ADVERTISEMENT

ಬೆಂಗಳೂರು: ಉದ್ಯಾನ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಅವಘಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಆಗಸ್ಟ್ 2023, 4:00 IST
Last Updated 19 ಆಗಸ್ಟ್ 2023, 4:00 IST
ಉದ್ಯಾನ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿರುವ ದೃಶ್ಯ
ಉದ್ಯಾನ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿರುವ ದೃಶ್ಯ   ಟ್ವಿಟರ್ ಚಿತ್ರ

ಬೆಂಗಳೂರು: ಇಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ (ಮೆಜೆಸ್ಟಿಕ್) ನಿಂತಿದ್ದ ರೈಲಿನ ಎರಡು ಬೋಗಿಗಳಲ್ಲಿ ಬೆಂಕಿ ಹತ್ತಿಕೊಂಡಿದ್ದು, ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸಿದೆ. ಪ್ರಯಾಣಿಕರು ಇರದಿದ್ದ ಕಾರಣ ಯಾವುದೇ ಅಪಾಯ ಉಂಟಾಗಿಲ್ಲ.

ಮುಂಬೈಯ ಛತ್ರಪತಿ ಶಿವಾಜಿ ಟರ್ಮಿನಲ್ ನಿಂದ ಹೊರಟಿದ್ದ ಉದ್ಯಾನ್ ಎಕ್ಸ್‌ಪ್ರೆಸ್ ರೈಲು (ಟಿ.ನಂ. 11301 ) ಕೆಎಸ್‌ಆರ್ ನಿಲ್ದಾಣದ ಪ್ಲಾಟ್‌ಫಾರ್ಮ್‌ 3ಕ್ಕೆ ಶನಿವಾರ ಬೆಳಿಗ್ಗೆ 5.45ಕ್ಕೆ ತಲುಪಿತ್ತು. ಪ್ರಯಾಣಿಕರು ಇಳಿದು ಹೋಗಿದ್ದರು.

ಬೆಳಿಗ್ಗೆ ಸುಮಾರು 7.10ರ ಸಮಯಕ್ಕೆ ಎಂಜಿನ್ ಹಿಂಭಾಗ ಇರುವ ಬಿ1 ಮತ್ತು ಬಿ2 ಬೋಗಿಗಳಲ್ಲಿ ಹೊಗೆ ಕಾಣಿಸಿಕೊಂಡಿದ್ದು, ರೈಲ್ವೆ ಸಿಬ್ಬಂದಿ ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. 7.35ಕ್ಕೆ ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸಿತು.

ADVERTISEMENT

ಬೆಂಕಿ ಕಾಣಿಸಿಕೊಳ್ಳಲು ಕಾರಣ ಏನು ಎಂಬುದು ಗೊತ್ತಾಗಿಲ್ಲ. ತನಿಖೆ ನಡೆಯುತ್ತಿದೆ. ಪ್ರಯಾಣಿಕರಿಗಾಗಲಿ, ಅಕ್ಕಪಕ್ಕದಲ್ಲಿ ಇದ್ದ ಇತರ ರೈಲುಗಳಿಗಾಗಲಿ ಯಾವುದೇ ಅಪಾಯವಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ತನಿಖಾ ಸಮಿತಿ ರಚನೆ: ಬೆಂಕಿ ಅವಘಡಕ್ಕೆ ಕಾರಣ ಏನು ಎಂಬುದು ಇನ್ನೂ ಗೊತ್ತಾಗಿಲ್ಲ. ಅದರ ಪತ್ತೆಗಾಗಿ ತನಿಖಾ ಸಮಿತಿ ರಚಿಸಲಾಗಿದೆ. ಈ ಸಮಿತಿ ಪರಿಶೀಲಿಸಿ ವರದಿ ನೀಡಲಿದೆ ಎಂದು ರೈಲ್ವೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬೆಂಕಿ ಅವಘಡ ಉಂಟಾಗಿದ್ದ ಆ ಎರಡು ಬೋಗಿಗಳನ್ನು ಡಿಪೊಗೆ ಕಳುಹಿಸಲಾಗಿದೆ. ಎಂಜಿನ್‌ನಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ. ಬೇರೆ ಎರಡು ಬೋಗಿಗಳನ್ನು ಜೋಡಿಸಿಕೊಂಡು ಅದೇ ಉದ್ಯಾನ್ ಎಕ್ಸ್‌ಪ್ರೆಸ್ ರೈಲು ಶನಿವಾರ ರಾತ್ರಿ ಮುಂಬೈಯ ಛತ್ರಪತಿ ಶಿವಾಜಿ ಟರ್ಮಿನಲ್‌ಗೆ ಹೊರಟಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.