ಬೆಂಗಳೂರು: ಆ ಭಾಗದ ಕೆರೆ ಪ್ರದೇಶ ಬಿಬಿಎಂಪಿ ವ್ಯಾಪ್ತಿಗೆ ಸೇರುವುದಿಲ್ಲ ಎಂದು ಅಭಿವೃದ್ಧಿ ಕಾರ್ಯ ಕೈಬಿಟ್ಟಿರುವುದರಿಂದ ಚಿಕ್ಕಬೆಳ್ಳಂದೂರು ಕೆರೆಯ 8 ಎಕರೆ ಪ್ರದೇಶವನ್ನು ಕಟ್ಟಡ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯದಿಂದ ಮುಚ್ಚಲಾಗುತ್ತಿದೆ.
ಮಹದೇವಪುರ ವಲಯ ವ್ಯಾಪ್ತಿಯಲ್ಲಿರುವ ಚಿಕ್ಕಬೆಳ್ಳಂದೂರು ಕೆರೆಯನ್ನು ಬಿಬಿಎಂಪಿ ಅಭಿವೃದ್ಧಿ ಮಾಡುವ ಪಟ್ಟಿಯಲ್ಲಿರಿಸಿಕೊಂಡು, ಬೇಲಿ ಹಾಕಿದೆ. ಆದರೆ ಆ ಬೇಲಿಯನ್ನೂ ತೆರವು ಮಾಡಿ, ಕಲ್ಲು–ಮಣ್ಣು ತುಂಬಿ ಕೆರೆಯನ್ನು ನಾಶಪಡಿಸಲಾಗುತ್ತಿದೆ.
ಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆ ಪ್ರದೇಶ ಬಹುತೇಕ ಒತ್ತುವರಿಯಾಗಿದೆ. ಕಳೆದ ಕೆಲವು ತಿಂಗಳಿಂದ ಅತಿಕ್ರಮವಾಗುತ್ತಿದ್ದರೂ ಬಿಬಿಎಂಪಿ ಅಥವಾ ಮುಳ್ಳೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಕೆರೆಗಳ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಲ್ಲೋಟ್ ಅವರಿಗೆ ಲಿಖಿತ ದೂರು ನೀಡಿ ವಾರಗಳೇ ಕಳೆದಿದ್ದರೂ ಕ್ರಮ ಕೈಗೊಂಡಿಲ್ಲ.
ಚಿಕ್ಕಬೆಳ್ಳಂದೂರು ಕೆರೆ ಒಟ್ಟು 75 ಎಕರೆ 21 ಗುಂಟೆ ವಿಸ್ತೀರ್ಣವಿದೆ. ಇದರಲ್ಲಿ ಚಿಕ್ಕಬೆಳ್ಳಂದೂರು ಗ್ರಾಮದ ಸರ್ವೆ ನಂ. 9ರಲ್ಲಿ 67 ಎಕರೆ 14 ಗುಂಟೆ, ಮುಳ್ಳೂರು ಗ್ರಾಮ ಸರ್ವೆ ನಂ. 63ರಲ್ಲಿ 8 ಎಕರೆ 7 ಗುಂಟೆ ಇದೆ. ಬಿಬಿಎಂಪಿ ಈ ಕೆರೆ ಅಭಿವೃದ್ಧಿಪಡಿಸಲು ತೆಗೆದುಕೊಂಡಿದ್ದು, ಪೂರ್ಣ ಪ್ರದೇಶಕ್ಕೂ ಬೇಲಿ ಹಾಕಿದೆ. ಆದರೆ, ಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆ ಪ್ರದೇಶದಲ್ಲಿ ಬೇಲಿಯನ್ನು ಕಿತ್ತು ಹಾಕಿ ತ್ಯಾಜ್ಯ, ಕಲ್ಲು–ಮಣ್ಣು ತುಂಬಲಾಗುತ್ತಿದೆ.
‘ಕೆರೆ ಪ್ರದೇಶದಲ್ಲಿ ನೀರಿರುವ ಕಡೆಯೂ ಸುಮಾರು 15 ಅಡಿ ಎತ್ತರದಷ್ಟು ಕಲ್ಲು–ಮಣ್ಣು ತುಂಬಲಾಗಿದೆ. ದಿನರಾತ್ರಿ ಮಣ್ಣು ತುಂಬುವ ಕೆಲಸವಾಗುತ್ತಿದೆ. ಕೆರೆಯ ಒಳಹರಿವು ಮತ್ತು ಹೊರಹರಿವು ಪ್ರದೇಶಕ್ಕೂ ಮಣ್ಣು ತುಂಬಲಾಗುತ್ತಿದೆ. ಹೀಗೆಯೇ ಬಿಟ್ಟರೆ ಕೆರೆ ಪೂರ್ಣ ನಾಶವಾಗುತ್ತದೆ’ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.
‘ಬೇಲಿಯನ್ನು ತೆಗೆದು ಹಾಕಿದ್ದು, ವೈದ್ಯಕೀಯ ತ್ಯಾಜ್ಯ, ಕಲ್ಲು–ಮಣ್ಣು ಕೆರೆ ಸೇರುತ್ತಿದೆ. ಸದ್ಯದ ಮಟ್ಟಿಗೆ ನಾಲ್ಕಾರು ಎಕರೆ ಪ್ರದೇಶದಲ್ಲಿ ನೀರಿದ್ದರೂ ಅದನ್ನು ವ್ಯವಸ್ಥಿತವಾಗಿ ಮುಚ್ಚಲಾಗಿದೆ. ಈ ಕುರಿತು ಪ್ರಶ್ನಿಸಿದರೆ, ಒಬ್ಬೊಬ್ಬರ ಹೆಸರು ಹೇಳಿ ಓಡಿಹೋಗುತ್ತಾರೆ. ರಾತ್ರಿ ವೇಳೆ ಹೆಚ್ಚಾಗಿ ವಾಹನಗಳು ಬಂದು ಕಸ ಸುರಿಯುತ್ತವೆ’ ಎಂದು ನಿವಾಸಿ ರಾಜೇಂದ್ರನಾಥ್ ಮಾಹಿತಿ ನೀಡಿದರು.
ಚಿಕ್ಕಬೆಳ್ಳಂದೂರು ಕೆರೆಯ ಎರಡು ಭಾಗದಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಇತರೆ ಅತಿಕ್ರಮಗಳಿಂದ 3 ಎಕರೆ 18 ಗುಂಟೆ ಒತ್ತುವರಿಯಾಗಿದೆ ಎಂದು 2015ರಲ್ಲಿ ಕಂದಾಯ ಇಲಾಖೆಯ ಸರ್ವೆ ದಾಖಲೆಗಳಲ್ಲಿದೆ. ಅದನ್ನು ಈವರೆಗೂ ತೆರವು ಮಾಡಿಲ್ಲ. ಈಗ ಮತ್ತಷ್ಟು ಎಕರೆ ಒತ್ತುವರಿಯಾಗುತ್ತಿದ್ದರೂ ಕಂದಾಯ ಇಲಾಖೆ ಸೇರಿದಂತೆ ಇಲಾಖೆಗಳ ಅಧಿಕಾರಿಗಳು ಇತ್ತ ಸುಳಿಯುತ್ತಿಲ್ಲ. ಈ ಬಗ್ಗೆ ಸರ್ಕಾರದ ಹಿರಿಯ ಅಧಿಕಾರಿಗಳು ಕೂಡಲೇ ಗಮನಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು.
ಒಟ್ಟಾರೆ ಅಭಿವೃದ್ಧಿ ಮಾಡಿ...
‘ಚಿಕ್ಕಬೆಳ್ಳಂದೂರು ಕೆರೆಗೆ ಕಟ್ಟಡ ತ್ಯಾಜ್ಯ ಸುರಿಯಲಾಗುತ್ತಿದೆ. ಕಲ್ಲು ಮಣ್ಣು ತುಂಬಿ ಮಟ್ಟ ಮಾಡಲಾಗುತ್ತಿದೆ. 75 ಎಕರೆಯಲ್ಲಿ 8 ಎಕರೆ ತಮ್ಮ ವ್ಯಾಪ್ತಿಗೆ ಸೇರುವುದಿಲ್ಲ ಎಂದು ಬಿಬಿಎಂಪಿ ಸುಮ್ಮನಿರುವುದರಿಂದಲೇ ಕೆರೆ ಒತ್ತುವರಿಯಾಗುತ್ತಿದೆ. ಒಂದು ಕೆರೆಯನ್ನು ಅಭಿವೃದ್ಧಿಗೆ ತೆಗೆದುಕೊಡಾಗ ಪೂರ್ಣವಾಗಿ ಕಾಮಗಾರಿ ಮಾಡಬೇಕು. ಒಂದು ಭಾಗ ಬರುವುದಿಲ್ಲ ಎಂದು ಹೇಳಿದರೆ ಅದು ಒತ್ತುವರಿದಾರರಿಗೆ ಅವಕಾಶ ಮಾಡಿಕೊಟ್ಟಂತೆ. ಹೀಗಾಗಿ ಬಿಬಿಎಂಪಿ ಒಟ್ಟಾರೆ ಅಭಿವೃದ್ಧಿ ಮಾಡಬೇಕು. ಮರು ಸರ್ವೆ ಮಾಡಿ ಎಲ್ಲ ಒತ್ತುವರಿಯನ್ನು ತೆರವುಗೊಳಿಸಬೇಕು’ ಎಂದು ಫ್ರೆಂಡ್ಸ್ ಆಫ್ ಲೇಕ್ಸ್‌ನ ರಾಮ್‌ಪ್ರಸಾದ್ ಆಗ್ರಹಿಸಿದರು.
ಪರಿಶೀಲನೆಗೆ ಸೂಚನೆ
‘ಚಿಕ್ಕಬೆಳ್ಳಂದೂರು ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಆರಂಭಿಸಬೇಕಿದೆ. ಪ್ರಾರಂಭಿಕ ಕೆಲಸಗಳಾಗಿವೆ. ಕೆರೆ ಒತ್ತುವರಿ ಬಗ್ಗೆ ದೂರು ಬಂದಿದೆ. ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಕಾರ್ಯಪಾಲಕ ಎಂಜಿನಿಯರ್‌ಗೆ ಸೂಚಿಸಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಕೆರೆಯ ಅಭಿವೃದ್ಧಿ ಬಗ್ಗೆ ಹಿರಿಯ ಅಧಿಕಾರಿಗಳ ಆದೇಶದಂತೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಬಿಬಿಎಂಪಿ ಕೆರೆಗಳ ವಿಭಾಗದ ಮುಖ್ಯ ಎಂಜಿನಿಯರ್ ವಿಜಯಕುಮಾರ್ ಹರಿದಾಸ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.