ಬೆಂಗಳೂರು: ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸಲು ಅವಕಾಶ ಕೊಡಿಸುವುದಾಗಿ ಹೇಳಿ ಯುವಕ–ಯುವತಿಯರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪದಡಿ ನಾಗೇಂದ್ರ ಪ್ರಸಾದ್ ಅಲಿಯಾಸ್ ದವನ್ ಸುಹಾ (31) ಎಂಬುವವರನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ನಾಗೇಂದ್ರ ಪ್ರಸಾದ್, ರಾಜಾಜಿನಗರ ರಾಮಮಂದಿರ ಸಮೀಪದಲ್ಲಿ ‘ಫ್ಲೆಮಿಂಗೋ ಸೆಲೆಬ್ರಿಟಿಸ್ ವರ್ಲ್ಡ್’ ಸಂಸ್ಥೆ ಕಚೇರಿ ತೆರೆದಿದ್ದ. ಸಿನಿ ತಾರೆಯರ ಜೊತೆ ಒಡನಾಟವಿಟ್ಟುಕೊಂಡು, ಅವರ ಹೆಸರಿನಲ್ಲಿ ಯುವಕ– ಯುವತಿಯರಿಂದ ಹಣ ಪಡೆದು ವಂಚಿಸುತ್ತಿದ್ದ’ ಎಂದು ಪೊಲೀಸರು ಹೇಳಿದರು.
‘ವಂಚನೆಗೀಡಾಗಿದ್ದ 58 ಮಂದಿ ಇತ್ತೀಚೆಗೆ ಠಾಣೆಗೆ ದೂರು ನೀಡಿದ್ದರು. ತಾಂತ್ರಿಕ ಪುರಾವೆ ಆಧರಿಸಿ ನಾಗೇಂದ್ರ ಪ್ರಸಾದ್‌ನನ್ನು ಬಂಧಿಸಲಾಗಿದೆ. ಈತ ಇದುವರೆಗೂ 58 ಮಂದಿಯಿಂದ ₹ 18 ಲಕ್ಷ ಪಡೆದು ವಂಚಿಸಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ತಿಳಿಸಿದರು.
ನಟನೆ ತರಬೇತಿ ಜಾಹೀರಾತು: ‘ಸಿನಿಮಾ– ಧಾರಾವಾಹಿಗಳಲ್ಲಿ ನಟ–ನಟಿಯರಾಗಿ ಅಭಿನಯಿಸಲು ಅವಕಾಶ ಕೊಡಿಸಲಾಗುವುದು’ ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಿ ಜಾಹೀರಾತು ನೀಡುತ್ತಿದ್ದ’ ಎಂದು ಪೊಲೀಸರು ಹೇಳಿದರು.
‘ಚಿತ್ರ ನಟ ಪ್ರೇಮ್, ನಟಿಯರಾದ ಭವ್ಯಾ, ಸಪ್ತಮಿ ಗೌಡ ಹಾಗೂ ಇತರೆ ಸಿನಿ ತಾರೆಯರ ಜೊತೆ ಆರೋಪಿ ಫೋಟೊ ತೆಗೆಸಿಕೊಂಡಿದ್ದ. ಪ್ರೇಮ್ ಹಾಗೂ ಸಪ್ತಮಿ ಗೌಡ, ಆರೋಪಿ ಕಚೇರಿಗೂ ಕೆಲ ಬಾರಿ ಭೇಟಿ ನೀಡಿದ್ದರು. ಸಿನಿ ತಾರೆಯರ ಒಡನಾಟವನ್ನು ದುರುಪಯೋಗಪಡಿಸಿಕೊಂಡಿದ್ದ ಆರೋಪಿ, ‘ನಟ–ನಟಿಯರನ್ನು ನಾನೇ ತಯಾರಿ ಮಾಡಿದ್ದೇನೆ. ನಿಮ್ಮನ್ನೂ ನಟ–ನಟಿಯರಾಗಿ ಮಾಡುತ್ತೇವೆ. ₹25 ಸಾವಿರದಿಂದ ₹ 30 ಸಾವಿರ ಪಾವತಿಸಿ ನಟನೆ ತರಬೇತಿ ಪಡೆಯಿರಿ. ಅವಕಾಶ ಖಚಿತ ಎಂಬುದಾಗಿ ಹೇಳುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.
‘ಆರೋಪಿ ಮಾತು ನಂಬಿದ್ದ ಯುವಕ–ಯುವತಿಯರು ಸಂಸ್ಥೆಗೆ ಸೇರುತ್ತಿದ್ದರು. ನಿಗದಿತ ತರಬೇತಿ ಮುಗಿದ ಬಳಿಕವೂ ಆರೋಪಿ ಯಾವುದೇ ಸಿನಿಮಾ–ಧಾರಾವಾಹಿಯಲ್ಲಿ ಅವಕಾಶಕೊಡಿಸುತ್ತಿರಲಿಲ್ಲ. ಇದನ್ನು ಪ್ರಶ್ನಿಸಿದ್ದಕ್ಕೆ ಕೆಲವರಿಗೆ ಜೀವ ಬೆದರಿಕೆಯೊಡ್ಡಿದ್ದ. ನೊಂದ ಅಭ್ಯರ್ಥಿಗಳು ಠಾಣೆಗೆ ಬಂದು ದೂರು ನೀಡಿದ್ದರು. ಆ ಪೈಕಿ ಯುವತಿಯೊಬ್ಬರ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಉಳಿದ ದೂರುಗಳನ್ನು ಇದೇ ಪ್ರಕರಣದಲ್ಲಿ ವಿಲೀನ ಮಾಡಲಾಗಿದೆ’ ಎಂದು ಹೇಳಿದರು.
ಮುಖ್ಯ ಪಾತ್ರವೆಂದು ಆಮಿಷ: ‘ಸಿನಿಮಾ–ಧಾರಾವಾಹಿಯಲ್ಲಿ ನಟಿಸುವ ಆಸೆ ಹೊತ್ತು ಬರುತ್ತಿದ್ದವರಿಗೆ ಮುಖ್ಯಪಾತ್ರ ಕೊಡಿಸುವುದಾಗಿ ಆಮಿಷವೊಡ್ಡುತ್ತಿದ್ದ ಆರೋಪಿ, ಅವರಿಂದ ಹೆಚ್ಚಿನ ಹಣ ಪಡೆಯುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.
‘ಆರೋಪಿ ಸ್ಥಾಪಿಸಿದ್ದ ‘ಫ್ಲೆಮಿಂಗೋ ಸೆಲೆಬ್ರಿಟಿಸ್ ವರ್ಲ್ಡ್’ ಸಂಸ್ಥೆಗೆ ನಟಿ ಭವ್ಯಾ ಅವರು ಮುಖ್ಯ ಮಾರ್ಗದರ್ಶಕರಾಗಿದ್ದರೆಂಬ ಮಾಹಿತಿ ಇದೆ. ಈ ಬಗ್ಗೆ ಪುರಾವೆಗಳನ್ನು ಪರಿಶೀಲಿಸಲಾಗುತ್ತಿದೆ.’
‘ಬಂಧಿತ ಆರೋಪಿ ಸದ್ಯ ನ್ಯಾಯಾಂಗ ಬಂಧನ ದಲ್ಲಿದ್ದಾನೆ. ಆತನಿಂದ ವಂಚನೆಗೀಡಾಗಿರುವವರು ಯಾರಾದರೂ ಇದ್ದರೆ ಠಾಣೆಗೆ ದೂರು ನೀಡಬಹುದು’ ಎಂದು ಪೊಲೀಸರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.