ADVERTISEMENT

ಎಂ.ಜಿ. ರಸ್ತೆಯ ಕಟ್ಟಡದಲ್ಲಿ ಬೆಂಕಿ ಅವಘಡ

​ಪ್ರಜಾವಾಣಿ ವಾರ್ತೆ
Published 5 ಮೇ 2024, 23:40 IST
Last Updated 5 ಮೇ 2024, 23:40 IST
ನಗರದ ಎಂ.ಜಿ. ರಸ್ತೆಯಲ್ಲಿರುವ ಜಿಕೆಬಿ ಆಪ್ಟಿಕಲ್ಸ್ ಮಳಿಗೆ ಕಟ್ಟಡದ ನೆಲಮಹಡಿಯಲ್ಲಿ ಭಾನುವಾರ ಸಂಜೆ ಕಾಣಿಸಿಕೊಂಡ ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು – ಪ್ರಜಾವಾಣಿ ಚಿತ್ರ 
ನಗರದ ಎಂ.ಜಿ. ರಸ್ತೆಯಲ್ಲಿರುವ ಜಿಕೆಬಿ ಆಪ್ಟಿಕಲ್ಸ್ ಮಳಿಗೆ ಕಟ್ಟಡದ ನೆಲಮಹಡಿಯಲ್ಲಿ ಭಾನುವಾರ ಸಂಜೆ ಕಾಣಿಸಿಕೊಂಡ ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು – ಪ್ರಜಾವಾಣಿ ಚಿತ್ರ    

ಬೆಂಗಳೂರು: ನಗರದ ಎಂ.ಜಿ.ರಸ್ತೆಯಲ್ಲಿರುವ ನಾಲ್ಕು ಅಂತಸ್ತಿನ ಕಟ್ಟಡದ ನೆಲಮಹಡಿಯಲ್ಲಿ ಭಾನುವಾರ ಬೆಂಕಿ ಅವಘಡ ಸಂಭವಿಸಿದ್ದು, ಪೀಠೋಪಕರಣ ಹಾಗೂ ಹಲವು ಸಾಮಗ್ರಿಗಳು ಸುಟ್ಟು ಕರಕಲಾಗಿವೆ.

‘ಮೆಟ್ರೊ ನಿಲ್ದಾಣ ಸಮೀಪದಲ್ಲಿರುವ ಜಿಕೆಬಿ ಆಪ್ಟಿಕಲ್ಸ್ ಮಳಿಗೆ ಇರುವ ಕಟ್ಟಡದ ನೆಲಮಹಡಿಯಲ್ಲಿ ಸಂಜೆ 7 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ದಟ್ಟ ಹೊಗೆ ಸಹ ಆವರಿಸಿತ್ತು. ಬೆಂಕಿ ಹಾಗೂ ಹೊಗೆ ನೋಡಿದ್ದ ಸ್ಥಳೀಯರು ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು’ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಹೇಳಿದರು.

‘ಸ್ಥಳದಲ್ಲಿ ಎರಡು ಗಂಟೆ ನಿರಂತರವಾಗಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಯಿತು. ವಿದ್ಯುತ್ ಶಾರ್ಟ್‌ ಸರ್ಕೀಟ್‌ನಿಂದ ಬೆಂಕಿ ಅವಘಡ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದರು.

ADVERTISEMENT

‘ಜಿಕೆಬಿ ಆಪ್ಟಿಕಲ್ಸ್‌ ಮಳಿಗೆಗೆ ಸೇರಿದ್ದ ಕನ್ನಡಕದ ಸಾಮಗ್ರಿಗಳು ಹಾಗೂ ಇತರೆ ವಸ್ತುಗಳನ್ನು ನೆಲಮಹಡಿಯಲ್ಲಿ ಸಂಗ್ರಹಿಸಲಾಗಿತ್ತು. ವಿದ್ಯುತ್‌ ಶಾರ್ಟ್‌ ಸರ್ಕೀಟ್‌ನಿಂದ ಬೆಂಕಿ ಕಾಣಿಸಿಕೊಂಡು, ಎಲ್ಲ ವಸ್ತುಗಳಿಗೆ ತಗುಲಿತ್ತು. ಕೆಲ ನಿಮಿಷಗಳಲ್ಲಿ ನೆಲಮಹಡಿಯಲ್ಲೆಲ್ಲ ಹೊಗೆ ಕಾಣಿಸಿಕೊಂಡು ಬೆಂಕಿ ಹೆಚ್ಚಾಗಿತ್ತು’ ಎಂದು ಸಿಬ್ಬಂದಿ ಹೇಳಿದರು.

‘ಘಟನಾ ಸ್ಥಳದಲ್ಲಿ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಇವುಗಳ ತಪಾಸಣೆಯಿಂದ ನಿಖರ ಕಾರಣ ತಿಳಿಯಲಿದೆ. ಕಟ್ಟಡದ ಮಾಲೀಕರು ಗಂಗಾರಾಮ್ ಎಂಬುದಾಗಿ ಗೊತ್ತಾಗಿದೆ. ಅವರನ್ನು ಪತ್ತೆ ಮಾಡಿ ಹೇಳಿಕೆ ಪಡೆಯಬೇಕಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.