ್ವಾನ್ ಸಹಚರರು ಮತ್ತು ರೌಡಿ ಸಾಗರ್ ಸಹಚರರ ಜತೆ ಅಂದು ಏಕಾಏಕಿ ಜಗಳ ನಡೆದಿತ್ತು. ಪರಸ್ಪರ ಕಲ್ಲಿನಿಂದ ಹಲ್ಲೆ ಮಾಡಿಕೊಂಡಿದ್ದರು. ಲಘು ಲಾಠಿ ಪ್ರಹಾರ ನಡೆಸಿ ಗುಂಪುಗಳನ್ನು ಚದುರಿಸಿದ್ದರು’ ಎಂದು ಮೂಲಗಳು ಹೇಳಿವೆ.

‘ಎರಡೂ ಗುಂಪುಗಳ ನಡುವೆ ಜೈಲಿನಿಂದ ಹೊರಗಿದ್ದಾಗಲೇ ದ್ವೇಷವಿತ್ತು. ಹಫ್ತಾ ವಸೂಲಿ ವಿಚಾರಕ್ಕೆ ಆಗಾಗ್ಗೆ ಗಲಾಟೆ ನಡೆದಿತ್ತು. ಇದೇ ಪ್ರಕರಣದಲ್ಲಿ ಆರೋಪಿಗಳು ಜೈಲು ಸೇರಿದ್ದರು. ಹಳೇ ದ್ವೇಷಕ್ಕೆ ಮತ್ತೆ ಜೈಲಿನಲ್ಲಿ ಗಲಾಟೆ ಆಗಿದೆ’ ಎಂದು ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.