ADVERTISEMENT

ವಿಧಾನಸಭೆ | ಭೂ ಪರಿವರ್ತನೆ ಸರಳೀಕರಣಕ್ಕೆ ಮಸೂದೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2023, 23:30 IST
Last Updated 18 ಜುಲೈ 2023, 23:30 IST
ವಿಧಾನಸಭೆ ಕಲಾಪ
ವಿಧಾನಸಭೆ ಕಲಾಪ   

ಬೆಂಗಳೂರು: ಕೃಷಿ ಜಮೀನನ್ನು ಸ್ವಯಂಘೋಷಣೆಯೊಂದಿಗೆ ಭೂ ಪರಿವರ್ತನೆ ಮಾಡಲು ಅವಕಾಶ ಕಲ್ಪಿಸುವ ಭೂ ಕಂದಾಯ ತಿದ್ದುಪಡಿ ಮಸೂದೆ–2023 ಸೇರಿದಂತೆ ಐದು ಮಸೂದೆಗಳನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾಯಿತು.

ಕೃಷಿ ಜಮೀನುಗಳನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ಸ್ವಯಂಘೋಷಣೆಯ ಪ್ರಮಾಣಪತ್ರದೊಂದಿಗೆ ಭೂ ಪರಿವರ್ತನೆ ಮಾಡಿಕೊಳ್ಳಲು ಈ ತಿದ್ದುಪಡಿ ಅವಕಾಶ ಕಲ್ಪಿಸಲಿದೆ. ಜಮೀನು ಮಾಲೀಕರು ಸ್ವಯಂಘೋಷಣೆಯ ಪ್ರಮಾಣಪತ್ರ ಸಲ್ಲಿಸಿದ ದಿನದಿಂದ 30 ದಿನಗಳೊಳಗೆ ಜಿಲ್ಲಾಧಿಕಾರಿ ತೀರ್ಮಾನ ಪ್ರಕಟಿಸದಿದ್ದರೆ ಅರ್ಜಿಗೆ ಅನುಮೋದನೆ ನೀಡಲಾಗಿದೆ ಎಂಬುದಾಗಿ ಭಾವಿಸತಕ್ಕದ್ದು ಎಂದು ಈ ತಿದ್ದುಪಡಿ ಹೇಳುತ್ತದೆ.

ಸುಳ್ಳು ದಸ್ತಾವೇಜುಗಳ ನೋಂದಣಿಯನ್ನು ರದ್ದುಪಡಿಸಲು ಜಿಲ್ಲಾ ನೋಂದಣಾಧಿಕಾರಿಗೆ ಅಧಿಕಾರ ನೀಡುವ ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ– 2023, ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳ ನೌಕರರ ಸ್ಥಳ ನಿರೀಕ್ಷೆಗೆ ಸೇವಾ ಷರತ್ತುಗಳನ್ನು ವಿಧಿಸುವ ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ–2023 ಅನ್ನೂ ಮಂಡಿಸಲಾಯಿತು.

ADVERTISEMENT

ವಾರ್ಷಿಕ ₹ 50 ಸಾವಿರಕ್ಕಿಂತ ಕಡಿಮೆ ಆದಾಯ ಹೊಂದಿರುವ ಬಡ ಕುಟುಂಬಗಳು ದಾಖಲಿಸಿದ ಅಥವಾ ಅವರ ವಿರುದ್ಧದ ಪ್ರಕರಣಗಳನ್ನು ದಿನದ ವಿಚಾರಣೆಯ ಪಟ್ಟಿಯಲ್ಲಿ ಆದ್ಯತೆ ಮೇಲೆ ತೆಗೆದುಕೊಳ್ಳಲು ಅವಕಾಶ ಕಲ್ಪಿಸುವ ಸಿವಿಲ್‌ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ಮಸೂದೆ–2023 ಹಾಗೂ ರಾಜ್ಯ ಸರ್ಕಾರದ ವ್ಯಾಜ್ಯಗಳ ನಿರ್ವಹಣೆಯಲ್ಲಿ ಹೊಣೆಗಾರಿಕೆ ನಿಗದಿಪಡಿಸುವ ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ ಮಸೂದೆ–2023 ಅನ್ನೂ ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.