ADVERTISEMENT

ಕೆರೆ ಕಲ್ಮಶ ತೆರವಿಗೆ ಕೊನೆಗೂ ನಿರ್ಧಾರ

ಚಿಕ್ಕಬಾಣಾವರ ಕೆರೆಯ ದುರ್ವಾಸನೆಯಿಂದ ನಾಗಕರಿಗೆ ಸಂಕಷ್ಟ; ಕೊಳಕು ನೀರು ಹೊರಕ್ಕೆ

ಆರ್. ಮಂಜುನಾಥ್
Published 1 ಜೂನ್ 2023, 0:32 IST
Last Updated 1 ಜೂನ್ 2023, 0:32 IST
ಕಲ್ಮಶ ತುಂಬಿಕೊಂಡಿರುವ ಚಿಕ್ಕಬಾಣಾವರ ಕೆರೆ
ಕಲ್ಮಶ ತುಂಬಿಕೊಂಡಿರುವ ಚಿಕ್ಕಬಾಣಾವರ ಕೆರೆ   

ಬೆಂಗಳೂರು: ಹಲವು ವರ್ಷಗಳಿಂದ ಕಲ್ಮಶದ ತಾಣವಾಗಿರುವ ಚಿಕ್ಕಬಾಣಾವರ ಕೆರೆಯನ್ನು ದುರ್ವಾಸನೆಯಿಂದ ಮುಕ್ತಗೊಳಿಸುವ ಕಾಮಗಾರಿ ಆರಂಭಿಸಲು ಪುರಸಭೆ ಮುಂದಾಗಿದೆ. ಕೊಳಕು ನೀರನ್ನು ಹೊರಹಾಕುವ ಮೂಲಕ ತಾತ್ಕಾಲಿಕ ಪರಿಹಾರ ಕಲ್ಪಿಸಲು ನಿರ್ಧರಿಸಿದೆ.

ಕಲ್ಮಶ, ತ್ಯಾಜ್ಯ, ಒಳಚರಂಡಿ ನೀರು ಸೇರಿದಂತೆ ಎಲ್ಲ ರೀತಿಯ ಮಾಲಿನ್ಯದಿಂದ ಕೂಡಿರುವ ಈ ಕೆರೆಯಿಂದ ಹೊರಬರುವ ದುರ್ವಾಸನೆಯಿಂದ ಸ್ಥಳೀಯ ನಿವಾಸಿಗಳು ಉಸಿರಾಡಲೂ ಕಷ್ಟಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಪರಿಹರಿಸುವಂತೆ ಐದಾರು ವರ್ಷಗಳಿಂದ ನಾಗರಿಕರು ಆಗ್ರಹಿಸುತ್ತಿದ್ದರೂ ಕೆರೆ ಶುಚಿಗೊಳಿಸುವ ಕೆಲಸ ಆಗಿರಲಿಲ್ಲ.

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ ಚಿಕ್ಕಬಾಣಾವರ ಕೆರೆಯನ್ನು ಅಭಿವೃದ್ಧಿಪಡಿಸುವ ಹೊಣೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸಲಾಗಿತ್ತು. ಕೆರೆಗೆ ಸಂಬಂಧಿಸಿದ ಒಂದು ಫಲಕ ಹಾಗೂ ಒಂದಷ್ಟು ಬೇಲಿ ಹಾಕಿದ್ದು ಬಿಟ್ಟರೆ ಬಿಡಿಎ ಯಾವ ಕೆಲಸವನ್ನೂ ಮಾಡಿಲ್ಲ. ಕೆರೆ ದೊಡ್ಡದಾಗಿರುವುದರಿಂದ ಹೆಚ್ಚು ವೆಚ್ಚ ಮಾಡಲು ಮುಂದಾಗಿರಲಿಲ್ಲ.

ADVERTISEMENT

ಚಿಕ್ಕಬಾಣಾವರ, ದಾಸಪ್ಪನಪಾಳ್ಯ, ಗಾಣಿಗರಹಳ್ಳಿ, ಸೋಮಶೆಟ್ಟಿಹಳ್ಳಿ, ಕೆರೆಗುಡ್ಡದ ಹಳ್ಳಿ ಸೇರಿದಂತೆ ಹೊಸದಾಗಿ ನಿರ್ಮಾಣವಾಗಿರುವ ಹತ್ತಾರು ಬಡಾವಣೆಗಳ ಜನರಿಗೆ ಕೆರೆಯಿಂದ ದುರ್ವಾಸನೆ ಬರುತ್ತಿದ್ದು, ಸೊಳ್ಳೆ ಹಾಗೂ ಕ್ರಿಮಿಕೀಟಗಳ ಕಾಟವೂ ಹೆಚ್ಚಾಗಿದೆ.

‘ಚಿಕ್ಕಬಾಣಾವರ ಕೆರೆ ಕೊಳಕುತಾಣವಾಗಿದೆ. ಇದನ್ನು ಸ್ವಚ್ಛಗೊಳಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದೇವೆ. ಆದರೆ, ಯಾರೂ ಇತ್ತ ಗಮನಹರಿಸಿಲ್ಲ. ನಮ್ಮ ಬದುಕು ಇಲ್ಲಿ ಯಾತನದಾಯಕವಾಗಿದೆ’ ಎಂದು ಕೆರೆಗುಡ್ಡದಹಳ್ಳಿಯ ರಾಮಣ್ಣ ಹೇಳಿದರು.

‘ಕಂದಾಯ ಬಡಾವಣೆಗಳು ಸೇರಿದಂತೆ ಹಲವು ಪ್ರದೇಶಗಳಿಂದ ಒಳಚರಂಡಿ ನೀರು ಹರಿದುಬರುತ್ತಿದೆ. ಇದರ ಮೂಲ ಹುಡುಕುವುದು ಕಷ್ಟವಾಗಿದ್ದು, ಕಲ್ಮಶ ನೀರನ್ನು ಹೊರಹಾಕಿ ಮತ್ತೆ ಹರಿಯದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಬಿಡಬ್ಲ್ಯುಎಸ್‌ಎಸ್‌ಬಿ ವತಿಯಿಂದ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಅದು ಕೆರೆಗೆ ಬರದಂತೆ ಮಾರ್ಗ ಬದಲಿಸಲಾಗುತ್ತಿದೆ’ ಎಂದು ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ಶಾಸಕ ಎಸ್‌. ಮುನಿರಾಜು ತಿಳಿಸಿದರು.

‘ಸ್ಥಳೀಯರಿಗೆ ಸಾಕಷ್ಟು ಸಮಸ್ಯೆ ಉಂಟಾಗಿರುವುದರಿಂದ ತಕ್ಷಣದಲ್ಲಿ ಕಾಮಗಾರಿ ಆರಂಭಿಸಲಾಗುತ್ತಿದೆ. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್‌) ವತಿಯಿಂದ ಕೆಲಸ ಸದ್ಯದಲ್ಲಿಯೇ ಆರಂಭವಾಗಲಿದೆ. ಮೇ 31ರ ಬುಧವಾರ ಕಾಮಗಾರಿಗೆ ಭೂಮಿಪೂಜೆ ನಡೆಸಲಾಗುತ್ತದೆ’ ಎಂದು ಹೇಳಿದರು.

ಚಿಕ್ಕಬಾಣಾವರ ಕೆರೆಯ ಒತ್ತುವರಿ (ಕೆಂಪು ಬಣ್ಣದಲ್ಲಿರುವುದು)
ಎಸ್‌. ಮುನಿರಾಜು

ಸಿಎಸ್‌ಆರ್‌ ಅನುದಾನಕ್ಕಾಗಿ ಮನವಿ

ಚಿಕ್ಕಬಾಣಾವರ ಕೆರೆ ನೂರು ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿರುವುದರಿಂದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಹಣಕಾಸಿನ ಅಗತ್ಯವಿದೆ. ಕೊಳಕು ನೀರು ಹೊರ ಹಾಕಿದ ನಂತರ ಸಂಸದ ಸದಾನಂದಗೌಡ ಹಾಗೂ ಶಾಸಕರ ಅಭಿವೃದ್ಧಿ ನಿಧಿಯಿಂದ ತಲಾ ₹50 ಲಕ್ಷ ನೀಡಿ ಕಾಮಗಾರಿ ಕೈಗೊಳ್ಳಲಾಗುವುದು. ಜತೆಗೆ ಸಿಎಸ್‌ಆರ್‌ ನಿಧಿಯಡಿ ಒಂದೆರಡು ಸಂಸ್ಥೆಗಳಿಂದ ಹಣ ಪಡೆದು ಸಮಗ್ರ ಅಭಿವೃದ್ಧಿ ಕಾಮಗಾರಿ ಮಾಡಲು ಯೋಚಿಸಲಾಗಿದೆ ಎಂದು ಶಾಸಕ ಎಸ್‌. ಮುನಿರಾಜು ತಿಳಿಸಿದರು.

ಹಂತ ಹಂತವಾಗಿ ಅಭಿವೃದ್ಧಿ...

ಚಿಕ್ಕಬಾಣಾವರ ಕೆರೆಯ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಹಣ ಬೇಕಾಗುತ್ತದೆ. ಆದರೆ ಪುರಸಭೆಯಲ್ಲಿ ಅಷ್ಟೊಂದು ಹಣ ಇಲ್ಲ. ಹೆಚ್ಚಿನ ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಅನುದಾನದ ಲಭ್ಯತೆ ಮೇರೆಗೆ ಹಂತಹಂತವಾಗಿ ಕೆರೆಯನ್ನು ಅಭಿವೃದ್ಧಿ ಮಾಡಲಾಗುತ್ತದೆ. ಕೆರೆ ತುಂಬಾ ಕಲ್ಮಶಗೊಂಡಿದ್ದು ಸ್ಥಳೀಯರು ವಾಸಿಸಲು ಸಾಧ್ಯವಾಗದಷ್ಟು ದುರ್ವಾಸನೆ ಉಂಟಾಗಿದೆ. ಹೀಗಾಗಿ ಪುರಸಭೆ ಮೀಸಲಿಟ್ಟಿರುವ ₹1 ಕೋಟಿ ಮೊತ್ತದಲ್ಲಿ ಮೊದಲ ಹಂತದಲ್ಲಿ ಕೊಳಚೆ ನೀರನ್ನು ಹೊರಗೆ ಹಾಕಿ ಮತ್ತೆ ಒಳಚರಂಡಿ ನೀರು ಕೆರೆಗೆ ಹರಿಯದಂತೆ ಮಾಡುತ್ತೇವೆ. ಒತ್ತುವರಿಯನ್ನೂ ತೆರವು ಮಾಡಲಾಗುತ್ತದೆ ಎಂದು ಚಿಕ್ಕಬಾಣಾವರ ಪುರಸಭೆ ಮುಖ್ಯ ಅಧಿಕಾರಿ ಎಚ್‌.ಎ. ಕುಮಾರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.