ಬೆಂಗಳೂರು: ನಕಲಿ ಕಂಪನಿ ಮೂಲಕ ಇ–ಪೆಹಚಾನ್ ಕಾರ್ಡ್ ಸೃಷ್ಟಿಸಿ ಇಎಸ್‌ಐ ಆಸ್ಪತ್ರೆಯ ಚಿಕಿತ್ಸಾ ಕಾರ್ಡ್ ಮಾಡಿಕೊಡುತ್ತಿದ್ದ ಆರು ಮಂದಿ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀಧರ್, ರಮೇಶ್, ಶಿವಗಂಗಾ, ಶ್ವೇತಾ, ಶಶಿಕಲಾ ಹಾಗೂ ಮತ್ತಿತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.
‘ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯಲ್ಲಿ ಕೆಲವು ವ್ಯಕ್ತಿಗಳು ಬೇರೆ ಬೇರೆ ಹೆಸರಿನಲ್ಲಿ ನಕಲಿ ಕಂಪನಿ ಸೃಷ್ಟಿಸಿದ್ದರು. ಅದರಲ್ಲಿ ಕೆಲಸ ನಿರ್ವಹಿಸದೇ ಇರುವವರಿಗೆ ನಕಲಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವಂತೆ ಈ ಪೆಹಚಾನ್ ಕಾರ್ಡ್ ಸೃಷ್ಟಿಸುತ್ತಿದ್ದರು. ಆ ಕಾರ್ಡ್ ಸಹಾಯದಿಂದ ಆರೋಪಿಗಳು ಇಎಸ್‌ಐ ಆಸ್ಪತ್ರೆ ಚಿಕಿತ್ಸಾ ಕಾರ್ಡ್‌ಗಳನ್ನು ಮಾಡಿಕೊಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.
‘ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಪ್ರಕಾಶ್ ನಗರದ ನಿವಾಸಿ ವಿ.ಶ್ರೀಧರ್ ಎಂಬಾತ ರಮೇಶ್, ಶಿವಗಂಗಾ, ಶ್ವೇತಾ, ಶಶಿಕಲಾ (ಲೆಕ್ಕ ಪರಿಶೋಧಕಿ) ಸೇರಿದಂತೆ ಇತರೆ ವ್ಯಕ್ತಿಗಳು, ಅಕ್ರಮವಾಗಿ ಹಣ ಸಂಪಾದನೆ ಮಾಡಲು ಈ ದಂಧೆಯಲ್ಲಿ ತೊಡಗಿದ್ದರು. ಭೌತಿಕವಾಗಿ ಅಸ್ತಿತ್ವದಲ್ಲಿ ಇಲ್ಲದ ದೇವು ಮಾರ್ಕೆಟಿಂಗ್, ಭಾಸ್ಕರ್ ಎಂಟರ್‌ಪ್ರೈಸಸ್, ವಿಪಿಶ್ರೀ ಎಂಟರ್‌ಪ್ರೈಸಸ್, ಗೌರಿ ಮಾರ್ಕೆಟಿಂಗ್ ಹೆಸರಿನಲ್ಲಿ ನಕಲಿ ಕಂಪನಿ ಸೃಷ್ಟಿಸಿದ್ದರು. ಆ ಕಂಪನಿಗಳಲ್ಲಿ ಸಾರ್ವಜನಿಕರು ಹಾಗೂ ರೋಗಿಗಳು ಕೆಲಸ ಮಾಡಿದಂತೆ ದಾಖಲೆ ಸೃಷ್ಟಿಸಿ ವಂಚನೆ ಮಾಡಿದ್ದರು’ ಎಂದು ತನಿಖೆಯಿಂದ ಗೊತ್ತಾಗಿದೆ.
‘ಇಎಸ್‌ಐ ಮಾನ್ಯತೆ ಪಡೆದಿರುವ ಆಸ್ಪತ್ರೆಗಳಲ್ಲಿ ಅಧಿಕೃತ ನೌಕರರಿಗೆ ಸಿಗಬೇಕಾದ ಸೌಲಭ್ಯಗಳನ್ನು ತಪ್ಪಿಸಿ ನಕಲಿ ಇಎಸ್‌ಐ ಕಾರ್ಡ್ ಪಡೆದವರಿಗೆ ಚಿಕಿತ್ಸೆ ದೊರೆಯುವಂತೆ ಮಾಡುತ್ತಿದ್ದರು. ಇದರಿಂದ ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿದ್ದರು. ನೈಜ ಕಾರ್ಮಿಕರಿಗೆ ಆಸ್ಪತ್ರೆಯ ಹಾಸಿಗೆ, ಚಿಕಿತ್ಸೆ ಹಾಗೂ ಔಷಧೋಪಚಾರ ಸಿಗದಂತೆ ಈ ಜಾಲ ವಂಚಿಸುತ್ತಿತ್ತು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.