ADVERTISEMENT

ಬೆಂಗಳೂರು | ಫ್ಲೆಕ್ಸ್ ನಿಯಂತ್ರಣ: ರಾತ್ರಿ ವೇಳೆ ಪ್ರಹರಿ ವಾಹನ ಗಸ್ತು

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 15:12 IST
Last Updated 29 ಜುಲೈ 2024, 15:12 IST
ತುಷಾರ್‌ ಗಿರಿನಾಥ್‌
ತುಷಾರ್‌ ಗಿರಿನಾಥ್‌   

ಬೆಂಗಳೂರು: ‘ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆಯನ್ನು ನಿಯಂತ್ರಿಸಲು ಪಾಲಿಕೆಯ ಎಲ್ಲ ವಲಯಗಳಲ್ಲೂ ತಲಾ ಒಂದು ಪ್ರಹರಿ ವಾಹನವನ್ನು ರಾತ್ರಿ ವೇಳೆ ಗಸ್ತು ತಿರುಗಲು ನಿಯೋಜಿಸಬೇಕು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದರು.

ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸೋಮವಾರ ನಡೆದ ಪಾಲಿಕೆ ಅಧಿಕಾರಿಗಳ ಸಭೆಯಲ್ಲಿ ಈ ಆದೇಶ ನೀಡಿದ ಅವರು, ‘ಅನಧಿಕೃತ ಜಾಹೀರಾತುಗಳನ್ನು ರಾತ್ರಿ ವೇಳೆ ಹೆಚ್ಚಾಗಿ ಅಳವಡಿಸುತ್ತಾರೆ. ನಿಯಂತ್ರಣಕ್ಕೆ ಬಿಗಿ ಕ್ರಮ ಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್/ ಬ್ಯಾನರ್‌ಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕಿದೆ. ಈ ನಿಟ್ಟಿನಲ್ಲಿ ಆಯಾ ವಲಯ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಎಲ್ಲಿಯೂ ಅನಧಿಕೃತ ಜಾಹೀರಾತುಗಳನ್ನು ಅಳವಡಿಸದಂತೆ ನಿಗಾ ವಹಿಸಬೇಕು ಎಂದರು.

ADVERTISEMENT

ಫ್ಲೆಕ್ಸ್/ ಬ್ಯಾನರ್‌ಗಳನ್ನು ಪಾಲಿಕೆಯಿಂದ ತೆರವುಗೊಳಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಎಫ್‌ಐಆರ್ ದಾಖಲಿಸಲಾಗುತ್ತಿದೆ. ಆದರೂ, ಸಾರ್ವಜನಿಕ ಸ್ಥಳ, ರಸ್ತೆ ಬದಿ ಫ್ಲೆಕ್ಸ್ ಅಳವಡಿಸುವುದು ನಿಯಂತ್ರಣವಾಗುತ್ತಿಲ್ಲ. ಆದ್ದರಿಂದ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಅನಧಿಕೃತ ಜಾಹೀರಾತು ಅಳವಡಿಕೆಯನ್ನು ನಿಯಂತ್ರಣಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮುದ್ರಣ ಮಳಿಗೆ, ಘಟಕಗಳಿಗೆ ಅಧಿಕಾರಿಗಳು ಭೇಟಿ ನೀಡಿ, ಅನಧಿಕೃತ ಫ್ಲೆಕ್ಸ್‌ಗಳ ಮುದ್ರಣವಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.

‘ದೂರುಗಳಿಗೆ ಸ್ಪಂದಿಸಿ’

ಕಾಲಮಿತಿ ಹಾಗೂ ತ್ವರಿತವಾಗಿ ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ ‘ರಸ್ತೆ ಗುಂಡಿ ಗಮನ’ ಮೊಬೈಲ್ ಆ್ಯಪ್‌ ಬಿಡುಗಡೆಯಾಗಿದೆ. ಅದರಲ್ಲಿನ ದೂರುಗಳಿಗೆ ಕೂಡಲೇ ಸ್ಪಂದಿಸಬೇಕು. ಜೊತೆಗೆ ಪ್ರಮುಖ ರಸ್ತೆಗಳಲ್ಲಿರುವ ಗುಂಡಿಗಳನ್ನು ಆದ್ಯತೆ ಮೇರೆಗೆ ಮುಚ್ಚಲು ಕ್ರಮ ಕೈಗೊಳ್ಳಬೇಕು ಅಧಿಕಾರಿಗಳಿಗೆ ಸೂಚಿಸಿದರು.

‘ಡೆಂಗಿ ನಿಯಂತ್ರಣ’

ನಗರದಲ್ಲಿ ದಿನವೊಂದಕ್ಕೆ ಸರಾಸರಿ 200 ಡೆಂಗಿ ಪ್ರಕರಣಗಳು ಕಂಡುಬರುತ್ತಿವೆ. ಪ್ರತಿ ವಾರ್ಡ್‌ನಲ್ಲಿ ಔಷಧಿ ಸಿಂಪಡಣೆಗಾಗಿ ಸ್ಪ್ರೇಯರ್ ಹಾಗೂ ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಬೇಕು ಎಂದು ವಲಯ ಅಧಿಕಾರಿಗಳಿಗೆ ತುಷಾರ್‌ ಗಿರಿನಾಥ್‌ ಆದೇಶಿಸಿದರು.

ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಡಾ. ಕೆ. ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಅವಿನಾಶ್ ಮೆನನ್ ರಾಜೇಂದ್ರನ್, ಶಿವಾನಂದ್ ಕಲ್ಕೆರೆ, ವಲಯ ಆಯುಕ್ತರಾದ ಡಾ. ಆರ್.ಎಲ್. ದೀಪಕ್, ಶಿವಾನಂದ್, ರಮೇಶ್, ಕರೀಗೌಡ, ಪ್ರೀತಿ ಗೆಹ್ಲೋಟ್, ಸ್ನೇಹಲ್, ವಿನೋತ್ ಪ್ರಿಯಾ, ರಮ್ಯಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.