ADVERTISEMENT

ಪ್ರವಾಸಕ್ಕೆಂದು ಬೆಂಗಳೂರಿಗೆ ಬಂದಿದ್ದ ವಿದೇಶಿ ಮಹಿಳೆ ಅನುಮಾನಾಸ್ಪದ ಸಾವು

* ಪಂಚತಾರಾ ಹೋಟೆಲ್ ಕೊಠಡಿಯಲ್ಲಿ ಮೃತದೇಹ ಪತ್ತೆ * ಶೇಷಾದ್ರಿಪುರ ಪೊಲೀಸರಿಂದ ತನಿಖೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 15:47 IST
Last Updated 14 ಮಾರ್ಚ್ 2024, 15:47 IST
   

ಬೆಂಗಳೂರು: ಪ್ರವಾಸಿ ವೀಸಾದಡಿ ನಗರಕ್ಕೆ ಬಂದಿದ್ದ ವಿದೇಶಿ ಮಹಿಳೆ ಜರೀನಾ ಎಂಬುವವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

‘ಉಜ್ಬೇಕಿಸ್ತಾನ್‌ನ ಜರೀನಾ, ಪ್ರವಾಸಕ್ಕೆಂದು ನಗರಕ್ಕೆ ಬಂದಿದ್ದರು. ಆನ್‌ಲೈನ್ ಮೂಲಕ ಕೊಠಡಿ ಕಾಯ್ದಿರಿಸಿ ಪಂಚತಾರಾ ಹೋಟೆಲ್‌ ಕೊಠಡಿಯಲ್ಲಿ ಉಳಿದುಕೊಂಡಿದ್ದರು. ಇವರ ಸಾವಿನ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಶೇಷಾದ್ರಿಪುರ ಠಾಣೆ ಮೂಲಗಳು ಹೇಳಿವೆ.

ಕೊಠಡಿಯಿಂದ ಹೊರಗೆ ಬಾರದ ಮಹಿಳೆ: ‘ಕೆಲ ದಿನಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದ ಮಹಿಳೆ, ಒಂಟಿಯಾಗಿ ಕೊಠಡಿಯಲ್ಲಿ ಉಳಿದುಕೊಂಡಿದ್ದರು. ಬೆಳಿಗ್ಗೆ ನಗರದ ಹಲವು ಪ್ರದೇಶಗಳಿಗೆ ಭೇಟಿ ನೀಡಿ, ಸಂಜೆ ವಾಪಸು ಕೊಠಡಿಗೆ ಬರುತ್ತಿದ್ದರು. ಆದರೆ, ಮಹಿಳೆ ಬುಧವಾರ ಬೆಳಿಗ್ಗೆ ಕೊಠಡಿಯಿಂದ ಹೊರಗೆ ಬಂದಿರಲಿಲ್ಲ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೂ ಮಹಿಳೆ ಕೊಠಡಿಯಿಂದ ಹೊರಗೆ ಬಂದಿರಲಿಲ್ಲ. ಹೋಟೆಲ್ ಸಿಬ್ಬಂದಿ, ಬೆಲ್ ಮಾಡಿದ್ದಾಗಲೂ ಬಾಗಿಲು ತೆರೆದಿರಲಿಲ್ಲ. ಅನುಮಾನಗೊಂಡ ಸಿಬ್ಬಂದಿ, ಬುಧವಾರ ತಡರಾತ್ರಿ ಮಾಸ್ಟರ್ ಕೀ ಬಳಸಿ ಬಾಗಿಲು ತೆರೆದು ನೋಡಿದಾಗ ಮೃತದೇಹ ಕಂಡಿತ್ತು’ ಎಂದು ತಿಳಿಸಿದರು.

ಉಸಿರುಗಟ್ಟಿಸಿ ಕೊಲೆ ಶಂಕೆ: ‘ಯಾರೋ ದುಷ್ಕರ್ಮಿಗಳು, ಕೊಠಡಿಗೆ ನುಗ್ಗಿರುವ ಸಾಧ್ಯತೆ ಇದೆ. ಜರೀನಾ ಅವರನ್ನು ಉಸಿರುಗಟ್ಟಿಸಿ ಕೊಂದು ಪರಾರಿಯಾಗಿರುವ ಅನುಮಾನವಿದೆ. ಹೊರಗಿನಿಂದ ಬಾಗಿಲು ಲಾಕ್‌ ಮಾಡಿಕೊಂಡು ಆರೋಪಿಗಳು ಪರಾರಿಯಾಗಿರುವ ಸಾಧ್ಯತೆಯೂ ಇದೆ’ ಎಂದು ಪೊಲೀಸರು ಹೇಳಿದರು.

‘ಹೋಟೆಲ್‌ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಸಂದರ್ಶಕರ ವಿವರಗಳನ್ನು ಪಡೆಯಲಾಗುತ್ತಿದೆ’ ಎಂದರು.

‘ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು ಹಾಗೂ ಶ್ವಾನ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸಂಬಂಧಿಕರಿಗೆ ಮಾಹಿತಿ ತಿಳಿಸಲಾಗಿದ್ದು, ಅವರು ನಗರಕ್ಕೆ ಬಂದ ನಂತರ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.