ADVERTISEMENT

ಬೆಂಗಳೂರು | ನಕಲಿ ದಾಖಲೆ ಸೃಷ್ಟಿಸಿ ₹70 ಕೋಟಿ ಪರಿಹಾರ ಪಡೆಯಲು ಯತ್ನ: ಐವರ ಸೆರೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 23:30 IST
Last Updated 9 ಅಕ್ಟೋಬರ್ 2024, 23:30 IST
<div class="paragraphs"><p>ಬಂಧನ</p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ₹70 ಕೋಟಿ ಮೌಲ್ಯದ ಆಸ್ತಿಗೆ ಪರಿಹಾರ ಪಡೆಯಲು ಯತ್ನಿಸಿದ್ದ ಆರೋಪದಡಿ ಐವರನ್ನು ಶೇಷಾದ್ರಿಪುರ ಠಾಣೆಯ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ADVERTISEMENT

ಚಲ್ಲಘಟ್ಟದ ನಿವಾಸಿಗಳಾದ ಶ್ರೀನಿವಾಸ್, ನಾಗರಾಜ್‌, ರವಿಕುಮಾರ್‌, ಭರತ್‌ ಹಾಗೂ ಸ್ವಾಮಿ ಬಂಧಿತರು.

ಎಲ್ಲ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಹೆಚ್ಚಿನ ವಿಚಾರಣೆಗಾಗಿ ನಾಗರಾಜ್‌ ಅವರನ್ನು ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದೆ. ಉಳಿದ ನಾಲ್ವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಿಡಿಎ ವಿಚಕ್ಷಣಾ ದಳದ ಡಿವೈಎಸ್‌ಪಿ ಎಂ.ಮಲ್ಲೇಶ್​​ ಅವರು ದೂರು ನೀಡಿದ್ದರು. ಇದೇ ಪ್ರಕರಣದಲ್ಲಿ ಬಿಡಿಎ ಭೂಸ್ವಾಧೀನ ಅಧಿಕಾರಿ ಸುಧಾ, ಬೆಂಗಳೂರು ದಕ್ಷಿಣ ವಿಭಾಗದ ಉಪ ವಿಭಾಗಾಧಿಕಾರಿ ಶಿವಣ್ಣ, ಬಿಡಿಎ ಸರ್ವೇಯರ್‌ ರವಿಪ್ರಕಾಶ್, ಕೆ.ಜಿ.ರಸ್ತೆ ಕಚೇರಿಯ ವಿಶೇಷ ತಹಶೀಲ್ದಾರ್‌, ಕಂದಾಯ ಇಲಾಖೆ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಇತರೆ ಅಧಿಕಾರಿಗಳು, ಸಿಬ್ಬಂದಿ ವಿರುದ್ಧವೂ ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿಗಳು ಚಲ್ಲಘಟ್ಟದ ಸರ್ವೆ ನಂ.: 13 ಹಾಗೂ 58ರಲ್ಲಿನ 6 ಎಕರೆ ವಿಸ್ತೀರ್ಣದ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿದ್ದರು. ಜಮೀನಿನ ಮೂಲ ಮಾಲೀಕ ಮೂಡ್ಲಪ್ಪ ಅವರಿಗೂ ಆರೋಪಿಗಳಿಗೂ ಸಂಬಂಧ ಇಲ್ಲದಿದ್ದರೂ ಅಧಿಕಾರಿಗಳ ಜತೆಗೆ ಶಾಮೀಲಾಗಿ ಕಂದಾಯ ಇಲಾಖೆಯಿಂದ ದಾಖಲೆಗಳ ನಕಲು ಪ್ರತಿಗಳನ್ನು ಪಡೆದುಕೊಂಡಿದ್ದರು. 

‘ಈ ದಾಖಲೆಗಳನ್ನು ಬಿಡಿಎಗೆ ಸಲ್ಲಿಸಿ, ಆಸ್ತಿಯ ಮಾಲೀಕರು ತಾವೇ ಎಂದು ಹೇಳಿಕೊಂಡು ₹70 ಕೋಟಿ ಮೌಲ್ಯದ ಆಸ್ತಿಗೆ ಪರಿಹಾರ ಕೋರಿದ್ದರು. ಆರೋಪಿಗಳ ಜತೆಗೆ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.