ADVERTISEMENT

ಬೆಂಗಳೂರು: ನಾಲ್ಕು ವರ್ಷಗಳಿಂದ ನಿತ್ಯವೂ ‘ಹೊಸ’ ಸಮಸ್ಯೆ

ಹೊರವರ್ತುಲ ರಸ್ತೆ–ಹೊಸಕೆರೆಹಳ್ಳಿ ಕೆರೆಕೋಡಿ ಜಂಕ್ಷನ್‌ ಗ್ರೇಡ್‌ ಸೆಪರೇಟರ್‌

ಆರ್. ಮಂಜುನಾಥ್
Published 8 ಜುಲೈ 2024, 23:20 IST
Last Updated 8 ಜುಲೈ 2024, 23:20 IST
ಹೊರವರ್ತುಲ ರಸ್ತೆಯ ಹೊಸಕೆರೆ ಕೋಡಿರಸ್ತೆ ಜಂಕ್ಷನ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಗ್ರೇಡ್‌ ಸೆಪರೇಟರ್‌
ಪ್ರಜಾವಾಣಿ ಚಿತ್ರ/ ರಂಜು ಪಿ.
ಹೊರವರ್ತುಲ ರಸ್ತೆಯ ಹೊಸಕೆರೆ ಕೋಡಿರಸ್ತೆ ಜಂಕ್ಷನ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಗ್ರೇಡ್‌ ಸೆಪರೇಟರ್‌ ಪ್ರಜಾವಾಣಿ ಚಿತ್ರ/ ರಂಜು ಪಿ.   
ನಗರದಲ್ಲಿ ಕೆಲವು ವರ್ಷಗಳ ಹಿಂದೆ ಆರಂಭವಾಗಿರುವ ಗ್ರೇಡ್‌ ಸೆಪರೇಟರ್‌ ಹಾಗೂ ಮೇಲ್ಸೇತುವೆ ಕಾಮಗಾರಿಗಳು ಆಮೆಗತಿಯಲ್ಲಿವೆ. ಬಿಲ್‌ ಪಾವತಿ ವಿಳಂಬದಿಂದ ಕಾಮಗಾರಿ ನಿಧಾನವಾಗಿದೆ ಎಂಬ ಆರೋಪವಿದೆ. ಈ ಮಧ್ಯೆ ಸರ್ಕಾರ ಹೊಸದಾಗಿ 11 ಮೇಲ್ಸೇತುವೆಗಳನ್ನು ನಿರ್ಮಿಸಲು ಮುಂದಾಗಿದೆ. ನಿಧಾನಗತಿಯ ಕಾಮಗಾರಿಯಿಂದ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಬಗ್ಗೆ ‘ಬಿಬಿಎಂಪಿ ಕಾಮಗಾರಿ ಮುಗಿಸೋದು ಯಾವಾಗ ರೀ?’ ಸರಣಿ ಬೆಳಕು ಚೆಲ್ಲಲಿದೆ....

ಬೆಂಗಳೂರು: ಸುಗಮ ಸಂಚಾರಕ್ಕೆ ಅನುವಾಗಬೇಕಾಗಿದ್ದ ಮೇಲ್ಸೇತುವೆ ಹಾಗೂ ಅಂಡರ್‌ಪಾಸ್‌ಗಳ ಕಾಮಗಾರಿಗಳು ವರ್ಷಗಳಿಂದ ನಿಧಾನಗತಿಯಲ್ಲೇ ಸಾಗಿವೆ. ಸಂಚಾರ ದಟ್ಟಣೆ ತಗ್ಗಿಸುವ ಉದ್ದೇಶದಿಂದ ಆರಂಭಿಸಿರುವ ಕಾಮಗಾರಿಗಳೇ ಕುಂಟುತ್ತಾ ಸಾಗಿರುವುದರಿಂದ ಪರಿಹಾರ ಮರೀಚಿಕೆಯಾಗಿಯೇ ಉಳಿಯುವಂತಾಗಿದೆ.

ಮೇಲ್ಸೇತುವೆ, ಅಂಡರ್‌ಪಾಸ್‌ಗಳ ಕಾಮಗಾರಿ ನಿಧಾನಗತಿಗೆ ಬಿಲ್‌ ಪಾವತಿ ವಿಳಂಬವೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಸ್ಥಳೀಯವಾಗಿ ಸಾಕಷ್ಟು ತೊಂದರೆಗಳು ಎದುರಾಗುತ್ತಿದ್ದು, ಅಧಿಕಾರಿಗಳು ಇದನ್ನು ಬಗೆಹರಿಸುತ್ತಿಲ್ಲ ಎಂಬ ವಾದವೂ ಇದೆ. ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರ ಪರಸ್ಪರ ದೋಷಾರೋಪದ ಮಧ್ಯೆ ನಾಗರಿಕರು ನಿತ್ಯವೂ ಪರಿತಪಿಸುತ್ತಿದ್ದಾರೆ. ‘ಕಾಮಗಾರಿ ಮುಗಿಸೋದು ಯಾವಾಗ’ ಎಂದು ಪ್ರಶ್ನಿಸುತ್ತಿದ್ದಾರೆ.

ಅಂದಿನ ಹಾಗೂ ಇಂದಿನ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರು ಹಲವು ಬಾರಿ ‘ನಗರ ಪ್ರದಕ್ಷಿಣೆ’ ಹಾಕಿದ ಸಂದರ್ಭದಲ್ಲಿ ಈ ಕಾಮಗಾರಿಗಳನ್ನು ಕಂಡಿದ್ದರು, ವೇಗ ನೀಡಲು ಸೂಚಿಸಿದ್ದರು. ಆದರೆ, ವರ್ಷಗಳು ಉರುಳುತ್ತಿದ್ದರೂ ಕಾಮಗಾರಿಗಳು ಮಾತ್ರ ಮುಗಿಯುವ ಹಂತಕ್ಕೆ ತಲುಪಿಲ್ಲ.

ADVERTISEMENT

ಮೈಸೂರು ರಸ್ತೆ ಜಂಕ್ಷನ್‌ ಸಮೀಪದ ಹೊರವರ್ತುಲ ರಸ್ತೆಯಲ್ಲಿ ಗ್ರೇಡ್‌ ಸೆಪರೇಟರ್‌ ಕಾಮಗಾರಿ ಆರಂಭವಾಗಿ ನಾಲ್ಕು ವರ್ಷಗಳಾಗುತ್ತಿವೆ. ಹೊರವರ್ತುಲ ರಸ್ತೆಯಲ್ಲಿ ಸಿಗ್ನಲ್‌ರಹಿತ ಸಂಚಾರ ಹಾಗೂ ಹೊಸಕೆರೆಹಳ್ಳಿ ಕೋಡಿರಸ್ತೆ ಹಾಗೂ ಗಿರಿನಗರದ ಕಡೆಗೆ ಮುಕ್ತವಾಗಿ ಸಾಗಲು ಅನುವಾಗುವಂತೆ ಈ ಗ್ರೇಡ್‌ ಸೆಪರೇಟರ್‌ ಅನ್ನು ವಿನ್ಯಾಸಗೊಳಿಸಲಾಗಿದೆ. 15 ತಿಂಗಳಲ್ಲಿ ಮುಗಿಯಬೇಕಾಗಿದ್ದ ಕಾಮಗಾರಿ ಶೇ 50ರಷ್ಟೂ ಮುಗಿದಿಲ್ಲ.

ಮುಖ್ಯಮಂತ್ರಿಯವರ ನವ ನಗರೋತ್ಥಾನ ಅನುದಾನದಲ್ಲಿ ಬಿಬಿಎಂಪಿ ರಾಜರಾಜೇಶ್ವರಿನಗರ ವಲಯದ ರಸ್ತೆ ಮೂಲಸೌಕರ್ಯ ವಿಭಾಗದಿಂದ ನಿರ್ವಹಿಸಲಾಗುತ್ತಿರುವ ‘ಹೊಸಕೆರೆಹಳ್ಳಿ ಕೆರೆಕೋಡಿ ರಸ್ತೆ ಜಂಕ್ಷನ್‌ ಗ್ರೇಡ್‌ ಸೆಪರೇಟರ್‌’ ಕಾಮಗಾರಿಯನ್ನು ಪಿಜೆಪಿ ಎಂಜಿನಿಯರ್ಸ್‌ ಸಂಸ್ಥೆ ನಡೆಸುತ್ತಿದೆ.

ನೈಸ್‌ ಲಿಂಕ್‌ ರಸ್ತೆಗೆ ಹೊಂದಿಕೊಂಡಂತೆಯೇ ಇರುವ ಹೊಸಕೆರೆಹಳ್ಳಿ ಕೆರೆಕೋಡಿ ರಸ್ತೆ ಜಂಕ್ಷನ್‌ನಲ್ಲಿ ಗ್ರೇಡ್‌ ಸೆಪರೇಟರ್‌ ಕಾಮಗಾರಿಯಿಂದ ಸುತ್ತಮುತ್ತಲಿನ  ಹೊಸಕೆರೆಹಳ್ಳಿ, ಬಂಗಾರಪ್ಪನಗರ, ಮೂಕಾಂಬಿಕೆನಗರ, ಪ್ರಮೋದ ಲೇಔಟ್‌, ಗಿರಿನಗರ, ಗಣಪತಿನಗರ, ಆವಲಹಳ್ಳಿ ಪ್ರದೇಶಗಳ ನಿವಾಸಿಗಳಿಗೆ ಪ್ರದೇಶಕ್ಕೆ ಸಂಪರ್ಕ ರಸ್ತೆಯೇ ಇಲ್ಲದಂತಾಗಿದೆ. ಗ್ರೇಡ್‌ ಸೆಪರೇಟರ್‌ ಕಾಮಗಾರಿ ನಡೆಯುತ್ತಿರುವ ಸುತ್ತಲೂ ತಡೆಗೋಡೆ ನಿರ್ಮಿಸಲಾಗಿದ್ದು, ಏಕಮುಖ ರಸ್ತೆಯಲ್ಲಿ ಸಾಕಷ್ಟು ದೂರ ಮುಂದೆ ಸಾಗಿ ‘ಯೂ ಟರ್ನ್‌’ ಪಡೆದು ಸಾಗಬೇಕಾಗಿದೆ.

ನಾಯಂಡಹಳ್ಳಿ ಜಂಕ್ಷನ್‌ನಿಂದ ಬರುವವರು ಹೊಸಕೆರೆಹಳ್ಳಿ ಕಡೆಗೆ ಹೋಗಲು ಪಿಇಎಸ್ ವಿಶ್ವವಿದ್ಯಾಲಯದವರೆಗೆ ಸಾಗಿ ‘ಯೂ ಟರ್ನ್‌’ ಪಡೆಯಬೇಕು. ಗಿರಿನಗರದ ಕಡೆಯಿಂದ ಬರುವವರೂ ಎಡಕ್ಕೆ ಸಾಗಿ, ತಿರುವು ಪಡೆಯಬೇಕು. ಹೊಸಕೆರೆಹಳ್ಳಿ ಕಡೆಯಿಂದ ಬರುವವರು ನಾಯಂಡಹಳ್ಳಿ ಜಂಕ್ಷನ್‌ನ ಮೇಲುರಸ್ತೆಯ ಮಧ್ಯಭಾಗದಲ್ಲಿರುವ ಕೆಳರಸ್ತೆಯಲ್ಲಿ ತಿರುವು ಪಡೆದುಕೊಳ್ಳಬೇಕು. ಇದರಿಂದ ನಿತ್ಯವೂ ಇಲ್ಲಿ ವಾಹನದಟ್ಟಣೆ ಉಂಟಾಗುತ್ತಿದೆ.

‘ಗ್ರೇಡ್‌ ಸೆಪರೇಟರ್‌ ಕಾಮಗಾರಿಯಿಂದ ಸುತ್ತಮುತ್ತಲಿನಲ್ಲಿರುವ ಮಳಿಗೆಗಳಲ್ಲಿ ವ್ಯಾಪಾರವೂ ಕಡಿಮೆಯಾಗಿದೆ. ರಸ್ತೆಯಲ್ಲಿ ಯಾವಾಗಲೂ ವಾಹನದಟ್ಟಣೆ ಇರುವುದರಿಂದ ಮಳಿಗೆಗಳಿಗೆ ಜನರು ಬರಲು ಸಾಧ್ಯವಿಲ್ಲದಂತಾಗಿದೆ. ಪಾದಚಾರಿ ಮಾರ್ಗವೂ ಇಲ್ಲದಂತಾಗಿದ್ದು, ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ’ ಎಂದು ವ್ಯಾಪಾರಿ ಮನೋಜ್‌ ಹೇಳಿದರು.

ಹೊರವರ್ತುಲ ರಸ್ತೆಯ ಹೊಸಕೆರೆ ಕೋಡಿರಸ್ತೆ ಜಂಕ್ಷನ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಗ್ರೇಡ್‌ ಸೆಪರೇಟರ್‌ ಪ್ರಜಾವಾಣಿ ಚಿತ್ರ/ ರಂಜು ಪಿ.
ಹೊರವರ್ತುಲ ರಸ್ತೆಯ ಹೊಸಕೆರೆ ಕೋಡಿರಸ್ತೆ ಜಂಕ್ಷನ್‌ನಲ್ಲಿ ಗ್ರೇಡ್‌ ಸೆಪರೇಟರ್‌ ಕಾಮಗಾರಿಯಿಂದ ಅಕ್ಕಪಕ್ಕದ ಕಿರಿದಾದ ರಸ್ತೆಯಲ್ಲಿ ಸದಾ ವಾಹನದಟ್ಟಣೆ ಉಂಟಾಗುತ್ತಿದೆ ಪ್ರಜಾವಾಣಿ ಚಿತ್ರ/ ರಂಜು ಪಿ. ಪ್ರಜಾವಾಣಿ ಚಿತ್ರ/ ರಂಜು ಪಿ

ಕಿರಿದಾದ ರಸ್ತೆ

ಪ್ರತಿ ದಿನವೂ ಮಕ್ಕಳನ್ನು ಶಾಲೆಗೆ ಬಿಡಲು ಹಾಗೂ ಕರೆತರಲು ಸಾಕಷ್ಟು ಸಮಸ್ಯೆಯಾಗುತ್ತಿದೆ. ಗಿರಿನಗರದಿಂದ ಹೊಸಹಳ್ಳಿ ಕೆರೆಕೋಡಿ ರಸ್ತೆಗೆ ಹೋಗಲು ಮೂರು ವರ್ಷಗಳಿಂದ ಸುತ್ತುಹಾಕಿಕೊಂಡು ಹೋಗಬೇಕಿದೆ. ಗ್ರೇಡ್ ಸೆಪರೇಟರ್‌ ಅಕ್ಕಪಕ್ಕದ ರಸ್ತೆಗಳು ತೀರ ಕಿರಿದಾಗಿದ್ದು ವಾಹನದಟ್ಟಣೆ ಉಂಟಾಗುತ್ತದೆ. ಎಷ್ಟು ಬೇಗ ಮನೆಯಿಂದ ಹೊರಟರೂ ಶಾಲೆಗೆ ಮಕ್ಕಳು ತಡವಾಗಿ ತಲುಪುವಂತಾಗಿದೆ ಎಂದು ಗಿರಿನಗರದ ನಿವಾಸಿ ರಾಮಮನೋಹರ್‌ ಹೇಳಿದರು.

20 ನಿಮಿಷ ವ್ಯರ್ಥ

ಹೊರವರ್ತುಲ ರಸ್ತೆಯನ್ನು ಸಿಗ್ನಲ್‌ಮುಕ್ತ ಮಾಡುತ್ತೇವೆ ಎಂದು ವರ್ಷಗಳಿಂದ ನಮಗೆ ತೊಂದರೆ ಕೊಡುತ್ತಿದ್ದಾರೆ. ನಾಲ್ಕೈದು ಪಿಲ್ಲರ್‌ಗಳು ನಿಂತುಕೊಂಡು ವರ್ಷಗಳೇ ಕಳೆದರೂ ಕಾಮಗಾರಿ ಮುಂದುವರಿದಿಲ್ಲ. ನಿತ್ಯವೂ ಈ ಜಂಕ್ಷನ್‌ ದಾಟಬೇಕೆಂದರೆ ಸಾಕಷ್ಟು ಸಮಯ ಬೇಕು. ವಾಹನ ದಟ್ಟಣೆಯ ಅವಧಿಯಲ್ಲಂತೂ 20 ನಿಮಿಷದಿಂದ 30 ನಿಮಿಷ ಇಲ್ಲೇ ವ್ಯರ್ಥವಾಗುತ್ತದೆ ಎಂದು ನಾಯಂಡಹಳ್ಳಿ ನಿವಾಸಿ ರಾಜು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.