ಬೆಂಗಳೂರು: ಪಂಚವೃತ್ತಿಗಳನ್ನು ಮಾಡುತ್ತಿರುವ ವಿಶ್ವಕರ್ಮ ಸಮುದಾಯವನ್ನು ಒಂದೇ ವೇದಿಕೆಯಡಿ ತಂದು ಸಂಘಟಿಸಲು ರಾಜ್ಯ ವಿಶ್ವಕರ್ಮ ಮಹಾಒಕ್ಕೂಟವನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಅದರ ನಾಮಫಲಕ ಮತ್ತು ಲಾಂಛನವನ್ನು ಅನಾವರಣಗೊಳಿಸಲಾಯಿತು.
ಒಕ್ಕೂಟದ ರಾಜ್ಯ ಅಧ್ಯಕ್ಷರಾಗಿ ವಿಜಯಕುಮಾರ್ ಪತ್ತಾರ್, ಗೌರವಾಧ್ಯಕ್ಷರಾಗಿ ಸರ್ವೇಶಾಚಾರ್, ಪ್ರಧಾನ ಸಂಚಾಲಕರಾಗಿ ಹೊಸಕೋಟೆ ಈಶ್ವರಾಚಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ರಾಜ್ಯ ಅಂಗವಿಕಲರ ಕಾಯ್ದೆ ಮಾಜಿ ಆಯುಕ್ತ ಕೆ.ರಾಜಣ್ಣ ಅವರು ಲಾಂಛನ ಬಿಡುಗಡೆಗೊಳಿಸಿ ಮಾತನಾಡಿ, ‘ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಒಕ್ಕೂಟ ರಚನೆ ಮಾಡಲಾಗಿದೆ. ವಿಶ್ವಕರ್ಮರು ಶ್ರೀಮಂತ ಸಂಸ್ಕೃತಿ ಕಲೆ ಪರಂಪರೆ ಹೊಂದಿರುವ ಜನಾಂಗ. ಆದರೆ, ಇಂದಿನ ವ್ಯವಸ್ಥೆಯಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವುದರಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಗತವೈಭವವನ್ನು ಮರಳಿಸುವ ನಿಟ್ಟಿನಲ್ಲಿ ಒಕ್ಕೂಟ ಕಾರ್ಯಯೋಜನೆಗಳ ಮೂಲಕ ಪ್ರಾಮಾಣಿಕವಾಗಿ ಶ್ರಮಿಸಬೇಕು. ಸರ್ಕಾರ ಸಮಾಜದ ಬಗ್ಗೆ ಕಣ್ಣು ತೆರೆದು ನೋಡುವಂತಾಗಬೇಕು’ ಎಂದು ಆಶಿಸಿದರು.
‘ವಿವಿಧ ಸಂಘಟನೆಗಳಡಿ ಹಂಚಿ ಹೋಗಿರುವ ಸಮುದಾಯವನ್ನು ಒಂದು ತೆಕ್ಕೆಗೆ ತಂದು ರಚನಾತ್ಮಕ ಹೋರಾಟ ನಡೆಸಲು ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ. ಪ್ರತಿ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಮಟ್ಟಕ್ಕೆ ಸಂಘಟನೆಯನ್ನು ವಿಸ್ತರಿಸಲಾಗುವುದು’ ನೂತನ ಅಧ್ಯಕ್ಷ ವಿಜಯಕುಮಾರ್ ಪತ್ತಾರ್ ಹೇಳಿದರು.
ಕೆ.ರಾಜಣ್ಣ, ಗಾಯಕ ರವೀಂದ್ರ ಯಾವಗಲ್, ರಥಶಿಲ್ಪಿ ಬಸವರಾಜ್ ಅವರನ್ನು ಸನ್ಮಾನಿಸಲಾಯಿತು. ಮುಖಂಡರಾದ ಮೂಡುಬಿದಿರೆ ಸೀತಾರಾಮ ಆಚಾರ್ಯ, ವಾರ್ತಾ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಸಿ.ಪಿ. ಮಾಯಾಚಾರ್ ಹಾಗೂ ದಕ್ಷಿಣ ಕನ್ನಡ ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಹರೀಶ್ ಆಚಾರ್, ದೇವೇಂದ್ರ ಪತ್ತಾರ್, ಕೆ.ಡಿ. ಬಡಿಗೇರ, ಹಣಮಂತಪ್ಪ ಹೊಲಗೇರಿ, ನಾಗೇಂದ್ರಾಚಾರ್, ಸತೀಶ್ ಆಚಾರ್, ಈರಣ್ಣ ಬಡಿಗೇರ, ಅಶೋಕ ಸುತಾರ, ಶಿವಪ್ರಸಾದ್, ಕೆ.ಎಂ. ಮಂಜುನಾಥ್, ಶೇಖರ್, ಕಾಶೀನಾಥ್ ಪತ್ತಾರ್, ಮಹಾದೇವ ಪಾಂಚಾಳ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.