ಬೆಂಗಳೂರು: ಶಿವಾಜಿನಗರ, ಚಿಕ್ಕಪೇಟೆ ಹಾಗೂ ಮಹದೇವಪುರ ವಿಧಾನಸಭೆ ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿ ಪ್ರಕಟಗೊಂಡಿದೆ. ಮಹದೇವಪುರ ಕ್ಷೇತ್ರ ನಗರದಲ್ಲೇ ಅತೀ ಹೆಚ್ಚು ಮತದಾರರನ್ನು ಹೊಂದಿರುವ ಎರಡನೇ ಕ್ಷೇತ್ರವಾಗಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಮತದಾರರ ಮಾಹಿತಿ ಕಳವು ಮಾಡಿರುವ ಆರೋಪದ ಪ್ರಕರಣದಲ್ಲಿ ಈ ಮೂರು ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ಮರು ಪರಿಷ್ಕರಣೆ ಮಾಡುವಂತೆ ಚುನಾವಣಾ ಆಯೋಗ ನಿರ್ದೇಶನ ನೀಡಿತ್ತು.
ಅದರಂತೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿ ಅಂತಿಮ ಪ್ರಕಟಣೆಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಹೊರಡಿಸಿದೆ. ಕರಡು ಮತದಾರರ ಪಟ್ಟಿಯನ್ನು ನ.9ರಂದು ಪ್ರಕಟಿಸಲಾಗಿತ್ತು. ಆಕ್ಷೇಪಣೆಗಳನ್ನು ಪರಿಹರಿಸಿ ಭಾನುವಾರ ಅಂತಿಮ ಪಟ್ಟಿ ಪ್ರಕಟಿಸಿದೆ.
ಅಂತಿಮ ಮತದಾರರ ಪಟ್ಟಿ ವೆಬ್‌ಸೈಟ್ http://ceokarnataka.kar.nic.inನಲ್ಲಿ ಪ್ರಕಟಿಸಲಾಗಿದೆ. ಮತದಾರರ ಪಟ್ಟಿ ನಿರಂತರ ಪರಿಷ್ಕರಣೆ ಇದ್ದು, ವೋಟರ್ ಹೆಲ್ಪ್‌ಲೈನ್ ಆ್ಯಪ್, ಪೋರ್ಟಲ್ www.nvsp.in ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂದು ತಿಳಿಸಿದೆ.
ಬೆಂಗಳೂರಿನ 28 ಕ್ಷೇತ್ರಗಳಲ್ಲೇ ಅತೀ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರ ಎಂದರೆ ಬೆಂಗಳೂರು ದಕ್ಷಿಣ. 6.50 ಲಕ್ಷ ಮತದರಾರನ್ನು ಈ ಕ್ಷೇತ್ರ ಹೊಂದಿದೆ. ಅದನ್ನು ಬಿಟ್ಟರೆ ಮಹದೇವಪುರ ಕ್ಷೇತ್ರವೇ (5.72 ಲಕ್ಷ) ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ.
ಶಿವಾಜಿನಗರದಲ್ಲಿ 1.94 ಲಕ್ಷ ಮತದಾರರಿದ್ದು, ಇದು ಅತೀ ಕಡಿಮೆ ಮತದಾರನ್ನು ಹೊಂದಿರುವ ಕ್ಷೇತ್ರವಾಗಿದೆ. ಇದನ್ನು ಹೊರತುಪಡಿಸಿ ನಗರದ ಯಾವುದೇ ಕ್ಷೇತ್ರ 2 ಲಕ್ಷಕ್ಕೂ ಕಡಿಮೆ ಮತದಾರರನ್ನು ಹೊಂದಿಲ್ಲ.
ಮತದಾರರ ವಿವರ
ಕ್ಷೇತ್ರದ ಹೆಸರು; ಪುರುಷರು; ಮಹಿಳೆಯರು; ತೃತೀಯ ಲಿಂಗಿಗಳು; ಒಟ್ಟು
ಶಿವಾಜಿನಗರ; 98,272; 96,658; 7; 1,94,937
ಚಿಕ್ಕಪೇಟೆ; 1,08,852; 1,04,197; 17; 2,13,066
ಮಹದೇವಪುರ; 3,08,859; 3,63,560; 120; 5,72,539
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.