ADVERTISEMENT

ಬೆಂಗಳೂರಿನ ರಾಜಾಜಿನಗರದ ಶೋರೂಂಗೆ ಬೆಂಕಿ: ಯುವತಿ ಸಜೀವದಹನ

ರಾಜಾಜಿನಗರದಲ್ಲಿ ನಡೆದ ಘಟನೆ: ಮೂವರಿಗೆ ಗಾಯ– ಸುಟ್ಟು ಹೋದ 25ಕ್ಕೂ ಹೆಚ್ಚು ಎಲೆಕ್ಟ್ರಿಕ್‌ ಸ್ಕೂಟರ್‌

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 19:55 IST
Last Updated 19 ನವೆಂಬರ್ 2024, 19:55 IST
   

ಬೆಂಗಳೂರು: ರಾಜಾಜಿನಗರದ ರಾಜ್‌ಕುಮಾರ್‌ ರಸ್ತೆಯಲ್ಲಿರುವ ಮೈ ಇ.ವಿ (ಎಲೆಕ್ಟ್ರಿಕ್‌) ಸ್ಕೂಟರ್‌ ಶೋರೂಂನಲ್ಲಿ ಮಂಗಳವಾರ ಸಂಜೆ ಬೆಂಕಿ ಅವಘಡ ಸಂಭವಿಸಿದ್ದು, ಶೋರೂಂನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಸಜೀವ ದಹನವಾಗಿದ್ದಾರೆ.

ಓಕಳಿಪುರದ ನಿವಾಸಿ ಪ್ರಿಯಾ(20) ಮೃತ ಯುವತಿ. ಮತ್ತೊಬ್ಬ ಸಿಬ್ಬಂದಿ ದಿಲೀಪ್‌ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ದಿಲೀಪ್‌ ಅವರ ಕೈಗಳಿಗೆ ಸುಟ್ಟ ಗಾಯಗಳಾಗಿವೆ. ಶೋರೂಮ್​ನಲ್ಲಿದ್ದ ವೇದಾವತಿ ಹಾಗೂ ರಾಜು ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಶೋರೂಂನಲ್ಲಿದ್ದ ವಿವಿಧ ಕಂಪನಿಯ 25ಕ್ಕೂ ಹೆಚ್ಚು ಸ್ಕೂಟರ್‌ಗಳು(ಇ.ವಿ) ಬೆಂಕಿಗೆ ಆಹುತಿ ಆಗಿವೆ.

ಕೊಠಡಿ ಒಳಗಿದ್ದ ಪ್ರಿಯಾ: ಮಂಗಳವಾರ ಸಂಜೆ 5.30ರ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆ ಇಡೀ ಶೋರೂಂ ಆವರಿಸಿ, ಧಗಧಗನೇ ಹೊತ್ತಿ ಉರಿಯಿತು. ಭೀಕರ
ಬೆಂಕಿಗೆ ಸ್ಕೂಟರ್‌ಗಳು, ಪೀಠೋಪಕರಣ ಹಾಗೂ ದಾಖಲೆಗಳು ಸಂಪೂರ್ಣ
ಭಸ್ಮವಾಗಿವೆ. ಯುವತಿ ಸಜೀವದಹನವಾದರೆ, ಆರು ಮಂದಿ ಹೊರಕ್ಕೆ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಅನಾಹುತ ಸಂಭವಿಸಿದ ಸಮಯದಲ್ಲಿ ಗ್ರಾಹಕರು ಇರಲಿಲ್ಲ.

ಪ್ರಿಯಾ ಅವರು ಮೂರು ವರ್ಷಗಳಿಂದ ಹಣಕಾಸು ವಿಭಾಗದಲ್ಲಿ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿದ್ದರು. ಬೆಂಕಿ ಹೊತ್ತಿಕೊಂಡ ವೇಳೆ ಒಳಭಾಗದ ಕೊಠಡಿಯಲ್ಲಿ ಅವರು ಇದ್ದರು. ಬೆಂಕಿ ಇ.ವಿ ಸ್ಕೂಟರ್‌ನ ಬ್ಯಾಟರಿಗಳಿಗೆ ತಗುಲಿ ವ್ಯಾಪಿಸಲು ಆರಂಭಿಸಿದ್ದರಿಂದ ಆಕೆಗೆ ಹೊರಗೆ ಬರಲು ಸಾಧ್ಯವಾಗಿಲ್ಲ. ಸುಟ್ಟುಕರಕಲಾದ ಸ್ಥಿತಿಯಲ್ಲಿ ಮೃತದೇಹ ಕೊಠಡಿಯಲ್ಲಿ ಸಿಕ್ಕಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದರು. 

ವಿದ್ಯುತ್‌ ಶಾರ್ಟ್‌ ಸರ್ಕಿಟ್‌ ಕಾರಣ: ಶೋರೂಂನಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಗೊತ್ತಾಗಿಲ್ಲ. ಶೋರೂಂ ಒಳಗಿದ್ದ ಎಲೆಕ್ಟ್ರಿಕ್‌ ಸ್ಕೂಟರ್‌ಗಳಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ ಉಂಟಾ
ಯಿತೇ ಅಥವಾ ಶೋರೂಂನ ವಿದ್ಯುತ್‌ ಮಾರ್ಗದಲ್ಲಿ ಶಾರ್ಟ್‌ ಸರ್ಕಿಟ್‌ ಉಂಟಾಯಿತೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಶೋ ರೂಂ
ನಲ್ಲಿ ಸುಮಾರು 25ಕ್ಕೂ ಅಧಿಕ ಎಲೆಕ್ಟ್ರಿಕ್‌ ಬೈಕ್‌ಗಳು ಇದ್ದವು. ಬೆಂಕಿ ಅವಘಡದಲ್ಲಿ ಎಲ್ಲಾ ಬೈಕ್‌ಗಳು ಸುಟ್ಟು ಕರಕಲಾಗಿವೆ. ಬೈಕ್‌ಗಳ ಬ್ಯಾಟರಿಗಳು ಸ್ಫೋಟಗೊಂಡ ಪರಿಣಾಮ ಶೋ ರೂಂನಲ್ಲಿ ಬೆಂಕಿಯ ಪ್ರಮಾಣ ಹೆಚ್ಚಾಯಿತು. ಹೀಗಾಗಿ, ಅಗ್ನಿಶಾಮಕ ಸಿಬ್ಬಂದಿ ಸುಮಾರು ಮೂರು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.

ಸಂಚಾರ ದಟ್ಟಣೆ: ರಾಜ್‌ಕುಮಾರ್‌ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಬೆಂಕಿ ಹೊತ್ತಿ ಉರಿಯುತ್ತಿದ್ದ ಕಾರಣ ವಾಹನ ಸವಾರರು ರಸ್ತೆಯಲ್ಲೇ ವಾಹನ ನಿಲ್ಲಿಸಿಕೊಂಡು ವೀಕ್ಷಿಸಿದರು. ರಾಜ್‌ ಕುಮಾರ್‌ ರಸ್ತೆ, ವಾಟಾಳ್‌ ನಾಗರಾಜ್‌ ರಸ್ತೆ, ರಾಜಾಜಿನಗರ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿತ್ತು.

‘ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುವುದು’ ಎಂದು ಪೊಲೀಸರು ತಿಳಿಸಿದರು.

ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಮೃತ ಯುವತಿಯ ಕುಟುಂಬಸ್ಥರು ಕಣ್ಣೀರು ಹಾಕಿದರು. ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶೋರೂಂ ಮಾಲೀಕ ಪುನೀತ್‌ ಗೌಡ ತಲೆಮರೆಸಿಕೊಂಡಿದ್ದಾರೆ.

‘ಜನ್ಮದಿನ ಆಚರಿಸಿಕೊಳ್ಳಲು ಅವಳೇ ಇಲ್ಲ’

ಬೆಂಕಿ ಅನಾಹುತದಲ್ಲಿ ಮೃತಪಟ್ಟ ಪ್ರಿಯಾ ಅವರ
ಜನ್ಮದಿನಾಚರಣೆ ಬುಧವಾರ ಇತ್ತು. ಇದಕ್ಕಾಗಿ ಮನೆಯಲ್ಲಿ ಸಿದ್ಧತೆಗಳು ನಡೆದಿದ್ದವು.

‘ಜನ್ಮ ದಿನಕ್ಕೆಂದು ಸೋಮವಾರ ಹೊಸ ಬಟ್ಟೆ ತೆಗೆಸಿಕೊಂಡಿದ್ದಳು. ಈಗ ಅವಳೇ ಇಲ್ಲ. ನನಗೆ ಏನೂ ತೋಚುತ್ತಿಲ್ಲ’ ಎಂದು ಪ್ರಿಯಾ ಅವರ ತಂದೆ ಆರ್ಮುಗಮ್‌ ಕಣ್ಣೀರು ಹಾಕಿದರು.

‘ಮಂಗಳವಾರ ಬೆಳಿಗ್ಗೆ ಹತ್ತು ಗಂಟೆಗೆ ಸುಮಾರಿಗೆ ಮನೆಯಿಂದ ಕೆಲಸಕ್ಕೆ ಹೊರಟಿದ್ದಳು. ಪ್ರತಿನಿತ್ಯ ರಾತ್ರಿ 8 ಗಂಟೆಗೆ ಸುಮಾರಿಗೆ ಮನೆಗೆ ಬರುತ್ತಿದ್ದಳು. ಶೋರೂಂನಲ್ಲಿ ಯಾವುದೇ ಸುರಕ್ಷತಾ ಕ್ರಮ ಇರಲಿಲ್ಲ. ಇದೇ ಕಾರಣಕ್ಕೆ ಅನಾಹುತ ಸಂಭವಿಸಿದೆ’ ಎಂದು ಆರೋಪಿಸಿದರು.

ಶೋ ರೂಂನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿಲ್ಲ. ಇದೇ ಅನಾಹುತಕ್ಕೆ ಕಾರಣವಾಗಿದೆ
ಯೂನಿಸ್‌ ಅಲಿ ಕೌಸರ್, ಉಪನಿರ್ದೇಶಕ, ಅಗ್ನಿಶಾಮಕ ದಳ

ಗಾಯಗೊಂಡ ಯುವಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.