ADVERTISEMENT

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ: ತಾಯಿ–ಮಗಳು ಸಜೀವ ದಹನ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 2:55 IST
Last Updated 22 ಸೆಪ್ಟೆಂಬರ್ 2021, 2:55 IST
ಬೆಂಗಳೂರು: ದೇವರಚಿಕ್ಕನಹಳ್ಳಿ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಬೆಂಕಿ ಅವಘಡ
ಬೆಂಗಳೂರು: ದೇವರಚಿಕ್ಕನಹಳ್ಳಿ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಬೆಂಕಿ ಅವಘಡ   

ಬೆಂಗಳೂರು: ಬೆಂಕಿಯ ಕೆನ್ನಾಲಗೆಯಿಂದ ತಪ್ಪಿಸಿಕೊಳ್ಳಲು ಮಹಿಳೆಯೊಬ್ಬರು ಹೃದಯವಿದ್ರಾವಕವಾಗಿ ಅಂಗಲಾಚುತ್ತಲೇ, ಹೊರಗೆ ನಿಂತ ಜನ ನೋಡ ನೋಡುತ್ತಿದ್ದಂತೆ ಅಗ್ನಿಯಲ್ಲಿ ಸುಟ್ಟುಹೋದ ದಾರುಣ ಘಟನೆ ಮಂಗಳವಾರ ನಡೆದಿದೆ.

ಬೊಮ್ಮನಹಳ್ಳಿ ಕ್ಷೇತ್ರದ ದೇವರ ಚಿಕ್ಕನಹಳ್ಳಿಯ ಆಶ್ರಿತ್ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಸಂಜೆ ಸಂಭವಿಸಿದ ಬೆಂಕಿ ಅವಘಡದಲ್ಲಿ, ಫ್ಲ್ಯಾಟ್‌ನ ಬಾಲ್ಕನಿಗೆ ಅಳವಡಿಸಿದ್ದ ಕಬ್ಬಿಣದ ಗ್ರಿಲ್‌ನಿಂದ ಹೊರ ಬರಲಾರದೇ ತಾಯಿ – ಮಗಳು ಸಜೀವವಾಗಿ ದಹನವಾಗಿದ್ದಾರೆ.

ಲಕ್ಷ್ಮಿದೇವಿ (82) ಹಾಗೂ ಅವರ ಮಗಳು ಭಾಗ್ಯರೇಖಾ (59) ಮೃತರು. ಮೊನ್ನೆಯಷ್ಟೇ ಈ ಕುಟುಂಬದವರು ಅಮೆರಿಕದಿಂದ ಬೆಂಗಳೂರಿಗೆ ಬಂದಿದ್ದರು ಎಂದು ಗೊತ್ತಾಗಿದೆ. ಈ ಕುಟುಂಬವು ಫ್ಲ್ಯಾಟ್‌ ನಂಬರ್ 210ರಲ್ಲಿ ವಾಸವಿತ್ತು. ಬಾಲ್ಕನಿಯಲ್ಲಿ ರಕ್ಷಣೆಗಾಗಿ ಕಬ್ಬಿಣದ ಗ್ರಿಲ್‌ ಅಳವಡಿಸಲಾಗಿತ್ತು. ಬೆಂಕಿ ಅವಘಡ ಸಂಭವಿಸಿದಾಗ, ಗ್ರಿಲ್‌ನಿಂದಾಗಿ ಹೊರಗೆ ಬರಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರಿಬ್ಬರು ಬೆಂಕಿಯಲ್ಲಿ ಬೆಂದು ಮೃತಪಟ್ಟಿದ್ದಾರೆ.

ADVERTISEMENT

‘ಅಪಾರ್ಟ್‌ಮೆಂಟ್ ಸಮುಚ್ಚಯದ ಮಹಡಿಯಲ್ಲಿರುವ ಫ್ಲ್ಯಾಟ್‌ನ ಅಡುಗೆ ಮನೆಯಲ್ಲಿ ಸಂಜೆ 4.30ರ ಸುಮಾರಿಗೆ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿತ್ತು. ಕೆಲ ನಿಮಿಷಗಳಲ್ಲೇ ಬೆಂಕಿ ಕೆನ್ನಾಲಗೆ ಇಡೀ ಫ್ಲ್ಯಾಟ್‌ ಆವರಿಸಿ ಧಗ ಧಗ ಉರಿಯಲಾರಂಭಿಸಿತ್ತು. ಅಕ್ಕ– ಪಕ್ಕದ ಫ್ಲ್ಯಾಟ್‌ನವರಿಗೆ ಜೋರಾದ ಸದ್ದು ಕೇಳಿಸಿತ್ತು. ಅವರೆಲ್ಲ ಫ್ಲ್ಯಾಟ್‌ನಿಂದ ಹೊರಗೆ ಬಂದು ನೋಡಿದಾಗ, ಹೊಗೆ ಹೆಚ್ಚಾಗಿತ್ತು. ಗಾಬರಿಗೊಂಡ ಎಲ್ಲರೂ ಹೊರಗೆ ಓಡಿಬಂದು ರಸ್ತೆಯಲ್ಲಿ ನಿಂತುಕೊಂಡಿದ್ದರು’ ಎಂದು ಅಗ್ನಿಶಾಮಕದ ದಳದ ಸಿಬ್ಬಂದಿ ಹೇಳಿದರು.

‘ಲಕ್ಷ್ಮಿದೇವಿ ಹಾಗೂ ಭಾಗ್ಯರೇಖಾ ಅವರು ಫ್ಲ್ಯಾಟ್‌ನಲ್ಲಿ ಸಿಲುಕಿಕೊಂಡಿದ್ದರು. ಬೆಂಕಿ ಹೆಚ್ಚಾಗಿದ್ದರಿಂದ ಅವರು ಹೊರಗೆ ಬರಲು ಸಾಧ್ಯವಾಗಲಿಲ್ಲ. ಬೆಂಕಿ ಕೆನ್ನಾಲಗೆ ಹೆಚ್ಚಿತ್ತು. ಅದೇ ಮನೆಯ ಕೊಠಡಿಯಲ್ಲಿದ್ದ ಲಕ್ಷ್ಮಿದೇವವಿ ಅವರ ಪತಿ ಭೀಮಸೇನ್, ಇಬ್ಬರನ್ನೂ ರಕ್ಷಿಸಲು ಯತ್ನಿಸಿ ವಿಫಲರಾದರು. ನಂತರ, ಅವರೊಬ್ಬರೇ ಹೊರಗೆ ಬಂದು ಪ್ರಾಣ ಉಳಿಸಿಕೊಂಡರು. ಅವರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದೂ ಅವರು ತಿಳಿಸಿದರು.

ಗ್ರಿಲ್‌ನೊಳಗೆ ‘ಬಂಧಿ’ಯಾಗಿ ದಹನ; ‘ಲಕ್ಷ್ಮಿದೇವಿ ಮನೆಯ ಕೊಠಡಿಯಲ್ಲಿ ಸುಟ್ಟು ಹೋಗಿದ್ದಾರೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಭಾಗ್ಯರೇಖಾ, ಮನೆಯೊಳಗಿಂದ ಹೊರಬಂದು ಬಾಲ್ಕನಿಯಲ್ಲಿ ನಿಂತಿದ್ದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

‘ಬಾಲ್ಕನಿಯ ಒಂದು ಭಾಗದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿತ್ತು. ಇನ್ನೊಂದು ಭಾಗದಲ್ಲಿ ನಿಂತಿದ್ದ ಭಾಗ್ಯರೇಖಾ, ತಮ್ಮನ್ನು ಬದುಕಿಸುವಂತೆ ಅಂಗಲಾಚುತ್ತಿದ್ದರು. ಗ್ರಿಲ್‌ ಇರದಿದ್ದರೆ ಹೊರಗೆ ಜಿಗಿದಾದರೂ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಿತ್ತು. ರಸ್ತೆಯಲ್ಲಿ ನಿಂತಿದ್ದ ಸ್ಥಳೀಯರೂ ಅಸಹಾಯಕ ರಾಗಿದ್ದರು’ ಎಂದು ನೋವಿನಿಂದ ಹೇಳಿದರು.

ತಡ ರಾತ್ರಿವರೆಗೂ ಕಾರ್ಯಾಚರಣೆ: ಸಂಜೆ 4.50ಕ್ಕೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ತಡರಾತ್ರಿಯವರೆಗೂ ಕಾರ್ಯಾಚರಣೆ ನಡೆಸಿದರು.ಅಷ್ಟರಲ್ಲಿ ಹಲವು ನಿವಾಸಿಗಳು, ಫ್ಲ್ಯಾಟ್‌ ನಿಂದ ಹೊರಗೆ ಓಡಿಬಂದು ಪ್ರಾಣ ಉಳಿಸಿಕೊಂಡಿದ್ದರು.

ಫ್ಲ್ಯಾಟ್‌ನಲ್ಲಿ ಉರಿಯುತ್ತಿದ್ದ ಬೆಂಕಿಯನ್ನು ಸಿಬ್ಬಂದಿ ನಂದಿಸಿದರು. ಅದೇ ಫ್ಲ್ಯಾಟ್‌ನಲ್ಲಿ ಮೃತದೇಹಗಳು ಸಿಕ್ಕವು.

ಎಂಟು ವರ್ಷಗಳ ಹಿಂದೆ ‘ಆಶ್ರಿತ್’ ಅಪಾರ್ಟ್‌ಮೆಂಟ್ ಸಮುಚ್ಚಯ ನಿರ್ಮಿಸಲಾಗಿತ್ತು. ಅದೇ ಅವಧಿಯಲ್ಲಿ ಹಲವರು ಫ್ಲ್ಯಾಟ್‌ ಖರೀದಿಸಿದ್ದರು. ಅವಘಡ ಸಂಬಂಧ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಶಾಸಕ ಸತೀಶ್ ರೆಡ್ಡಿ, ಬಿಬಿಎಂಪಿ ಜಂಟಿ ಆಯುಕ್ತ ರಾಮಕೃಷ್ಣ, ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಷಿ ಭೇಟಿ ನೀಡಿ ಕಾರ್ಯಾಚರಣೆ ಮಾಹಿತಿ ಪಡೆದರು.ಸ್ಥಳೀಯರ ವಾಸಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿದರು.

ಅಡುಗೆ ಅನಿಲ ಸೋರಿಕೆ ಶಂಕೆ

'ಅಡುಗೆ ಅನಿಲ ಸೋರಿಕೆಯಿಂದಾಗಿ ಬೆಂಕಿ ಹೊತ್ತಿಕೊಂಡು ಅನಾಹುತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಬೆಂಕಿ ಸಂಪೂರ್ಣವಾಗಿ ನಂದಿದ ನಂತರ, ಅವಶೇಷ ಗಳನ್ನು ಸಂಗ್ರಹಿಸಲಾಗುವುದು. ಅವುಗಳ ಪರಿಶೀಲನೆ ನಡೆಸಿದ ಬಳಿಕವೇ ನಿಖರ ಕಾರಣ ತಿಳಿಯಲಿದೆ’ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಹೇಳಿದರು.

'210 ಸಂಖ್ಯೆ ಫ್ಲ್ಯಾಟ್‌ನಲ್ಲಿ ಹೆಚ್ಚು ಹಾನಿಯಾಗಿದ್ದು, ಅಲ್ಲಿಯೇ ಇಬ್ಬರು ಮೃತಪಟ್ಟಿದ್ದಾರೆ. ಅವರ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಉಳಿದಂತೆ ಅಕ್ಕ–ಪಕ್ಕದ ಫ್ಲ್ಯಾಟ್‌ಗಳಲ್ಲಿ ಹೆಚ್ಚು ಹಾನಿ ಆಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ’ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.