ಬೆಂಗಳೂರು: ಟೆಂಡರ್ ಇಲ್ಲದೇ ನೇರವಾಗಿ ಸರಕು ಮತ್ತು ಸೇವೆಗಳ ಪೂರೈಕೆ ಹಾಗೂ ಕಾಮಗಾರಿಗಳ ಗುತ್ತಿಗೆ ನೀಡುವುದಕ್ಕೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ 4–ಜಿ ಅಡಿ ವಿನಾಯ್ತಿ ನೀಡುವುದಕ್ಕೆ ಆರ್ಥಿಕ ಇಲಾಖೆ ಲಗಾಮು ಹಾಕಿದೆ.
ವಾರ್ಷಿಕವಾಗಿ ಆಚರಿಸುವ ಕಾರ್ಯಕ್ರಮಗಳು, ಇಲಾಖಾವಾರು ಕ್ರಿಯಾಯೋಜನೆಗಳಲ್ಲಿ ಅನುಮೋದನೆಯಾಗಿರುವ ಕಾರ್ಯಕ್ರಮಗಳು, ಪೂರ್ವ ನಿರ್ಧರಿತವಾಗಿ ಪಡೆಯುವ ಸೇವೆ, ಸರಕು ಮತ್ತು ಕೈಗೊಳ್ಳುವ ಕಾಮಗಾರಿಗಳಲ್ಲಿ ಗುತ್ತಿಗೆ ನೀಡಲು 4–ಜಿ ವಿನಾಯ್ತಿ ಬಳಸುವುದನ್ನು ನಿರ್ಬಂಧಿಸಿ ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಮಾರ್ಚ್ 15ರಂದು ಸುತ್ತೋಲೆ ಹೊರಡಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಮಹನೀಯರ ಜಯಂತಿ, ದಸರಾ, ಚಲನಚಿತ್ರೋತ್ಸವ ಸೇರಿದಂತೆ ಪ್ರತಿ ವರ್ಷವೂ ನಡೆಯುವ ಕಾರ್ಯಕ್ರಮಗಳನ್ನು ಆಯೋಜಿಸುವ ಕೆಲಸಗಳಿಗೆ ಟೆಂಡರ್ ಇಲ್ಲದೇ ಗುತ್ತಿಗೆ ನೀಡುವಂತಿಲ್ಲ. ಸಿವಿಲ್ ಕಾಮಗಾರಿಗಳಿಗೂ 4–ಜಿ ವಿನಾಯ್ತಿ ಕೋರಿ ಪ್ರಸ್ತಾವ ಸಲ್ಲಿಸಬಾರದು. ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸುವಂತಹ ಕೆಲಸಗಳಿಗೂ ವಿನಾಯ್ತಿ ಕೋರಿ ಪ್ರಸ್ತಾವ ಸಲ್ಲಿಸುವಂತಿಲ್ಲ ಎಂದು ವಿವಿಧ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳಿಗೆ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.
ಹಲವು ವರ್ಷಗಳಿಂದ ಟೆಂಡರ್ ಮೂಲಕ ನಡೆಯುತ್ತಿರುವ ಕೆಲಸಗಳನ್ನು ಏಕಾಏಕಿ 4–ಜಿ ವಿನಾಯ್ತಿ ಮೂಲಕ ಮಾಡಕೂಡದು. ಕಾಲಾವಕಾಶ ಕಡಿಮೆ ಇದೆ ಎಂಬ ಕಾರಣ ಮುಂದಿಟ್ಟುಕೊಂಡು 4–ಜಿ ವಿನಾಯ್ತಿ ಕೋರಬಾರದು. ಅಂತಹ ಸಂದರ್ಭಗಳಲ್ಲಿ ಕನಿಷ್ಠ ಏಳು ದಿನಗಳ ಅವಧಿಯ ಅಲ್ಪಾವಧಿ ಟೆಂಡರ್ ಪ್ರಕ್ರಿಯೆ ನಡೆಸಬೇಕು. ಸರ್ಕಾರದ ಅಧೀನ ಸಂಸ್ಥೆಗಳು ತಮ್ಮ ಸ್ವಂತ ಉತ್ಪನ್ನಗಳ ಪೂರೈಕೆಗೆ ಮಾತ್ರ ವಿನಾಯ್ತಿ ಕೋರಿ ಪ್ರಸ್ತಾವ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
ಕಾರ್ಯದರ್ಶಿಯೇ ಸಲ್ಲಿಸಬೇಕು: ಅತ್ಯಂತ ತುರ್ತು ಮತ್ತು ಅವಶ್ಯಕ ಪ್ರಕರಣಗಳಲ್ಲಿ ಟೆಂಡರ್ ಪ್ರಕ್ರಿಯೆಯನ್ನು ತುರ್ತಾಗಿ ನಡೆಸಲು ಸಾಧ್ಯವಿಲ್ಲದಿದ್ದರೆ ಮಾತ್ರ 4–ಜಿ ವಿನಾಯ್ತಿ ಕೋರಬಹುದು. ಜಿಲ್ಲಾಧಿಕಾರಿಗಳು ಅಥವಾ ಇಲಾಖೆಯ ಇತರ ಅಧಿಕಾರಿಗಳು ನೇರವಾಗಿ ಪ್ರಸ್ತಾವ ಸಲ್ಲಿಸುವಂತಿಲ್ಲ. ಆಯಾ ಇಲಾಖೆಯ ಕಾರ್ಯದರ್ಶಿಯೇ ಪ್ರಸ್ತಾವ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.
ಪ್ರಸ್ತಾವ ಸಲ್ಲಿಸುವ ಮುನ್ನ ಇಲಾಖಾ ಮುಖ್ಯಸ್ಥರು ಅಥವಾ ಕಾರ್ಯದರ್ಶಿ ಅದನ್ನು ವೈಯಕ್ತಿಕವಾಗಿ ಪ್ರಮಾಣೀಕರಿಸಬೇಕು. ಆರ್ಥಿಕ ಇಲಾಖೆಯ ಜತೆ ವೈಯಕ್ತಿಕವಾಗಿ ಚರ್ಚಿಸಬೇಕು. ಟೆಂಡರ್ ಮೂಲಕ ಸದರಿ ಕೆಲಸನ್ನು ಮಾಡಲು ಏಕೆ ಸಾಧ್ಯವಿಲ್ಲ ಎಂಬ ಸಮರ್ಥನೆಯನ್ನೂ ಒದಗಿಸಬೇಕಾದ ಹೊಣೆಗಾರಿಕೆ ನಿಗದಿಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.