ADVERTISEMENT

ಅರಣ್ಯ ಜಮೀನು ಒತ್ತುವರಿ ತೆರವಿಗೆ ಆದ್ಯತೆ: ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 15:46 IST
Last Updated 26 ಸೆಪ್ಟೆಂಬರ್ 2024, 15:46 IST
ಈಶ್ವರ ಬಿ. ಖಂಡ್ರೆ
ಈಶ್ವರ ಬಿ. ಖಂಡ್ರೆ   

ಬೆಂಗಳೂರು: ರಾಜ್ಯದಲ್ಲಿ ಅರಣ್ಯ ಜಮೀನು ಒತ್ತುವರಿಯಿಂದಾಗಿ ಮಾನವ–ವನ್ಯಜೀವಿ ಸಂಘರ್ಷ ಹೆಚ್ಚಾಗಿ, ಸಾವು–ನೋವು ಉಂಟಾಗುತ್ತಿದೆ. ಹಾಗಾಗಿ ಅರಣ್ಯ ಜಮೀನು ಒತ್ತುವರಿ ತೆರವಿಗೆ ಆದ್ಯತೆ ನೀಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ಸಮಾಜ ಕಲ್ಯಾಣ ಇಲಾಖೆ, ಸಿದ್ದಾರ್ಥ ಎಜುಕೇಷನ್ ಸೊಸೈಟಿ, ಸಾಲು ಮರದ ತಿಮ್ಮಕ್ಕ ಇಂಟರ್‌ನ್ಯಾಷನಲ್ ಫೌಂಡೇಷನ್‌, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಾಲು ಮರದ ತಿಮ್ಮಕ್ಕ ಅಭಿನಂದನಾ ಸಮಿತಿ ಗುರುವಾರ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒತ್ತುವರಿ ಪರಿಣಾಮ ಅರಣ್ಯ ಪ್ರದೇಶ ಕ್ಷೀಣಿಸುತ್ತಿದೆ. ಕೆಲವೆಡೆ ಅತಿಯಾದ ಮಳೆಯಿಂದ ಪ್ರವಾಹ ಪರಿಸ್ಥಿತಿ ತಲೆದೋರಿದರೆ, ಕೆಲವು ಕಡೆ ಮಳೆಯೇ ಆಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ವಿಪರೀತ ಬಿಸಿಲು ಏರುತ್ತಿದೆ. ಈ ರೀತಿಯ ಅನಾಹುತ ತಪ್ಪಬೇಕಾದರೆ ವೃಕ್ಷಗಳ ಸಂಖ್ಯೆ ಹೆಚ್ಚಳವಾಗಬೇಕು ಎಂದು ಹೇಳಿದರು.

ADVERTISEMENT

ತಿಮ್ಮಕ್ಕ ಅವರು ಮಾಗಡಿ ತಾಲ್ಲೂಕಿನ ಹುಲಿಕಲ್‌ನಿಂದ ಕುದೂರು ನಡುವೆ ರಾಜ್ಯ ಹೆದ್ದಾರಿ 94ರಲ್ಲಿ 8 ಸಾವಿರ ಸಸಿಗಳನ್ನು ನೆಟ್ಟು, ಬಹುದೂರದಿಂದ ಬಿಂದಿಗೆಯಲ್ಲಿ ನೀರು ಹೊತ್ತು ತಂದು ಬೆಳೆಸಿ, ಜಗತ್ತಿಗೆ ಮಾದರಿಯಾಗಿದ್ದಾರೆ. 2016 ರಲ್ಲಿ ಬಿಬಿಸಿ ನಡೆಸಿದ ಸಮೀಕ್ಷೆಯಲ್ಲಿ ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ತಿಮ್ಮಕ್ಕ ಅವರೂ ಸ್ಥಾನ ಪಡೆದಿದ್ದರು ಎಂಬುದು ಹೆಮ್ಮೆಯ ವಿಚಾರ ಎಂದರು.

ಪರಿಸರ ರಾಯಭಾರಿ ತಿಮ್ಮಕ್ಕ ಅವರ ಸಾಕು ಪುತ್ರ ಬಳ್ಳೂರು ಉಮೇಶ್‌ ಅವರನ್ನು ಯುವ ಪರಿಸರ ರಾಯಭಾರಿಯಾಗಿ ಮಾಡುವ ಬಗ್ಗೆ ಹಾಗೂ ತಿಮ್ಮಕ್ಕ ಅವರಿಗೆ ವಸತಿ ಸೌಲಭ್ಯ ಮಂಜೂರು ಕುರಿತು ಸಂಬಂಧಪಟ್ಟವರ ಜತೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಗೃಹ ಸಚಿವ ಜಿ.ಪರಮೇಶ್ವರ ಮಾತನಾಡಿ, ‘ಯಾವುದೇ ಸ್ವಾರ್ಥವಿಲ್ಲದೇ ಮರಗಳನ್ನೆ ಮಕ್ಕಳೆಂದು ಭಾವಿಸಿ ಮನುಕುಲವನ್ನು ರಕ್ಷಿಸುವ ಬಹುದೊಡ್ಡ ಕೆಲಸವನ್ನು ಸಾಲು ಮರದ ತಿಮ್ಮಕ್ಕ ಮಾಡಿದ್ದಾರೆ’ ಎಂದರು.

ಪ್ರಸ್ತುತ ದಿನಗಳಲ್ಲಿ ಮಳೆ‌ ಬರಬೇಕಾದ ಸಂದರ್ಭಕ್ಕೆ ಬರುತ್ತಿಲ್ಲ‌. ಒಂದು ಭಾಗದಲ್ಲಿ ಮಳೆಯಾದರೆ, ಮತ್ತೊಂದು ಭಾಗದಲ್ಲಿ ಮಳೆಯಾಗುತ್ತಿಲ್ಲ. ಭೂಮಿಯ ಹಸಿರು ಪದರು ಕಡಿಮೆಯಾಗಿರುವುದೇ ಇದಕ್ಕೆ ಕಾರಣ. ಇದರಿಂದ ಭೂಮಿಯ ಉಷ್ಣಾಂಶ ಹೆಚ್ಚಾಗುತ್ತಿದೆ.  ಕೋಟ್ಯಂತರ ಕೀಟಗಳು ನಾಶವಾಗುತ್ತಿವೆ. ಕೀಟಗಳು ನಾಶವಾದರೆ ಮನುಕುಲಕ್ಕೆ ಅಪಾಯ ಎದುರಾಗಲಿದೆ ಎಂದು ಎಚ್ಚರಿಸಿದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಸಾಲು ಮರದ ನ್ಯಾಷನಲ್ ಗ್ರೀನರಿ ಅವಾರ್ಡ್‌–2021–22’ ಹಾಗೂ ಕಿರಿಯರಿಗೆ ‘ಸಾಲು ಮರದ ತಿಮ್ಮಕ್ಕ ನ್ಯಾಷನಲ್‌ ಗ್ರೀನರಿ ಬಾಲ ಪುರಸ್ಕಾರ್–2024’ ನೀಡಿ ಗೌರವಿಸಲಾಯಿತು. ‘ಇತಿಹಾಸ ಸೃಷ್ಟಿಸಿದ ಸಾಲುಮರದ ತಿಮ್ಮಕ್ಕ’ ಧ್ವನಿಸುರಳಿ ಬಿಡುಗಡೆ ಮಾಡಲಾಯಿತು.

ಚಿತ್ರದುರ್ಗದ ಭೋವಿ ಮಠದ ಪೀಠಾಧ್ಯಕ್ಷ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಕೆ.ರಾಕೇಶ್‌ ಕುಮಾರ್, ವೈದ್ಯ ರಮಣರಾವ್, ಅಪೋಲೋ ಆಸ್ಪತ್ರೆ ಮುಖ್ಯಸ್ಥ ಡಾ. ಗೋವಿಂದಯ್ಯ ಯತೀಶ್, ಶ್ವಾಸಕೋಶ ತಜ್ಞೆ ಡಾ. ರಜನಿ ಸುರೇಂದರ್ ಭಟ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.