ADVERTISEMENT

ಬೀದಿ ನಾಯಿಗಳಿಗೆ ಆಹಾರ ವಿತರಣೆಗೆ ಚಾಲನೆ

ಶ್ವಾನಗಳಿಗೆ ಹಾರ ಹಾಕಿ, ಕುಂಕುಮವಿರಿಸಿ ಯೋಜನೆ ಆರಂಭಿಸಿದ ಬಿಬಿಎಂಪಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 15:27 IST
Last Updated 17 ಅಕ್ಟೋಬರ್ 2024, 15:27 IST
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ‘ಶ್ವಾನ ಮಹೋತ್ಸವ’ದಲ್ಲಿ ಪಶುಸಂಗೋಪನೆ ವಿಭಾಗದ ವಿಶೇಷ ಆಯುಕ್ತ  ಸುರಳ್ಕರ್ ವಿಕಾಸ್ ಕಿಶೋರ್ ಹಾಗೂ ಸಿಬ್ಬಂದಿ ನಾಯಿಗಳಿಗೆ ಆಹಾರ ನೀಡಿದರು
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ‘ಶ್ವಾನ ಮಹೋತ್ಸವ’ದಲ್ಲಿ ಪಶುಸಂಗೋಪನೆ ವಿಭಾಗದ ವಿಶೇಷ ಆಯುಕ್ತ  ಸುರಳ್ಕರ್ ವಿಕಾಸ್ ಕಿಶೋರ್ ಹಾಗೂ ಸಿಬ್ಬಂದಿ ನಾಯಿಗಳಿಗೆ ಆಹಾರ ನೀಡಿದರು   

ಬೆಂಗಳೂರು: ಬಿಬಿಎಂಪಿಯ ಎಂಟೂ ವಲಯಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಲು ಸ್ಥಳವನ್ನು ನಿಗದಿಪಡಿಸಲಾಗಿದೆ. ನಿಗದಿತ ಸ್ಥಳಗಳಲ್ಲಿ ನಾಯಿಗಳಿಗೆ ಆಹಾರ ವಿತರಣೆಗೆ ಗುರುವಾರ ಚಾಲನೆ ನೀಡಲಾಯಿತು.

ಬೀದಿ ನಾಯಿಗಳಿಗೆ ಆಹಾರ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಅಂಗವಾಗಿ ‘ಶ್ವಾನ ಮಹೋತ್ಸವ’ವನ್ನು ಆಯೋಜಿಸಲಾಗಿತ್ತು. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಉತ್ಸವಕ್ಕೆ ಚಾಲನೆ ನೀಡಿ, ಬೀದಿ ನಾಯಿಗಳು ಹಾಗೂ ಮರಿಗಳಿಗೆ ಹೂವಿನ ಹಾರ ಹಾಕಿ, ಕುಂಕುಮವಿಟ್ಟು ಆಹಾರ ನೀಡಲಾಯಿತು.

ಬಿಬಿಎಂಪಿಯ ಪಶುಸಂಗೋಪನಾ ವಿಭಾಗದಿಂದ ಎಲ್ಲಾ ವಲಯಗಳ ಆಯ್ದ ಸ್ಥಳಗಳಲ್ಲಿ ಶ್ವಾನ ಮಹೋತ್ಸವ ಆಚರಿಸಲಾಗುತ್ತಿದೆ. ಸಹಬಾಳ್ವೆ ಹಾಗೂ ‘ಒನ್ ಹೆಲ್ತ್’ ಭಾಗವಾಗಿ ಬೀದಿ ನಾಯಿಗಳಿಗೆ ಆಹಾರ ನೀಡುವ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿದೆ.

ADVERTISEMENT

ಒಂದು ತಿಂಗಳು ಯಶಸ್ವಿಯಾಗಿ ಪ್ರಕ್ರಿಯೆ ಪೂರ್ಣಗೊಂಡರೆ, ನ್ಯೂನತೆಗಳನ್ನು ಗುರುತಿಸಿ ಸರಿಪಡಿಸಿಕೊಂಡು ನಗರದ ಇತರೆಡೆಯೂ ನಾಯಿಗಳಿಗೆ ಆಹಾರ ನೀಡಲಾಗುತ್ತದೆ ಎಂದು ಪಶುಸಂಗೋಪನಾ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್‌ ತಿಳಿಸಿದರು. 

ಪಾಲಿಕೆಯ ವ್ಯಾಪ್ತಿಯಲ್ಲಿ ಅಂದಾಜು 2.70 ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳಿವೆ. ಅವುಗಳು ಕಚ್ಚುವುದು ಮತ್ತು ಅವು ರೋಷಗೊಳ್ಳುವ ಪ್ರಮಾಣವನ್ನು ತಡೆಯಬೇಕಿದೆ. ಈ ಬಗ್ಗೆ ಪಶು ವೈದ್ಯರು, ತಜ್ಞರು, ಪ್ರಾಣಿ ಪ್ರಿಯ ಸ್ವಯಂಸೇವಕರ ಬಳಿ ಚರ್ಚಿಸಲಾಗಿದೆ ಎಂದು ಹೇಳಿದರು.

‘ಬೀದಿ ನಾಯಿಗಳಿಗೆ ಸರಿಯಾಗಿ ಆಹಾರ ಸಿಗದಿರುವ ಕಾರಣ ಕಚ್ಚುವುದು ಹಾಗೂ ರೋಷಗೊಳ್ಳುವ ಘಟನೆಗಳು ನಡೆಯುತ್ತಿವೆ ಎಂಬುದು ತಿಳಿದು ಬಂದಿದೆ. ಬೀದಿ ನಾಯಿಗಳಿಗೆ ಆಹಾರ ಸಿಕ್ಕರೆ ನಾಯಿ ಕಡಿತ ಹಾಗೂ ದಾಳಿಯ ಪ್ರಕರಣಗಳನ್ನು ತಗ್ಗಿಸಬಹುದು ಎಂಬ ಉದ್ದೇಶದಿಂದ ಈ ಕ್ರಮವನ್ನು ಅನುಸರಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಉತ್ತಮ ಸ್ಪಂದನೆ: ಪಾಲಿಕೆ ವ್ಯಾಪ್ತಿಯ ಸ್ಥಳೀಯ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಉಳಿಯುವ ಆಹಾರವನ್ನು ಬೀದಿ ನಾಯಿಗಳಿಗೆ ನೀಡುವ ಕುರಿತು ಚರ್ಚಿಸಲಾಗಿದೆ. ಅದಕ್ಕೆ, ಮಾಲೀಕರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂದು ವಿಕಾಸ್‌ ತಿಳಿಸಿದರು.

ಪಶುಸಂಗೋಪನಾ ವಿಭಾಗದ ಜಂಟಿ ನಿರ್ದೇಶಕ ಡಾ. ಚಂದ್ರಯ್ಯ, ಸಹಾಯಕ ನಿರ್ದೇಶಕರಾದ ಡಾ. ಮಲ್ಲಪ್ಪ ಭಜಂತ್ರಿ ಹಾಗೂ ಸಹವರ್ತೀನ್, ವಾಟರ್ ಫಾರ್ ವಾಯ್ಸ್ ಲೆಸ್ ಎನ್.ಜಿ.ಒ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.

ಬಾಗಲಗುಂಟೆಯಲ್ಲಿ ಬೀದಿ ನಾಯಿಗಳಿಗೆ ಸ್ಥಾಪಿಸಲಾಗಿರುವ ಆಹಾರ ತಾಣ

ಆಹಾರ ಸ್ಥಳದಲ್ಲಿ ಏನಿರುತ್ತದೆ?

ಎಂಟು  ವಲಯಗಳಲ್ಲಿ ನಿಗದಿಪಡಿಸಿರುವ ಸ್ಥಳಗಳಲ್ಲಿಯೇ ಪ್ರತಿನಿತ್ಯ ಬೀದಿ ನಾಯಿಗಳಿಗೆ ಆಹಾರ ನೀಡಲಾಗುವುದು. ಸ್ಥಳದಲ್ಲಿ ಬಟ್ಟಲು ನೀರು ಹಾಗೂ ಆಹಾರ ನೀಡುವ ಸ್ಥಳ ಎಂಬ ಫಲಕದ ವ್ಯವಸ್ಥೆ ಮಾಡಲಾಗಿರುತ್ತದೆ. ಸ್ಥಳ: ಪೂರ್ವ ವಲಯ ಪಾಲಿಕೆ ಕೇಂದ್ರ ಕಚೇರಿ ಎನ್.ಆರ್ ಚೌಕ ಹಡ್ಸನ್ ವೃತ್ತ. ಮಹದೇವಪುರ ವಲಯದಲ್ಲಿ ಸಾದಮಂಗಲ ರಸ್ತೆ ಮತ್ತು ಗ್ರಾಮದೇವತೆ ದೇವಸ್ಥಾನ ಹೂಡಿ. ಬೊಮ್ಮನಹಳ್ಳಿ ವಲಯದಲ್ಲಿ ಗುಬ್ಬಲಾಳ ಮುಖ್ಯರಸ್ತೆ ಕೋಣನಕುಂಟೆ ಸುಬ್ರಹ್ಮಣ್ಯಪುರ ವಸಂತಪುರ. ಆರ್.ಆರ್ ನಗರ ವಲಯದಲ್ಲಿ ಬಿಸಿಎಂಸಿ ಲೇಔಟ್ ಆರ್.ಆರ್ ನಗರ. ದಾಸರಹಳ್ಳಿ ವಲಯದಲ್ಲಿ ಬಾಗಲಗುಂಟೆ ಮಂಜುನಾಥ ನಗರ ಮುಖ್ಯರಸ್ತೆ. ದಕ್ಷಿಣ ವಲಯದಲ್ಲಿ ಸಿದ್ದಾಪುರ ವಾರ್ಡ್ ಗುಟ್ಟೆಪಾಳ್ಯ. ಯಲಹಂಕ ವಲಯದಲ್ಲಿ ಟೆಲಿಕಾಂ ಲೇಔಟ್  ಜಕ್ಕೂರು. ಪಶ್ಚಿಮ ವಲಯದಲ್ಲಿ ಗಾಯತ್ರಿ ನಗರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.