ಬೆಂಗಳೂರು: ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ನಗರದಲ್ಲಿ ಎರಡು ವಾರಗಳಲ್ಲಿ ಐದು ಝೀಕಾ ಪ್ರಕರಣಗಳು ದೃಢಪಟ್ಟಿವೆ.
ಆ.4ರಂದು ಜಿಗಣಿಯಲ್ಲಿ ವ್ಯಕ್ತಿಯೊಬ್ಬರಿಗೆ ಝೀಕಾ ದೃಢಪಟ್ಟಿತ್ತು. ಇದರಿಂದಾಗಿ ಸುತ್ತಮುತ್ತಲಿನವರಿಗೆ ಪರೀಕ್ಷೆ ನಡೆಸಲಾಗಿತ್ತು. ಅವರಲ್ಲಿ ನಾಲ್ಕು ಮಂದಿ ಝೀಕಾ ಪೀಡಿತರಾಗಿರುವುದು ದೃಢಪಟ್ಟಿದೆ. ಇದರಿಂದಾಗಿ ಆ ಪ್ರದೇಶವನ್ನು ಕಂಟೈನ್‌ಮೆಂಟ್ ವಲಯವೆಂದು ಬಿಬಿಎಂಪಿ ಗುರುತಿಸಿದೆ. ಈವರೆಗೆ ರಾಜ್ಯದಲ್ಲಿ ಒಟ್ಟು ಏಳು ಝೀಕಾ ಪ್ರಕರಣಗಳು ಖಚಿತಪಟ್ಟಿವೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ಜಿಗಣಿ ಪ್ರದೇಶದಲ್ಲಿ ಎರಡು ವಾರಗಳಲ್ಲಿ ಒಟ್ಟು ಐವರಲ್ಲಿ ಝೀಕಾ ವೈರಾಣು ದೃಢಪಟ್ಟಿದೆ. ಡೆಂಗಿ, ಚಿಕೂನ್‌ಗುನ್ಯ ರೋಗ ಹರಡುವ ಈಡಿಸ್ ಜಾತಿಯ ಸೊಳ್ಳೆಗಳೇ ಝೀಕಾ ಸೋಂಕು ಸಹ ಹರಡುತ್ತವೆ. ಗರ್ಭಿಣಿಯರು ಸೊಳ್ಳೆ ಕಡಿತಕ್ಕೆ ಒಳಗಾಗದಂತೆ ಎಚ್ಚರ ವಹಿಸಬೇಕು’ ಎಂದು ತಿಳಿಸಿದರು.
‘ಝೀಕಾ ವೈರಾಣು ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಹಾಗೂ ಲಸಿಕೆ ಲಭ್ಯವಿಲ್ಲ. ಆದ್ದರಿಂದ, ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.