ADVERTISEMENT

130 ಕಿ.ಮೀ ಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸಿದರೆ ಎಫ್‌ಐಆರ್: ಅಲೋಕ್​ ಕುಮಾರ್

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 14:43 IST
Last Updated 28 ಜುಲೈ 2024, 14:43 IST
ಅಲೋಕ್‌ ಕುಮಾರ್‌
ಅಲೋಕ್‌ ಕುಮಾರ್‌   

ಬೆಂಗಳೂರು: ವೇಗದ ಸಂಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಆಗಸ್ಟ್ 1ರಿಂದ 130 ಕಿ.ಮೀ ಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ವಾಹನಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು. ರಾಜ್ಯದಾದ್ಯಂತ ಈ ಕ್ರಮ ಜಾರಿಗೆ ಬರಲಿದೆ ಎಂದು ಹೆಚ್ಚುವರಿ ಪೊಲೀಸ್​ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗ) ಅಲೋಕ್​ ಕುಮಾರ್ ತಿಳಿಸಿದ್ದಾರೆ.

ಈ ಕುರಿತು ‘ಎಕ್ಸ್‌’ ಖಾತೆಯಲ್ಲಿ ಸಂದೇಶ ಪೋಸ್ಟ್‌ ಮಾಡಿರುವ ಅವರು, ‘ಸ್ಪಾಟ್‌ ಸ್ಪೀಡ್‌ ಮತ್ತು ಸೆಕ್ಷನಲ್‌ ಸ್ಪೀಡ್‌ ಆಧಾರದಲ್ಲಿ ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಿಧಿಸಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.

ಈ ರೀತಿಯ ಪ್ರಕರಣಗಳಲ್ಲಿ ₹2 ಸಾವಿರ ವರೆಗೆ ದಂಡ ಅಥವಾ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

ADVERTISEMENT

‘ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ಸಂಭವಿಸುವ ಅಪಘಾತಗಳ ಪೈಕಿ ಶೇಕಡ 90ರಷ್ಟು ಅತಿವೇಗದ ಕಾರಣದಿಂದಲೇ ಎಂದು ವಿವಿಧ ಇಲಾಖೆಗಳ ಮೂಲಕ ಸರ್ಕಾರ ನಡೆಸಿದ್ದ ಸಮೀಕ್ಷೆಯಿಂದ ಗೊತ್ತಾಗಿದೆ. ಇದಕ್ಕೆ ಕಡಿವಾಣ ಹಾಕುವುದಕ್ಕಾಗಿ 130 ಕಿ.ಮೀ ಗಿಂತ ವೇಗವಾಗಿ ವಾಹನ ಚಾಲನೆ ಮಾಡಿದಲ್ಲಿ, ಅದನ್ನು ಅಜಾಗರೂಕತೆ ಮತ್ತು ನಿರ್ಲಕ್ಷ್ಯದ ವಾಹನ ಚಾಲನೆ ಎಂದು ಪರಿಗಣಿಸಿ ಪ್ರಕರಣ ದಾಖಲಿಸಲಾಗುವುದು’ ಎಂದು ಅಲೋಕ್‌ ಕುಮಾರ್‌ ಹೇಳಿದ್ದಾರೆ.

ಜುಲೈ 25 ರಂದು ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ 155 ವಾಹನಗಳು 130 ಕಿ.ಮೀ ಗಿಂತ ಹೆಚ್ಚು ವೇಗದಲ್ಲಿ ಸಂಚರಿಸಿರುವುದನ್ನು ಗುರುತಿಸಲಾಗಿದೆ. ಇದರಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಮತ್ತು ಸರ್ಕಾರಿ ವಾಹನಗಳೂ ಸೇರಿವೆ. ಇನ್ನೂ ಕೆಲ ವಾಹನಗಳು 159 ಕಿ.ಮೀ ವೇಗದಲ್ಲಿ ಸಂಚರಿಸಿರುವುದೂ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಪ್ರಸ್ತುತ ಮೈಸೂರು– ಬೆಂಗಳೂರು ಹೆದ್ದಾರಿಯಲ್ಲಿ ಹತ್ತು ಕಡೆ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರ ಕಡೆಗಳಲ್ಲೂ ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.