ಬೆಂಗಳೂರು: ನಟ, ಸಿನಿಮಾ ನಿರ್ದೇಶಕ ಗುರುಪ್ರಸಾದ್ (52) ಅವರ ಮೃತ ದೇಹವು ನ್ಯೂಹೆವನ್ ಅಪಾರ್ಟ್ಮೆಂಟ್ನ ಫ್ಲ್ಯಾಟ್ ಸಂಖ್ಯೆ 11ರಲ್ಲಿ ಕೊಳೆತ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿದೆ. ಕೆಲ ದಿನಗಳ ಹಿಂದೆಯೇ ಅವರು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಉತ್ತರ ತಾಲ್ಲೂಕಿನ ಮಾದನಾಯಕನಹಳ್ಳಿ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ಆರು ತಿಂಗಳಿ
ನಿಂದ ಗುರುಪ್ರಸಾದ್ ವಾಸವಾಗಿದ್ದರು. ಸುತ್ತಮುತ್ತಲಿನ ಮನೆಯ ನಿವಾಸಿಗಳಿಗೆ ಕೆಟ್ಟ ವಾಸನೆ ಬಂದ ಕಾರಣ, ಮನೆ ಪರಿಶೀಲನೆ ಮಾಡಿದಾಗ ಸಾವಿಗೀಡಾಗಿರುವ ವಿಚಾರ ಗೊತ್ತಾಗಿದೆ.
ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿದರು. ತವರು ಮನೆಯಲ್ಲಿದ್ದ ಗುರುಪ್ರಸಾದ್ ಅವರ ಪತ್ನಿ ಸುಮಿತ್ರಾ ಅವರನ್ನು ಕರೆಯಿಸಿ, ಮನೆಯ ಬೀಗ ಒಡೆದು ಬಾಗಿಲು ತೆರೆಯಲಾಯಿತು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ವಿಲ್ಸನ್ ಗಾರ್ಡನ್ ವಿದ್ಯುತ್ ಚಿತಾಗಾರದಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಿತು.
ಪತ್ನಿ ಸುಮಿತ್ರಾ ಅವರ ಸಹೋದರ ಅಂತಿಮ ವಿದಿವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಚಿತ್ರರಂಗದ ಗಣ್ಯರು ಪಾಲ್ಗೊಂಡಿದ್ದರು.
‘ಸ್ಥಳೀಯರ ಪ್ರಕಾರ ಐದಾರು ದಿನಗಳ ಹಿಂದೆ ಗುರುಪ್ರಸಾದ್ ಅಪಾರ್ಟ್‌ಮೆಂಟ್‌ಗೆ ಬಂದಿದ್ದರು. ಆಗಿನಿಂದ ಅವರು ಹೊರಗೆ ಬಂದಿರಲಿಲ್ಲ. ಈ ನಡುವೆ ಅವರ ಮನೆಗೆ ಕುಟುಂಬದ ಸದಸ್ಯರು ಬಂದು ಹೋಗಿದ್ದರು. ಯಾವಾಗ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದು ಗೊತ್ತಿಲ್ಲ. ಆರ್ಥಿಕ ಸಂಕಷ್ಟದಲ್ಲಿದ್ದರು ಎಂಬುದು ಗೊತ್ತಾಗಿದೆ. ಹಣಕಾಸು ವಿಚಾರವಾಗಿ ಅವರು ಬೇಸರಗೊಂಡಿದ್ದರು. ಹಲವು ಆಯಾಮಗಳಿಂದ ತನಿಖೆ ನಡೆಯುತ್ತಿದೆ’ ಎಂದು ಗ್ರಾಮಾಂತರ ಎಸ್‌ಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ. ಗುರುಪ್ರಸಾದ್ ಅವರಿಗೆ ತಾಯಿ ಹಾಗೂ ಒಬ್ಬ ಸಹೋದರರಿದ್ದಾರೆ.
ದೂರು ದಾಖಲು: ಪುಸ್ತಕ ಹಾಗೂ ಸಿ.ಡಿ ಗಳನ್ನು ಖರೀದಿಸಿ ಹಣ ನೀಡದಿರುವ ಬಗ್ಗೆ ಗುರುಪ್ರಸಾದ್ ವಿರುದ್ಧ ಜಯನಗರದ ಟೋಟಲ್ ಕನ್ನಡ ಪುಸ್ತಕ ಮಳಿಗೆ ಮಾಲೀಕ ಲಕ್ಷ್ಮೀಕಾಂತ್ ಅವರು ಜಯನಗರ ಠಾಣೆಯಲ್ಲಿ ಇತ್ತೀಚೆಗೆ ದೂರು ದಾಖಲಿಸಿದ್ದರು.
‘2019ರಲ್ಲಿ ಟೋಟಲ್ ಕನ್ನಡ ಮಳಿಗೆಯಲ್ಲಿ ಕನ್ನಡ ಸಾಹಿತ್ಯ ಮತ್ತು ಸಿನಿಮಾ ಸಂಬಂಧಿತ ಪುಸ್ತಕಗಳನ್ನು ಖರೀದಿಸಿದ್ದರು. 75 ಪುಸ್ತಕಗಳ ಐದು ಸೆಟ್ ಖರೀದಿಸಿದ್ದರು. ಒಂದು ಸೆಟ್‌ಗೆ ₹13 ಸಾವಿರದಂತೆ ಐದು ಸೆಟ್ ಪುಸ್ತಕಗಳಿಗೆ ₹65 ಸಾವಿರ ನೀಡಬೇಕಿತ್ತು. ಹಣ ನೀಡದೆ ಸತಾಯಿಸುತ್ತಿದ್ದಾರೆ. ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ತಮ್ಮ ಮನೆಯ ವಿಳಾಸ ಬದಲಾಯಿಸಿದ್ದಾರೆ’ ಎಂದು ದೂರಿನಲ್ಲಿ ಹೇಳಲಾಗಿತ್ತು.
ಮೂರು ಮನೆ ಬದಲು: ಸಾಲಗಾರರ ಕಾಟಕ್ಕೆ ಬೇಸತ್ತು ಗುರುಪ್ರಸಾದ್ ವರ್ಷದಲ್ಲಿ ಮೂರು ಮನೆಯನ್ನು ಬದಲಾಯಿಸಿದ್ದರು. ಸಾಲದ ಹಣ ಮರುಪಾವತಿಸದ ಕಾರಣ ಅವರ ವಿರುದ್ದ ಹಲವರು ಪೊಲೀಸರಿಗೂ ದೂರು ನೀಡಿದ್ದರು.
‘ಬಸವೇಶ್ವರನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಗುರುಪ್ರಸಾದ್, ನಂತರ ಜಯನಗರ ಕನಕನಪಾಳ್ಯದ ಅಶೋಕ ಪಿಲ್ಲರ್ ಬಳಿ ನೆಲಸಿದ್ದರು. ಕೆಲದಿನ ಒಬ್ಬಂಟಿಯಾಗಿ ಹೋಟೆಲ್‌ನಲ್ಲಿ ರೂಮ್ ಮಾಡಿಕೊಂಡಿದ್ದರು. ಕೆಲ ತಿಂಗಳುಗಳಿಂದ ಮಾದನಾಯಕನಹಳ್ಳಿ ಬಳಿಯ ನ್ಯೂ ಹೆವೆನ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಇದರ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ. ಚೆಕ್ ಬೌನ್ಸ್ ಪ್ರಕರಣದಲ್ಲಿ ಗುರುಪ್ರಸಾದ್ ಕೋರ್ಟ್, ಕಚೇರಿ ಅಲೆಯುತ್ತಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೊನೆಯ ಸಂದೇಶ: ಗುರುಪ್ರಸಾದ್ ಅವರು ‘ಫ್ರೆಂಡ್ಸ್ ಫೋರಮ್’ ಎಂಬ ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ ಅ.26ರಂದು ಸಂದೇಶ ಕಳುಹಿಸಿದ್ದರು. ‘ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ವಿಶಾಂತ್ರಿ ಪಡೆದುಕೊಳ್ಳುತ್ತಿದ್ದೇನೆ. ದೀಪಾವಳಿ ಹಬ್ಬದ ನಂತರ ಸಿನಿಮಾ ಚಟುವಟಿಕೆ ಮುಂದುವರಿಸೋಣ. ಅ.31ರಂದು ಮತ್ತೆ ಸಿನಿಮಾ ಕುರಿತು ಅಪ್‌ಡೇಟ್ ಕೊಡುವುದಾಗಿ ತಿಳಿಸಿದ್ದರು’ ಎಂದು ಸಂಬಂಧಿ ರವಿ ದೀಕ್ಷಿತ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.