ಬೆಂಗಳೂರು: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಅರಣ್ಯ ವಲಯದ ಜಿಂಗಲಕುಂಟೆ ಗ್ರಾಮದಲ್ಲಿ 61 ಎಕರೆ 39 ಗುಂಟೆ ವಿಸ್ತೀರ್ಣದ ರಾಜ್ಯ ಅರಣ್ಯ ಜಮೀನು ಒತ್ತವರಿಯಾಗಿದೆ ಎಂಬ ಆರೋಪದ ಕುರಿತು ಜಂಟಿ ಸರ್ವೆ ನಡೆಸಿ, ಒತ್ತುವರಿ ಕಂಡುಬಂದರೆ ತೆರವುಗೊಳಿಸುವಂತೆ ಕೋಲಾರ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಬೆಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ನಿರ್ದೇಶನ ನೀಡಿದ್ದಾರೆ.
‘ವಿವಾದಿತ ಜಮೀನಿನ ಜಂಟಿ ಸರ್ವೆ ನಡೆಸಿ ಅರಣ್ಯ ಜಮೀನು ಒತ್ತುವರಿ ಆಗಿರುವುದು ಕಂಡುಬಂದಲ್ಲಿ ತೆರವುಗೊಳಿಸಲು ಕ್ರಮ ಜರುಗಿಸಬೇಕು’ ಎಂದು ಹೈಕೋರ್ಟ್ 2013ರ ಜುಲೈ 11ರಂದು ನೀಡಿದ್ದ ತೀರ್ಪನ್ನು ಈವರೆಗೂ ಪಾಲಿಸಿಲ್ಲ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ದೂರು ಸಲ್ಲಿಕೆಯಾಗಿತ್ತು. ಈ ಕುರಿತು ಕ್ರಮ ಕೈಗೊಂಡು ಅನುಪಾಲನಾ ವರದಿ ಸಲ್ಲಿಸುವಂತೆ ಸಚಿವಾಯಲಯವು ಆಗಸ್ಟ್ 9 ಮತ್ತು ಸೆಪ್ಟೆಂಬರ್ 6ರಂದು ರಾಜ್ಯ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿತ್ತು.
ಸೆ. 11ರಂದು ಮತ್ತೊಂದು ನೆನಪೋಲೆಯನ್ನು ರಾಜ್ಯ ಅರಣ್ಯ ಇಲಾಖೆಗೆ ಕಳುಹಿಸಲಾಗಿತ್ತು. ಅಕ್ಟೋಬರ್ 8ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿರುವ ಕೇಂದ್ರ ಅರಣ್ಯ ಸಚಿವಾಲಯ, ಎರಡು ತಿಂಗಳೊಳಗೆ ಅನುಪಾಲನಾ ವರದಿ ಸಲ್ಲಿಸುವಂತೆ ಗಡುವು ನೀಡಿದೆ.
ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಸೆ. 18ರಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ (ಅರಣ್ಯ ಪಡೆ ಮುಖ್ಯಸ್ಥರು) ಪತ್ರ ಬರೆದು, ಜಿಂಗಲಕುಂಟೆಯಲ್ಲಿ 61 ಎಕರೆ 39 ಗುಂಟೆ ಅರಣ್ಯ ಜಮೀನು ಒತ್ತುವರಿಯಾಗಿದೆ ಎಂಬ ಆರೋಪದ ಕುರಿತು ಜಂಟಿ ಸರ್ವೆ ನಡೆಸಿ, ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದರು.
ಸೆ.23ರಂದು ಕೋಲಾರ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಪತ್ರ ಬರೆದಿರುವ ಬೆಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ, ಜಿಂಗಲಕುಂಟೆ ಗ್ರಾಮದಲ್ಲಿ ಜಂಟಿ ಸರ್ವೆ ನಡೆಸಿ ಅರಣ್ಯ ಜಮೀನು ಒತ್ತುವರಿ ತೆರವುಗೊಳಿಸಿ, ಅನುಪಾಲನಾ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.