ಬೆಂಗಳೂರು: ‘ರಾಜ್ಯಪಾಲರೇ, ಕೇಂದ್ರ ಸರ್ಕಾರದ ಕೈಗೊಂಬೆಯಾಗದೆ ಸಾಂವಿಧಾನಿಕವಾಗಿ ನಡೆದುಕೊಳ್ಳಿ’ ಎಂದು ಆಗ್ರಹಿಸಿ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ನೇತೃತ್ವದಲ್ಲಿ ಬುಧವಾರ ಪಂಜಿನ ಮೆರವಣಿಗೆ ನಡೆಯಿತು.
ಸಿದ್ದರಾಮಯ್ಯ ಬೆಂಬಲಿಸಿ, ಬಿಜೆಪಿ ಮತ್ತು ಜೆಡಿಎಸ್ ನಡೆ ಖಂಡಿಸಿ ಈ ಮೆರವಣಿಗೆಯನ್ನು ಕರ್ನಾಟಕ ಶೋಷಿತ ಸಮುದಾಯಗಳ ಮಹಾಒಕ್ಕೂಟ ಹಮ್ಮಿಕೊಂಡಿತ್ತು.
ಸಾಮಾಜಿಕ ನ್ಯಾಯದ ಪರವಾಗಿರುವ ಸಿದ್ದರಾಮಯ್ಯನವರ ವಿರುದ್ಧದ ಪಿತೂರಿಯನ್ನು ಇಲ್ಲಿಗೆ ನಿಲ್ಲಿಸಬೇಕು. ಸಂವಿಧಾನದ ರಕ್ಷಕರಾಗಿರುವ ರಾಜ್ಯಪಾಲರು ಸಂವಿಧಾನ ವಿರುದ್ಧ ನಡೆಯನ್ನು ತೋರಬಾರದು. ಬಿಜೆಪಿ ಮತ್ತು ಜೆಡಿಎಸ್ ಸೇರಿ ಮಾಡುತ್ತಿರುವ ಕುತಂತ್ರಕ್ಕೆ ಒಳಗಾಗಬಾರದು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯ ವಿರುದ್ಧ ತನಿಖೆಗೆ ಅನುಮತಿ ನೀಡುವ ಮೂಲಕ ಸಮಾನವಾಗಿ ನಡೆದುಕೊಳ್ಳಬೇಕು ಎಂದು ಒತ್ತಾಯಿಸಲಾಯಿತು.
ಸಾಮಾಜಿಕ ನ್ಯಾಯದ ನಾಯಕತ್ವ ಉಳಿಸಲು ಆ.27ರಂದು ನಡೆಯಲಿರುವ ರ‍್ಯಾಲಿ ಮತ್ತು ಮಹಾಸಮಾವೇಶದಲ್ಲಿ ಎಲ್ಲ ಶೋಷಿತರು, ಹಿಂದುಳಿದವರು, ವಿದ್ಯಾರ್ಥಿಗಳು ಭಾಗವಹಿಸಲು ನಿರ್ಧರಿಸಲಾಯಿತು.
ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ. ರಾಮಚಂದ್ರಪ್ಪ, ಸಂಚಾಲಕರಾದ ಮಾವಳ್ಳಿ ಶಂಕರ್, ಅನಂತ ನಾಯ್ಕ್, ಎಣ್ಣೆಗೆರೆ ಆರ್. ವೆಂಕಟರಾಮಯ್ಯ, ಆದರ್ಶ ಯಲ್ಲಪ್ಪ, ಕುರುಬರ ಸಂಘದ ಈರಣ್ಣ, ವಿದ್ಯಾರ್ಥಿ ಮುಖಂಡರಾದ ಚಂದ್ರ ಮೊದಲ್ಮನಿ, ಕೆ. ಸತೀಶ್, ಅನಿಲ್ ಕುಮಾರ್ ರೆಡ್ಡಿ, ಮಹಮ್ಮದ್ ಪೀರ್, ಸೂರ್ಯಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.