ADVERTISEMENT

ಸಂಚಾರ ನಿಯಮ ಉಲ್ಲಂಘಿನೆ: ಸವಾರನಿಗೆ ಬರೋಬ್ಬರಿ ₹ 17 ಸಾವಿರ ದಂಡ!

ಚಾಲನಾ ಪರವಾನಗಿ ಇಲ್ಲದೆ, ಹೆಲ್ಮೆಟ್‌ ಧರಿಸದೆ, ಕುಡಿದು ದ್ವಿ ಚಕ್ರ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 19:39 IST
Last Updated 4 ಸೆಪ್ಟೆಂಬರ್ 2019, 19:39 IST
   

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನ ಸವಾರನಿಗೆ ಕೇಂದ್ರ ಮೋಟಾರು ವಾಹನ ಕಾಯ್ದೆ 2019ರ (ತಿದ್ದುಪಡಿ) ಅನ್ವಯ ಬರೋಬ್ಬರಿ ₹ 17 ಸಾವಿರ ದಂಡ ವಿಧಿಸಲಾಗಿದೆ.

ಖಾಸಗಿ ಕಂಪನಿ ಉದ್ಯೋಗಿ ಆಕಾಶ್ ದಂಡ ಪಾವತಿಸಿದವರು. ಸೆ. 3ರಂದು ಸಂಜೆ 6 ಗಂಟೆ ಸುಮಾರಿಗೆ ಆಕಾಶ್ (25) ಸ್ನೇಹಿತನ ಜೊತೆ ತಲ್ಲಘಟ್ಟಪುರದಿಂದ ನಗರದ ಕಡೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ಈ ವೇಳೆ ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ. ರಘುವನಹಳ್ಳಿ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಮಾರಸ್ವಾಮಿ ಲೇಔಟ್‌ ಸಂಚಾರ ಠಾಣೆಯ ಎಎಸ್‍ಐ ಶಿವಣ್ಣ ಅವರು ಆಕಾಶ್‍ನನ್ನು ತಡೆದು ತಪಾಸಣೆ ನಡೆಸಿದ್ದಾರೆ. ಆಕಾಶ್ ಮದ್ಯ ಸೇವಿಸಿರುವುದು ಆಲ್ಕೋಮೀಟರ್ ಯಂತ್ರದಿಂದ ದೃಢಪಟ್ಟಿತ್ತು. ಹೀಗಾಗಿ, ಆಕಾಶ್ ವಿರುದ್ಧ ಮದ್ಯ ಸೇವಿಸಿ ವಾಹನ ಚಾಲನೆ, ಚಾಲನಾ ಪರವಾನಗಿ ಇಲ್ಲದಿರುವುದು, ಹೆಲ್ಮೆಟ್ ಧರಿಸದಿರುವ (ಚಾಲಕ ಹಾಗೂ ಹಿಂಬದಿ ಸವಾರ) ಅಪರಾಧಕ್ಕೆ ನೋಟಿಸ್‌ ನೀಡಿ, ನ್ಯಾಯಾಲಯದಲ್ಲಿ ದಂಡ ಪಾವತಿಸುವಂತೆ ಸೂಚಿಸಿದ್ದರು.

ಮೆಯೋಹಾಲ್‌ನಲ್ಲಿರುವ ಆರನೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆಕಾಶ್‌ ಅವರಿಗೆ ಮದ್ಯ ಸೇವಿಸಿ ವಾಹನ ಚಾಲನೆಗೆ ₹ 10 ಸಾವಿರ, ಚಾಲನಾ ಪರವಾನಿಗೆ ಇಲ್ಲದಿರುವುದಕ್ಕೆ ₹ 5 ಸಾವಿರ, ಚಾಲಕ ಮತ್ತು ಹಿಂಬದಿ ಸವಾರ ಹೆಲ್ಮೆಟ್‌ ಧರಿಸದಿರುವುದಕ್ಕೆ ₹ 2 ಸಾವಿರ ಸೇರಿ ಒಟ್ಟು ₹ 17 ಸಾವಿರ ದಂಡ ವಿಧಿಸಿದೆ.

ADVERTISEMENT

₹ 10 ಸಾವಿರ ದಂಡ: ಪಾನಮತ್ತನಾಗಿ ಲಾರಿ ಚಲಾಯಿಸಿದ ಹರಿಯಾಣದ ಬೇರುಲಾಲ್‌ ಎಂಬುವವರಿಗೆ ಹೆಬ್ಬಾಳ ಸಂಚಾರ ಪೊಲೀಸರುಶನಿವಾರ (ಆ. 31) ರಾತ್ರಿ ನೋಟಿಸ್‌ ನೀಡಿದ್ದರು. ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಮದ್ಯ ಸೇವಿಸಿ ಚಾಲನೆ ಮಾಡಿದ ಅಪರಾಧಕ್ಕೆ ₹ 10 ಸಾವಿರ ದಂಡ ವಿಧಿಸಿದೆ.

ಬುಧವಾರ ಮತ್ತೊಂದು ಪ್ರಕರಣ ದಾಖಲಿಸಿಕೊಂಡಿರುವ ಹೆಬ್ಬಾಳ ಸಂಚಾರ ಪೊಲೀಸರು, ಮದ್ಯ ಸೇವನೆ ಮತ್ತು ಚಾಲನಾ ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡುತ್ತಿದ್ದ ಗೂಡ್ಸ್ ವಾಹನದ ಚಾಲಕನಿಗೆ ನೋಟಿಸ್ ಕೊಟ್ಟು ಕೋರ್ಟ್‍ಗೆ ಕಳುಹಿಸಿದ್ದಾರೆ. ಚಾಲಕ ₹ 15 ಸಾವಿರ ದಂಡ ಪಾವತಿಸಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್‌ ಡಾ. ಬಿ.ಆರ್. ರವಿಕಾಂತೇಗೌಡ, ‘ಹೊಸ ದಂಡ ಪದ್ಧತಿ ಜಾರಿಗೆ ತಂದಿದ್ದೇವೆ. ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಹೆಚ್ಚಿನ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ವಾಹನ ಸವಾರರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.