ADVERTISEMENT

ಯುವಿಸಿಇಗೆ ಆರ್ಥಿಕ ಸ್ವಾಯತ್ತತೆ: ವಿದ್ಯಾರ್ಥಿಗಳಿಗೆ ಹೊರೆ: ತಜ್ಞರ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 19:55 IST
Last Updated 18 ಮಾರ್ಚ್ 2023, 19:55 IST
ವಿಚಾರ ಸಂಕಿರಣದಲ್ಲಿ ಪ್ರೊ. ಟಿ.ಆರ್. ಚಂದ್ರಶೇಖರ್, ಪ್ರೊ. ಬಿ. ನಾರಾಯಣಪ್ಪ, ಪ್ರೊ. ಎಂ.ಎನ್. ಶ್ರೀಹರಿ, ಡಾ. ಎಚ್.ಎಂ. ಸೋಮಶೇಖರಪ್ಪ ಮೊದಲಾದವರು ಭಾಗವಹಿಸಿದ್ದರು     –ಪ್ರಜಾವಾಣಿ ಚಿತ್ರ
ವಿಚಾರ ಸಂಕಿರಣದಲ್ಲಿ ಪ್ರೊ. ಟಿ.ಆರ್. ಚಂದ್ರಶೇಖರ್, ಪ್ರೊ. ಬಿ. ನಾರಾಯಣಪ್ಪ, ಪ್ರೊ. ಎಂ.ಎನ್. ಶ್ರೀಹರಿ, ಡಾ. ಎಚ್.ಎಂ. ಸೋಮಶೇಖರಪ್ಪ ಮೊದಲಾದವರು ಭಾಗವಹಿಸಿದ್ದರು     –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಐಐಟಿ ಮಾದರಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜಿಗೆ (ಯುವಿಸಿಇ) ಆರ್ಥಿಕ ಸ್ವಾಯತ್ತತೆ ನೀಡುವುದರಿಂದ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತದೆ’ ಎಂದು ಶನಿವಾರ ನಡೆದ ವಿಚಾರ ಸಂಕಿರಣದಲ್ಲಿ ತಜ್ಞರು, ಪ್ರಾಧ್ಯಾಪಕರು ಅಭಿಪ್ರಾಯಪಟ್ಟರು.

‘ಆಲ್ ಕರ್ನಾಟಕ ಎಂಜಿನಿಯರಿಂಗ್ ಸ್ಟೂಡೆಂಟ್ಸ್ ಫೋರಂ (ಇಗ್ನೈಟ್‌) ಹಾಗೂ ಎಂಜಿನಿಯರಿಂಗ್ ಕಾಲೇಜಸ್ ಫ್ಯಾಕಲ್ಟಿ ಅಸೋಸಿಯೇಶನ್ (ಎಗ್ಫಾ) ಜಂಟಿಯಾಗಿ ಆಯೋಜಿಸಿದ್ದ ‘ಉನ್ನತ ಶಿಕ್ಷಣದ ಮೇಲೆ ಆರ್ಥಿಕ ಸ್ವಾಯತ್ತತೆಯ ಪರಿಣಾಮ’ ಕುರಿತ ವಿಚಾರ ಸಂಕಿರಣದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.

‘ಸ್ಮಾರ್ಟ್ ಸಿಟಿ’ ಪ್ರಾಜೆಕ್ಟ್ ಸಲಹೆಗಾರ ಪ್ರೊ. ಎಂ.ಎನ್ ಶ್ರೀಹರಿ ಮಾತನಾಡಿ, ‘ಯುವಿಸಿಇಯಂತಹ ಪ್ರತಿಷ್ಠಿತ ಕಾಲೇಜನ್ನು ಸ್ವಯಂ ಹಣಕಾಸು ಸಂಸ್ಥೆಯಾಗಿ ಬದಲಾಯಿಸಿದರೆ, ಕೇವಲ ಹಣವುಳ್ಳವರು ಮಾತ್ರ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ಶಿಕ್ಷಣ ಆರ್ಥಿಕ ಸ್ವಾಯತ್ತತೆಯ ವಿರುದ್ಧದ ಹೋರಾಟವು ವಿದ್ಯಾರ್ಥಿಗಳೊಂದಿಗೆ, ಶಿಕ್ಷಕರು, ಪೋಷಕರನ್ನು ಒಳಗೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಶಿಕ್ಷಣ ತಜ್ಞ ಮತ್ತು ನಿವೃತ್ತ ಪ್ರಾಂಶುಪಾಲ ಪ್ರೊ. ಬಿ. ನಾರಾಯಣಪ್ಪ, ‘ಖ್ಯಾತ ಎಂಜಿನಿಯರ್‌ಗಳು ಮತ್ತು ವಿಜ್ಞಾನಿಗಳು ಅಧ್ಯಯನ ಮಾಡಿರುವ ಯುವಿಸಿಇಯ ಈ ಸ್ಥಿತಿಗೆ ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯೇ ಕಾರಣ’ ಎಂದು ತಿಳಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಟಿ. ಆರ್. ಚಂದ್ರಶೇಖರ್, ‘ಸ್ವಯಂ ಹಣಕಾಸು ಪದ್ಧತಿಯು ಹೆಣ್ಣುಮಕ್ಕಳ ಶಿಕ್ಷಣಕ್ಕೆ ವಿರುದ್ಧವಾಗಿದೆ. ಯಾವುದೇ ಪ್ರಗತಿಯನ್ನು ಮಹಿಳೆಯರ ಭಾಗವಹಿಸುವಿಕೆಯಿಂದ ಗುರುತಿಸಲಾಗುತ್ತಿದೆ ಎನ್ನುವುದನ್ನು ಮರೆಯಬಾರದು’ ಎಂದು ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಸೋಮಶೇಖರಪ್ಪ, ‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಇಂದು ಪರೋಕ್ಷವಾಗಿ ಶಿಕ್ಷಣದ ಖಾಸಗೀಕರಣವನ್ನು ಬೆಂಬಲಿಸುತ್ತಿದೆ’ ಎಂದು ದೂರಿದರು. ‘ಇಗ್ನೈಟ್’ ರಾಜ್ಯ ಸಂಚಾಲಕ ಅಭಯಾ ದಿವಾಕರ್, ಎಐಡಿಎಸ್‌ಒ ಜಿಲ್ಲಾ ಉಪಾಧ್ಯಕ್ಷೆ ಸಿ.ಎಂ. ಅಪೂರ್ವ ಇದ್ದರು.

**

ಯುವಿಸಿಇ ಅನ್ನು ಐಐಟಿ ಮಾದರಿ ರೂಪಿಸುವ ಗುರಿ ಒಳ್ಳೆಯದು. ಸ್ವಾಯತ್ತತೆಯ ನೆಪವೊಡ್ಡಿ ಸರ್ಕಾರ ಆರ್ಥಿಕ ನೆರವು ಒದಗಿಸುವ ಜವಾಬ್ದಾರಿಯಿಂದ ಹಿಂದೆ ಸರಿಯಬಾರದು.
–ಪ್ರೊ. ಎಂ. ಎನ್. ಶ್ರೀಹರಿ, ಯುವಿಸಿಇ ಅಲುಮ್ನಿ ಹಾಗೂ ಸ್ಮಾರ್ಟ್ ಸಿಟೀಸ್ ಪ್ರೊಜೆಕ್ಟ್‌ ಸಲಹೆಗಾರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.