ಬೆಂಗಳೂರು: ನಗರದ ವಿ.ವಿ ಪುರದಲ್ಲಿರುವ ತಿಂಡಿ ಬೀದಿ (ಫುಡ್ ಸ್ಟ್ರೀಟ್) ಹೊಸತನದೊಂದಿಗೆ ಆರಂಭವಾಗಲು ಇನ್ನೂ ಆರು ವಾರ ಕಾಯಬೇಕು ಎಂದು ಬಿಬಿಎಂಪಿ ಹೊಸ ಗಡುವು ನೀಡಿದೆ.
ಕಮರ್ಷಿಯಲ್ ಸ್ಟ್ರೀಟ್ ಹಾಗೂ ಚರ್ಚ್ ಸ್ಟ್ರೀಟ್‌ಗಿಂತ ಭಿನ್ನವಾಗಿ ತಿಂಡಿ ಬೀದಿಯನ್ನು ನಿರ್ಮಿಸುವ ಯೋಜನೆಯೊಂದಿಗೆ ಕಳೆದ ಡಿ.13ರಂದು ಕಾಮಗಾರಿಯನ್ನು ಆರಂಭಿಸಲಾಗಿತ್ತು. ಬಹುತೇಕ ಒಂದು ವರ್ಷವಾಗುತ್ತಿದ್ದರೂ ಸುಮಾರು ₹6 ಕೋಟಿ ವೆಚ್ಚದ ಕಾಮಗಾರಿ ಮುಗಿಯುವ ಲಕ್ಷಣಗಳಿಲ್ಲ.
ಆರು ತಿಂಗಳಲ್ಲಿ ಕಾಮಗಾರಿ ಮುಗಿಯುವ ಭರವಸೆ ನೀಡಲಾಗಿತ್ತು. ಆದರೆ, ಅದು ವಿಳಂಬವಾಗಿ ಆಗಸ್ಟ್‌ನಲ್ಲಿ ಕಾಮಗಾರಿ ಪೂರ್ಣಗೊಳ್ಳುವುದಾಗಿ ಹೇಳಲಾಗಿತ್ತು. ಇದೀಗ, ಡಿಸೆಂಬರ್ ಅಂತ್ಯಕ್ಕೆ ಹೊಸ ಗಡುವು ನೀಡಲಾಗಿದೆ.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿ.ವಿ ಪುರದಲ್ಲಿನ ‘ತಿಂಡಿ ಬೀದಿಯನ್ನು ಬಿಬಿಎಂಪಿ ದಕ್ಷಿಣ ವಲಯದ ಅಂದಿನ ಆಯುಕ್ತ ಜಯರಾಮ್ ರಾಯಪುರ ಅವರು, ‘ಮೂಲಸೌಕರ್ಯಗಳ ಜತೆಗೆ ಜನರನ್ನು ಆಕರ್ಷಿಸಲು ಸಜ್ಜನ್ ರಾವ್ ವೃತ್ತ ಮತ್ತು ಮಿನರ್ವ ವೃತ್ತದ ನಡುವಿನ ಸುಮಾರು 209 ಮೀಟರ್ ಉದ್ದದ ರಸ್ತೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು’ ಎಂದು ತಿಳಿಸಿದ್ದರು.
ಅಲ್ಲಲ್ಲಿ ಆಸನಗಳ ವ್ಯವಸ್ಥೆ, ರಸ್ತೆಯ ಎರಡೂ ಬದಿ ಆರ್.ಸಿ.ಸಿ ಕಾಲುವೆ, 6 ಕಡೆ ಕೈತೊಳೆಯುವ ವ್ಯವಸ್ಥೆ, ಎರಡೂ ಕಡೆ ಒಳಚರಂಡಿ ಪೈಪ್‌ಲೈನ್ ಅಳವಡಿಕೆ, ಆಕರ್ಷಕ ಬೀದಿ ದೀಪ, ಎರಡೂ ಕಡೆ ಮಳಿಗೆಗಳ ಮುಂಭಾಗ ಕೆನೊಪಿಗಳ ಅಳವಡಿಕೆ, ಹಸಿ ಕಸ/ಒಣ ಕಸ ಹಾಕಲು ಬಿನ್ ವ್ಯವಸ್ಥೆ, ಎರಡೂ ಕಡೆ ಡಕ್ಟ್ ನಿರ್ಮಿಸಲಾಗುತ್ತದೆ. ಅಲಂಕಾರಿಕ ಸಸಿಗಳನ್ನು ನೆಟ್ಟು, ಬೀದಿ ನಾಟಕ ಮಾಡಲು ಸ್ಥಳಾವಕಾಶ ಕಲ್ಪಿಸಲಾಗುವುದು. ರಸ್ತೆಯನ್ನು 7 ಮೀಟರ್‌ನಿಂದ 5 ಮೀಟರ್‌ಗೆ ಕಿರಿದಾಗಿಸಿ, ಎರಡೂ ಬದಿ ಸುಮಾರು 3.5 ಮೀ. ವಿಶಾಲವಾದ ಪಾದಚಾರಿ ಮಾರ್ಗ ನಿರ್ಮಾಣ ಮಾಡುವ ಯೋಜನೆ ಇದಾಗಿದೆ.
ಅವ್ಯವಸ್ಥೆ:
‘ತಿಂಡಿ ಬೀದಿ ಮಾಡುವುದಾಗಿ ಇರುವುದನ್ನೆಲ್ಲ ಕೆಡವಿ, ಕಾಂಕ್ರೀಟ್ ತ್ಯಾಜ್ಯದ ರಸ್ತೆಯನ್ನಾಗಿ ಮಾಡಿದ್ದಾರೆ. ದೂಳು, ತ್ಯಾಜ್ಯ ಹೆಚ್ಚಿರುವುದರಿಂದ ಗ್ರಾಹಕರಿಗೆ ಬರಲು ಸಮಸ್ಯೆಯಾಗುತ್ತಿದೆ. ನಮಗೆ ವ್ಯಾಪಾರವಿಲ್ಲದೆ ಸಂಕಷ್ಟ ಎದುರಾಗಿದೆ. ಇಲ್ಲಿ ನಮ್ಮ ಸಂಕಷ್ಟ ಕೇಳುವವರು ಯಾರೂ ಇಲ್ಲ’ ಎಂದು ದೋಸೆ ಅಂಗಡಿ ಮಾಲೀಕ ರಮೇಶ್ ಹೇಳಿದರು.
ತುರ್ತಾಗಿ ಮುಗಿಯುವುದಿಲ್ಲ:
ಮುಖ್ಯ ಎಂಜಿನಿಯರ್ ‘ವಿ.ವಿ ಪುರಂನಲ್ಲಿನ ‘ತಿಂಡಿ ಬೀದಿ’ಯ ಕಾಮಗಾರಿ ಇನ್ನೂ ನಡೆಯುತ್ತಿದೆ. ಕಾರ್ತಿಕ ಮಾಸದ ಕೊನೆಯ ಸೋಮವಾರ ನಡೆಯುವ ಕಡಲೆಕಾಯಿ ಪರಿಷೆ ಸಮಯಕ್ಕೆ ಕಾಮಗಾರಿ ಮುಗಿಯುವುದಿಲ್ಲ. ‘ಫಿನಿಶಿಂಗ್’ ಕೆಲಸಗಳು ನಡೆಯುತ್ತಿದ್ದು ಕನಿಷ್ಠ ಇನ್ನೂ ಆರು ವಾರವಾದರೂ ಬೇಕು. ಗುತ್ತಿಗೆದಾರರ ಮುಷ್ಕರದಿಂದ ಕಾಮಗಾರಿ ವಿಳಂಬವಾಗಿದೆ’ ಎಂದು ಬಿಬಿಎಂಪಿ ದಕ್ಷಿಣ ವಲಯದ ಮುಖ್ಯ ಎಂಜಿನಿಯರ್ ಎಸ್.ವಿ. ರಾಜೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.