ಬೆಂಗಳೂರು: ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಬಸವಣ್ಣ ಸೇರಿದಂತೆ ಶಿವಶರಣರ ವಚನಗಳಲ್ಲಿ ಕಂಡಿದ್ದ ಅನುಭವ ಮಂಟಪ, ಪುಷ್ಪದಲ್ಲಿ ಅರಳಿರುವುದನ್ನು ಕಂಡು ಜನ ಪುಳಕಿತರಾದರು.
ಹೂ ರಾಶಿಗಳ ನಡುವೆ ವಚನಗಳು, ಬಸವಣ್ಣನ ಪ್ರತಿಮೆ, ಶರಣರ ಕಲಾಕೃತಿಗಳು, ಭಿತ್ತಿ ಫಲಕಗಳಲ್ಲಿ 12ನೇ ಶತಮಾನದಲ್ಲಿದ್ದ ಜಾತಿ ಪದ್ಧತಿ, ಮೌಢ್ಯಗಳ ಆಚರಣೆಯ ವಿರುದ್ಧ ಬಸವಣ್ಣ ಅವರ ವಚನಕ್ರಾಂತಿಯ ಜಾಗೃತಿ ಭಿತ್ತಿಪತ್ರಗಳನ್ನು ಪುಷ್ಪ ಪ್ರಿಯರು ಕುತೂಹಲದಿಂದ ವೀಕ್ಷಿಸಿದರು. ಯುವ ಸಮುದಾಯಕ್ಕೆ ಪುಷ್ಪಗಳ ಮೂಲಕ ಸಮಗ್ರ ವಚನ ಸಾಹಿತ್ಯ ಹಾಗೂ ಅನುಭವ ಮಂಟಪವನ್ನು ತೋಟಗಾರಿಕೆ ಇಲಾಖೆ ಇಲ್ಲಿ ಪರಿಚಯಿಸಿದೆ.
ವಚನಗಳ ಪ್ರಾಚೀನ ಓಲೇಗರಿ, ಹಸ್ತಪ್ರತಿಗಳನ್ನು ವಿದ್ಯಾರ್ಥಿಗಳು ಮತ್ತು ವಿದೇಶಿ ಪ್ರಜೆಗಳು ವೀಕ್ಷಿಸಿ ಮಾಹಿತಿ ಪಡೆದುಕೊಂಡರು.
‘ಲಾಲ್‌ಬಾಗ್‌ನ ಗಾಜಿನಮನೆ ಸುತ್ತಮುತ್ತ ಎಲ್‌ಇಡಿ ಪರದೆಗಳಲ್ಲಿ ವಚನಗಳ ಮಹತ್ವ, ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ. ಶುಕ್ರವಾರ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಮಂದಿ ಭೇಟಿ ನೀಡಿದ್ದಾರೆ. ಶನಿವಾರ ಮತ್ತು ಭಾನುವಾರ ಹೆಚ್ಚು ಜನ ಬರುವ ನಿರೀಕ್ಷೆ ಇದೆ’ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಶುಕ್ರವಾರ ಸಸ್ಯಕಾಶಿಗೆ 18,256 ಮಂದಿ ಭೇಟಿ ನೀಡಿದ್ದು, ಪ್ರವೇಶ ಶುಲ್ಕವಾಗಿ ₹6,33,190 ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಮೂರನೇ ಬಾರಿಗೆ ಬರುತ್ತಿದ್ದೇನೆ. ಬಸವಣ್ಣ ಅವರ ವಚನ ಕ್ರಾಂತಿಯನ್ನು ಪುಷ್ಪಗಳಲ್ಲಿ ಅನಾವರಣ ಮಾಡಲಾಗಿದೆ. ಇದು ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ವಚನ ಸಾಹಿತ್ಯ ತಿಳಿದುಕೊಳ್ಳಲು ಉತ್ತಮ ವೇದಿಕೆ.–ರಾಧಾ ಜಯನಗರದ ನಿವಾಸಿ
ಕರ್ನಾಟಕದ ಕ್ರಾಂತಿ ಪುರುಷ ಬಸವಣ್ಣ ಅವರ ವಿಷಯಾಧಾರಿತವಾದ ಫಲಪುಷ್ಪ ಪ್ರದರ್ಶನದಲ್ಲಿ ವಚನ ಸಾಹಿತ್ಯ ಮತ್ತು ಶರಣರ ಬಗ್ಗೆ ಒಳ್ಳೆಯ ಸಂದೇಶ ನೀಡಲಾಗಿದೆ.–ವಿ.ಕೆ. ಶೆಟ್ಟಿ ಮಂಗಳೂರು
ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸುವುದಕ್ಕೆ ಭಾರತಕ್ಕೆ ಬಂದಿದ್ದೇನೆ. ಒಂದೇ ವೇದಿಕೆಯಲ್ಲಿ ಇಷ್ಟೊಂದು ಬಗೆಯ ಪುಷ್ಪಗಳನ್ನು ನಾನು ಮೊದಲ ಬಾರಿಗೆ ನೋಡಿ ಬಹಳ ಖುಷಿಯಾಗಿದೆ.– ಕ್ರಿಸ್, ಆಸ್ಟ್ರೇಲಿಯಾ
ಬಸವಣ್ಣ ಅವರನ್ನು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕನೆಂದು ರಾಜ್ಯ ಸರ್ಕಾರ ಘೋಷಿಸಿದೆ. ತೋಟಗಾರಿಕೆ ಇಲಾಖೆಯೂ ಬಸವಣ್ಣ ಅವರ ವಚನ ಕ್ರಾಂತಿಯನ್ನು ಪುಷ್ಪಗಳಲ್ಲಿ ಅನಾವರಣಗೊಳಿಸಿರುವುದು ಬಹಳ ಖುಷಿ ನೀಡಿದೆ.–ಚನ್ನಬಸವಾನಂದ ಸ್ವಾಮೀಜಿ ಬಸವಗಂಗೋತ್ರಿ ಪೀಠ ಕುಂಬಳಗೋಡು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.