ADVERTISEMENT

ಚಾಮರಾಜಪೇಟೆ ಸ್ಫೋಟ ಪ್ರಕರಣ: ಮತ್ತೊಬ್ಬ ಸಾವು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 22:53 IST
Last Updated 24 ಸೆಪ್ಟೆಂಬರ್ 2021, 22:53 IST
   

ಬೆಂಗಳೂರು: ಚಾಮರಾಜಪೇಟೆಯ ಸೀತಾಪತಿ ಅಗ್ರಹಾರದಲ್ಲಿ ಸಂಭವಿಸಿದ್ದ ಪಟಾಕಿ ಸ್ಫೋಟದಲ್ಲಿ ತೀವ್ರ ಗಾಯಗೊಂಡಿದ್ದ ರಂಗಸ್ವಾಮಿ ಅಲಿಯಾಸ್ ಅಂಬೂಸ್ವಾಮಿ (72) ಎಂಬುವರು ಶುಕ್ರವಾರ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮೂರಕ್ಕೆ ಏರಿದೆ.

‘ಮೃತ ಅಂಬೂಸ್ವಾಮಿ, ತಳ್ಳುಗಾಡಿಯಲ್ಲಿ ತಿನಿಸು ಮಾರಾಟ ಮಾಡುತ್ತಿದ್ದರು. ಅವಘಡದಿಂದ ಗಾಯಗೊಂಡಿದ್ದ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ತಳ್ಳುಗಾಡಿಯಲ್ಲಿ ತಿನಿಸು ಇಟ್ಟುಕೊಂಡಿದ್ದ ಅಂಬೂಸ್ವಾಮಿ, ವ್ಯಾಪಾರಕ್ಕೆಂದು ಸೀತಾಪತಿ ಅಗ್ರಹಾರಕ್ಕೆ ಹೋಗಿದ್ದರು. ಅದೇ ವೇಳೆಯೇ ಪಟಾಕಿ ಸ್ಫೋಟಗೊಂಡಿತ್ತು. ಅಂಬೂಸ್ವಾಮಿ ತೀವ್ರವಾಗಿ ಗಾಯಗೊಂಡಿದ್ದರು’ ಎಂದೂ ತಿಳಿಸಿದರು.

ADVERTISEMENT

ಅವಘಡದಲ್ಲಿ ಮನೋಹರ್ ಹಾಗೂ ಅಸ್ಲಂಪಾಷಾ ಗುರುವಾರವೇ ಮೃತಪಟ್ಟಿದ್ದರು. ಗಾಯಗೊಂಡಿರುವ ಗಣಪತಿ, ಮಂಜುನಾಥ್, ಜೇಮ್ಸ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತನಿಖೆ ಮುಂದುವರಿಕೆ, ಮಾದರಿ ಪರೀಕ್ಷೆ: ಪಟಾಕಿ ಸ್ಫೋಟದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಘಟನಾ ಸ್ಥಳದಲ್ಲಿ ಮಾದರಿ ಸಂಗ್ರಹಿಸಿರುವ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಪರೀಕ್ಷೆ ನಡೆಸುತ್ತಿದ್ದಾರೆ.

‘ಸ್ಫೋಟಕ್ಕೆ ಪಟಾಕಿ ಕಾರಣವೆಂಬುದು ಗೊತ್ತಾಗಿದೆ. ಆದರೆ, ಬಾಕ್ಸ್‌ನಲ್ಲಿಟ್ಟಿದ್ದ ಪಟಾಕಿಗೆ ಬೆಂಕಿ ಹೇಗೆ ತಗುಲಿತು ಎಂಬ ಪ್ರಶ್ನೆ ಕಾಡುತ್ತಿದೆ. ತನಿಖೆಯಿಂದಲೇ ಇದಕ್ಕೆ ಉತ್ತರ ಸಿಗಬೇಕಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ‘ಗಾಯಾಳುಗಳ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪಟಾಕಿ ಸಂಗ್ರಹಿಸಿದ್ದ ಗೋದಾಮು ಮಾಲೀಕ ಬಾಬುನನ್ನು ಬಂಧಿಸಲಾಗಿದೆ’ ಎಂದೂ ಅಧಿಕಾರಿ ತಿಳಿಸಿದರು.

ಗೋದಾಮುಗಳ ಮೇಲೆ ದಾಳಿ: ಅವಘಡದಿಂದ ಎಚ್ಚೆತ್ತ ಪೊಲೀಸರು, ಸಿಟಿ ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿರುವ ಹಲವು ಗೋದಾಮುಗಳ ಮೇಲೆ ಶುಕ್ರವಾರ ದಾಳಿ ನಡೆಸಿದರು.

ಎಲ್ಲ ಮಾಹಿತಿಗಳನ್ನು ಪೊಲೀಸರು ದಾಖಲಿಸಿಕೊಂಡರು. ಕಾಫಿ ಮಾರಾಟ ಕಂಪನಿಯೊಂದರ ಗೋದಾಮು ಮೇಲೆ ದಾಳಿ ಮಾಡಿದಾಗ, ಅಕ್ರಮವಾಗಿ ಸಂಗ್ರಹಿಸಿದ್ದ ಅಡುಗೆ ಅನಿಲದ 16 ಸಿಲಿಂಡರ್‌ಗಳು ಸಿಕ್ಕವು. ಅವುಗಳನ್ನು ಪೊಲೀಸರು ಜಪ್ತಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.