ADVERTISEMENT

ಇ.ವಿ ಶೋರೂಂನಲ್ಲಿ ಬೆಂಕಿ ಅವಘಡ: ಮಾಲೀಕ, ಮ್ಯಾನೇಜರ್‌ ಸೆರೆ, ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 21:09 IST
Last Updated 20 ನವೆಂಬರ್ 2024, 21:09 IST
   

ಬೆಂಗಳೂರು: ರಾಜಾಜಿನಗರದ ಮೈ ಇ.ವಿ(ಎಲೆಕ್ಟ್ರಿಕ್‌) ಸ್ಕೂಟರ್ ಶೋರೂಂನಲ್ಲಿ ಸಂಭವಿಸಿದ ಬೆಂಕಿ ಅವಘಡ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದಡಿ ಶೋರೂಂ ಮಾಲೀಕ ಹಾಗೂ ವ್ಯವಸ್ಥಾಪಕರನ್ನು ರಾಜಾಜಿನಗರ ಠಾಣೆಯ ಪೊಲೀಸರು ಬುಧವಾರ ಬಂಧಿಸಿದ್ದರು. ನಂತರ, ಷರತ್ತುಬದ್ಧ ಜಾಮೀನಿನ ಮೇಲೆ ಇಬ್ಬರೂ ಬಿಡುಗಡೆ ಆಗಿದ್ದಾರೆ.

ಯಶವಂತಪುರದ ನಿವಾಸಿ, ಶೋರೂಂ ಮಾಲೀಕ ಪುನೀತ್‌ಗೌಡ ಅಲಿಯಾಸ್‌ ಎಚ್.ಜಿ.ಪುನೀತ್‌(36) ಹಾಗೂ ರಾಜಾಜಿನಗರದ ಆರನೇ ಬ್ಲಾಕ್‌, ನಾಲ್ಕನೇ ಕ್ರಾಸ್‌ನ ಅಡ್ಡರಸ್ತೆಯ ನಿವಾಸಿಯಾಗಿರುವ ಮಳಿಗೆ ವ್ಯವಸ್ಥಾಪಕ ಜಿ.ಯುವರಾಜ್‌ ಬಂಧಿತರು.

‘ಮಂಗಳವಾರ ಸಂಜೆ ಘಟನೆ ನಡೆದಿತ್ತು. ಅದಾದ ಮೇಲೆ ಇಬ್ಬರೂ ತಲೆಮರೆಸಿ ಕೊಂಡಿದ್ದರು. ನಿರ್ಲಕ್ಷ್ಯ ವಹಿಸಿದ ಆರೋಪದ ಅಡಿ ಇಬ್ಬರನ್ನೂ ಬುಧವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಈ ಪ್ರಕರಣದಲ್ಲಿ ವಿಧಿಸಬಹುದಾದ ಶಿಕ್ಷೆ ಪ್ರಮಾಣ ಏಳು ವರ್ಷಕ್ಕಿಂತ ಕಡಿಮೆಯಿದ್ದು,
ಇಬ್ಬರಿಗೂ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ’ ಎಂದು ಪೊಲೀಸರು
ತಿಳಿಸಿದರು.

ADVERTISEMENT

ಹಾಸನ ತಾಲ್ಲೂಕಿನ ದುದ್ದ ಹೋಬಳಿಯ ಉಲ್ಲೇನಹಳ್ಳಿ ಗ್ರಾಮದ ಪುನೀತ್‌ಗೌಡ ಅವರು ರಾಜಾಜಿನಗರದ ರಾಜ್‌ಕುಮಾರ್ ರಸ್ತೆಯಲ್ಲಿ ಇ.ವಿ ಸ್ಕೂಟರ್ ಶೋರೂಂ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದರು.

ಶೋರೂಂನಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಓಕಳಿಪುರದ ನಿವಾಸಿ, ಹಣಕಾಸು ವಿಭಾಗದಲ್ಲಿ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿದ್ದ ಪ್ರಿಯಾ(27) ಅವರು ಸಜೀವ ದಹನ ಆಗಿದ್ದರು. ಘಟನೆಯಲ್ಲಿ ದಿಲೀಪ್ ಸೇರಿದಂತೆ ಮೂವರು ಗಾಯಗೊಂಡಿದ್ದರು. ಘಟನೆಯಲ್ಲಿ 25ಕ್ಕೂ ಹೆಚ್ಚು ಇ.ವಿ ಸ್ಕೂಟರ್‌ಗಳು ಬೆಂಕಿಗೆ ಆಹುತಿ ಆಗಿವೆ.

ಕೊಠಡಿಯತ್ತ ಓಡಿದ್ದರೇ ಯುವತಿ?: ಘಟನೆ ನಡೆದಾಗ ಶೋರೂಂನಲ್ಲಿ ಏಳು ಮಂದಿ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಬ್ಯಾಟರಿಗಳ ಸ್ಫೋಟದಿಂದ ಉಂಟಾದ ಶಬ್ದಕ್ಕೆ ಹೆದರಿದ ಆರು ಮಂದಿ ಹೊರಕ್ಕೆ ಓಡಿಬಂದು ಪ್ರಾಣ ಉಳಿಸಿಕೊಂಡಿದ್ದರು. ಪ್ರಿಯಾ ಅವರು ಶೋರೂಂ ಒಳಗಿದ್ದ ಕೊಠಡಿಯತ್ತ ತೆರಳಿದ್ದರು. ಅಲ್ಲಿಂದ ವಾಪಸ್‌ ಬರಲು ಅವರಿಗೆ ಸಾಧ್ಯವಾಗಿರಲಿಲ್ಲ ಎಂದು ಮೂಲಗಳು ಹೇಳಿವೆ.

ಘಟನೆಗೆ ಕಾರಣ ಪತ್ತೆಹಚ್ಚಲು ಅಗ್ನಿಶಾಮಕ ದಳ, ಪೊಲೀಸ್ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಬುಧವಾರ ಬೆಳಿಗ್ಗೆ ಎಫ್‌ಎಸ್‌ಎಲ್‌ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೆಲವು ಮಾದರಿಗಳನ್ನು ಸಂಗ್ರಹಿಸಿ, ವೈಜ್ಞಾನಿಕ ಪರಿಶೀಲನೆಗೆ ಕೊಂಡೊಯ್ದರು ಎಂದು ಗೊತ್ತಾಗಿದೆ.

‘ವಿದ್ಯುತ್‌ ಮಾರ್ಗದಲ್ಲಿ ಉಂಟಾದ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಅವಘಡ ಸಂಭವಿಸಿತೇ ಅಥವಾ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಬ್ಯಾಟರಿ ಸ್ಫೋಟ ಸಂಭವಿಸಿದೆಯೆ? ಎಂಬುದು ತನಿಖೆಯಿಂದ ಗೊತ್ತಾಗಲಿದೆ’ ಎಂದು ಪೊಲೀಸರು ತಿಳಿಸಿದರು.

ಪ್ರಿಯಾ ಕುಟುಂಬಸ್ಥರ ಆಕ್ರಂದನ

ಪ್ರಿಯಾ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ವಿಕ್ಟೋರಿಯಾ ಅಸ್ಪತ್ರೆಯಲ್ಲಿ ನಡೆಯಿತು. ಬಳಿಕ, ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು.

‘ಮಗಳು ಲೆಕ್ಕ ಪರಿಶೋಧಕ(ಸಿ.ಎ) ಪರೀಕ್ಷೆ ತೆಗೆದುಕೊಂಡಿದ್ದಳು. ಮನೆಯ ಜವಾಬ್ದಾರಿ ಹೊತ್ತುಕೊಂಡಿದ್ದಳು. ಅವಳೇ ಇಲ್ಲ’ ಎಂದು ಪ್ರಿಯಾ ಕುಟುಂಬಸ್ಥರು ಕಣ್ಣೀರು ಸುರಿಸಿದರು.

ಬ್ಯಾಟರಿ ಸ್ಫೋಟ?‌

ಚಾರ್ಜ್‌ಗೆ ಹಾಕಿದ್ದ ಬ್ಯಾಟರಿಯೊಂದು ಸ್ಪೋಟಗೊಂಡಿದ್ದರಿಂದ ಅಗ್ನಿ ಅವಘಡ ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಶಬ್ದದ ನಂತರ ಹೊರಕ್ಕೆ ಬಂದು ವೀಕ್ಷಿಸಿದೆವು. ಆ ವೇಳೆ ಶೋರೂಂ ಹೊತ್ತಿ ಉರಿಯುತ್ತಿತ್ತು. ಕೆಲವರು ಕಿರುಚಿಕೊಂಡು ಹೊರಕ್ಕೆ ಬರುತ್ತಿದ್ದರು. ಅದಾದ ಮೇಲೆ ಬ್ಯಾಟರಿಗಳು ಸ್ಫೋಟವಾಗುವ ಶಬ್ದ ಕೇಳಿಸುತ್ತಲೇ ಇತ್ತು ಎಂದು ಘಟನೆಯ ಪ್ರತ್ಯಕ್ಷದರ್ಶಿಯಾಗಿದ್ದ ಸ್ಥಳೀಯರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.