ADVERTISEMENT

ಐದು ಗ್ಯಾರಂಟಿಗಳು ಹೊರೆಯಲ್ಲ: ಬಿ.ಕೆ. ಚಂದ್ರಶೇಖರ್‌

​ಪ್ರಜಾವಾಣಿ ವಾರ್ತೆ
Published 10 ಜೂನ್ 2023, 20:43 IST
Last Updated 10 ಜೂನ್ 2023, 20:43 IST
   

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಜಾರಿಗೊಳಿಸುತ್ತಿರುವ ಐದು ಗ್ಯಾರಂಟಿಗಳು ಬೊಕ್ಕಸಕ್ಕೆ ಹೊರೆಯಾಗುವುದಿಲ್ಲ ಎಂದು ವಿಧಾನ ಪರಿಷತ್‌ನ ಮಾಜಿ ಸಭಾಪತಿ ಬಿ.ಕೆ. ಚಂದ್ರಶೇಖರ್‌, ಅರ್ಥಶಾಸ್ತ್ರಜ್ಞ ಆರ್.ಎಸ್. ದೇಶಪಾಂಡೆ ಹಾಗೂ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಜಿ ನಿರ್ದೇಶಕ ವಿ.ಎಸ್. ಪ್ರಕಾಶ್‌ ಪ್ರತಿಪಾದಿಸಿದ್ದಾರೆ.

ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಈ ಗ್ಯಾರಂಟಿಗಳು ಜನರ ಜೀವನೋಪಾಯವನ್ನು ಕಂಡುಕೊಳ್ಳುವ ಪ್ರಮುಖ ಮಾರ್ಗಗಳಾಗಿವೆ. ಸಮಾಜದ ಅತ್ಯಂತ ಬಡ ಸಮುದಾಯಗಳಿಗೆ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಬೇಕಾದ ನೆರವನ್ನು ಈ ಗ್ಯಾರಂಟಿಗಳು ನೀಡಲಿವೆ. ಘನತೆಯಿಂದ ಬದುಕುವ ಹಕ್ಕನ್ನು ಸಂವಿಧಾನ ನೀಡಿದ್ದು, ಅದರ ಆಶಯದಲ್ಲೇ ಈ ಯೋಜನೆಗಳು ರೂಪುಗೊಂಡಿವೆ ಎಂದು ಅವರು ಹೇಳಿದ್ದಾರೆ.

2023-24ರ ಬಜೆಟ್ ಪ್ರಕಾರ ಕರ್ನಾಟಕ ಸರ್ಕಾರಕ್ಕೆ ಬರುವ ಆದಾಯ ₹ 2.25 ಲಕ್ಷ ಕೋಟಿಯಷ್ಟಿದೆ. ಎಲ್ಲ ಯೋಜನೆಗಳಿಗೆ ₹ 50,500 ಕೋಟಿಯಷ್ಟು ವೆಚ್ಚವಾಗಬಹುದು ಎಂಬ ಅಂದಾಜಿದೆ. ಬೃಹತ್ ಆದಾಯ ಇರುವ ರಾಜ್ಯಕ್ಕೆ ಇದು ಹೊರೆಯಾಗುವುದಿಲ್ಲ ಎಂದು ಅವರು ವಿವರಿಸಿದ್ದಾರೆ. 

ADVERTISEMENT

ಗೃಹಜ್ಯೋತಿ ಯೋಜನೆಯಲ್ಲಿ ಎಲ್ಲ ಮನೆಗಳಿಗೆ ತಿಂಗಳಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತದೆ.  ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಮನೆಯ ಅಂಕಿಅಂಶಗಳ ಆಧಾರದ ಮೇಲೆ ವೆಚ್ಚವು ವಾರ್ಷಿಕ ₹ 13,500 ಕೋಟಿ ಆಗಬಹುದು. ಗೃಹ ಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನಿಗೆ ತಿಂಗಳಿಗೆ ₹ 2,000 ನೀಡಲಾಗುತ್ತದೆ. ಇದಕ್ಕೆ ಅಂದಾಜು ₹ 30,000 ಕೋಟಿ ಖರ್ಚಾಗಬಹುದು ಎಂದು ಅವರು ವಿವರಿಸಿದ್ದಾರೆ.

ಅನ್ನ ಭಾಗ್ಯ ಯೋಜನೆಯಡಿ ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ವ್ಯಕ್ತಿಗೆ 10 ಕೆ.ಜಿ ಅಕ್ಕಿಯನ್ನು ಒದಗಿಸಲಾಗುತ್ತದೆ. ರಾಜ್ಯದಲ್ಲಿ ಈಗಾಗಲೇ ಪ್ರತಿಯೊಬ್ಬರಿಗೆ ತಿಂಗಳಿಗೆ 5 ಕೆ.ಜಿ. ಅಕ್ಕಿಯನ್ನು ನೀಡುತ್ತಿದೆ. ಹೆಚ್ಚುವರಿ ಅವಶ್ಯಕತೆ ಪ್ರತಿ ವ್ಯಕ್ತಿಗೆ 5 ಕೆ.ಜಿ. ನೀಡಲಾಗುತ್ತದೆ. 1.17 ಕೋಟಿ ಬಿಪಿಎಲ್ ಕುಟುಂಬಗಳಿವೆ. ಪ್ರತಿ ಕುಟುಂಬಕ್ಕೆ ತಿಂಗಳಿಗೆ 30 ಕೆ.ಜಿ ನೀಡಲು ವಾರ್ಷಿಕ ₹ 4,000 ಕೋಟಿ ಬೇಕಾಗುತ್ತದೆ. ಹೆಚ್ಚುವರಿ ವೆಚ್ಚ ಸುಮಾರು ₹ 5,500 ಕೋಟಿ ಆಗುವ ಅಂದಾಜಿದೆ ಎಂದು ಅವರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.