ADVERTISEMENT

₹500 ಕೋಟಿ ಮೌಲ್ಯದ ಅರಣ್ಯ ಜಮೀನಿನ ದಾಖಲೆ ಬದಲು!

ಅಕ್ರಮ ಭೂ ಮಂಜೂರಾತಿಗಾಗಿ ಕೃತ್ಯ– ಅರಣ್ಯ ವಿಚಕ್ಷಣ ದಳದ ತನಿಖೆಯಲ್ಲಿ ಪತ್ತೆ

ಚಿರಂಜೀವಿ ಕುಲಕರ್ಣಿ
Published 4 ಅಕ್ಟೋಬರ್ 2023, 4:24 IST
Last Updated 4 ಅಕ್ಟೋಬರ್ 2023, 4:24 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಉತ್ತರ ಉಪ ವಿಭಾಗದ ವ್ಯಾಪ್ತಿಯ ಭಾರತೀಯ ಸಿಟಿಯಲ್ಲಿ ಹಿಂದಿನ ಉಪ ವಿಭಾಗಾಧಿಕಾರಿ ಎಂ.ಜಿ. ಶಿವಣ್ಣ ಅವರು ₹500 ಕೋಟಿ ಮೌಲ್ಯದ 18 ಎಕರೆ ಅರಣ್ಯ ಜಮೀನಿನ ದಾಖಲೆಗಳನ್ನು ಅಕ್ರಮವಾಗಿ ‘ಸರ್ಕಾರಿ ಕಂದಾಯ ಜಮೀನು’ ಎಂದು ತಿದ್ದುಪಡಿ ಮಾಡಿರುವುದು ಪತ್ತೆಯಾಗಿದೆ.

ಸಾರ್ವಜನಿಕರಿಂದ ಬಂದ ದೂರುಗಳನ್ನು ಆಧರಿಸಿ ಈ ಬಗ್ಗೆ ತನಿಖೆ ನಡೆಸುವಂತೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಅರಣ್ಯ ಇಲಾಖೆಯ ವಿಚಕ್ಷಣಾ ದಳಕ್ಕೆ ನಿರ್ದೇಶನ ನೀಡಿದ್ದರು. ತನಿಖಾ ವರದಿಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದ್ದು, ‘ಅರಣ್ಯ ಜಮೀನನ್ನು ಕಬಳಿಸುವ ಸಂಚಿನ ಭಾಗವಾಗಿ ಜಮೀನಿನ ದಾಖಲೆಗಳನ್ನು ಬದಲಾವಣೆ ಮಾಡಲಾಗಿದೆ’ ಎಂಬ ಉಲ್ಲೇಖ ಅದರಲ್ಲಿದೆ.

ADVERTISEMENT

ಕೆ.ಆರ್‌.ಪುರ ಹೋಬಳಿ ವ್ಯಾಪ್ತಿಯ ಕೊತ್ತನೂರು ಗ್ರಾಮದ ಸರ್ವೆ ನಂಬರ್‌ 47ರಲ್ಲಿ 17 ಎಕರೆ 34 ಗುಂಟೆ ವಿಸ್ತೀರ್ಣವನ್ನು ಅರಣ್ಯ ಜಮೀನು ಎಂಬುದಾಗಿ ವರ್ಗೀಕರಣ ಮಾಡಿ ಬೆಂಗಳೂರು ನಗರ ಜಿಲ್ಲಾಧಿಕಾರಿ 2006ರಲ್ಲಿ ಆದೇಶ ಹೊರಡಿಸಿದ್ದರು. ಅಲ್ಲಿ ಅರಣ್ಯೀಕರಣ ಚಟುವಟಿಕೆಗಳನ್ನು ಇಲಾಖೆ ಕೈಗೊಂಡಿದ್ದರೂ ಜಮೀನಿನ ಮೇಲೆ ಸಂಪೂರ್ಣ ಹಕ್ಕು ಸಾಧಿಸಲು ಕಾನೂನು ಹೋರಾಟವೂ ಮುಂದುವರಿದಿತ್ತು.

ಸ್ಥಳೀಯ ಸಂಘಟನೆಯೊಂದು ಜಿಲ್ಲಾಧಿಕಾರಿಯವರ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ನಂತರ ಜಂಟಿ ಸರ್ವೆ ನಡೆಸಿದ್ದ ಬೆಂಗಳೂರು ಪೂರ್ವ ತಹಶೀಲ್ದಾರ್ ಮತ್ತು ಭೂ ಮಾಪನ ಇಲಾಖೆ ಸಹಾಯಕ ನಿರ್ದೇಶಕರು, ಸದರಿ ಜಮೀನಿನ ಗಡಿಗಳನ್ನು ಗುರುತಿಸಿದ್ದರು. ಜಂಟಿ ಸರ್ವೆ ವರದಿಯನ್ನು ಆಧರಿಸಿ ಸ್ಥಳೀಯರ ಅರ್ಜಿಯನ್ನು ತಿರಸ್ಕರಿಸಿದ್ದ ಸುಪ್ರೀಂ ಕೋರ್ಟ್‌, 17 ಎಕರೆ 34 ಗುಂಟೆ ಅರಣ್ಯ ಪ್ರದೇಶ ಎಂದು 2017ರ ಮಾರ್ಚ್‌ 24ರಂದು ಆದೇಶ ಹೊರಡಿಸಿತ್ತು.

2023ರ ಜನವರಿಯಲ್ಲಿ ಇದೇ ಜಮೀನನ್ನು ‘ಸರ್ಕಾರಿ ಜಮೀನು’ ಎಂದು ದಾಖಲೆಗಳನ್ನು ತಿದ್ದುಪಡಿ ಮಾಡಿ ಉಪ ವಿಭಾಗಾಧಿಕಾರಿ ಎಂ.ಜಿ. ಶಿವಣ್ಣ ಆದೇಶ ಹೊರಡಿಸಿದ್ದರು. ಆ ಮೂಲಕ, ಸದರಿ ಜಮೀನನ್ನು ವಾಣಿಜ್ಯ, ರಿಯಲ್‌ ಎಸ್ಟೇಟ್‌ ಚಟುವಟಿಕೆಗಳೂ ಸೇರಿದಂತೆ ಅರಣ್ಯೇತರ ಉದ್ದೇಶಕ್ಕೆ ಬಳಸಲು ಅನುವು ಮಾಡಿಕೊಟ್ಟಿದ್ದರು.

‘ಉಪ ವಿಭಾಗಾಧಿಕಾರಿಯವರ ಆದೇಶವು ನೇರವಾಗಿ ಸುಪ್ರೀಂ ಕೋರ್ಟ್‌ ಆದೇಶದ ಉಲ್ಲಂಘನೆಯಾಗುತ್ತದೆ. ನ್ಯಾಯಾಂಗ ನಿಂದನೆಯೂ ಹೌದು. ಉಪ ವಿಭಾಗಾಧಿಕಾರಿಯವರು ಈ ರೀತಿ ಆದೇಶ ಹೊರಡಿಸುವ ಮೂಲಕ ಅರಣ್ಯ ಸಂರಕ್ಷಣಾ ಕಾಯ್ದೆ–1980ರ ಸೆಕ್ಷನ್‌ 2 ಅನ್ನು ಉಲ್ಲಂಘಿಸಿದ್ದಾರೆ’ ಎಂದು ಅರಣ್ಯ ಇಲಾಖೆಯ ವಿಚಕ್ಷಣಾ ದಳ ತನಿಖಾ ವರದಿಯಲ್ಲಿ ಹೇಳಿದೆ.

‘ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ ಯಾವುದೇ ಕಾರಣವಿಲ್ಲದೆ ಅರಣ್ಯ ಜಮೀನಿನ ದಾಖಲೆಗಳನ್ನು ‘ಸರ್ಕಾರಿ ಜಮೀನು’ ಎಂಬುದಾಗಿ ಬದಲಿಸಿದ್ದಾರೆ. ಈ ರೀತಿ ಏಕಪಕ್ಷೀಯವಾಗಿ ದಾಖಲೆ ಬದಲಾವಣೆ ಮಾಡಿದ ಬಳಿಕ ಅಲ್ಲಿ ಒತ್ತುವರಿ ಪ್ರಯತ್ನಗಳು ನಡೆದಿವೆ. ಭೂಕಬಳಿಕೆಯ ಪ್ರಯತ್ನಗಳು ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಉಪ ವಿಭಾಗಾಧಿಕಾರಿಯವರ ಅದೇಶದ ವಿರುದ್ಧ ಮೇಲ್ಮನವಿಯನ್ನೂ ಸಲ್ಲಿಸಿಲ್ಲ’ ಎಂದು ವಿಚಕ್ಷಣಾ ದಳ ತಿಳಿಸಿದೆ.

ಇದೇ ಜಮೀನನ್ನು ಒತ್ತುವರಿ ಮಾಡಲು ಪ್ರಯತ್ನಿಸಿದ ಹಲವರ ವಿರುದ್ಧ ಯಲಹಂಕ ವಲಯ ಅರಣ್ಯಾಧಿಕಾರಿ ಎರಡು ಎಫ್‌ಐಆರ್‌ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಈಶ್ವರ ಖಂಡ್ರೆ, ‘ಸುಪ್ರೀಂ ಕೋರ್ಟ್‌ ಆದೇಶಕ್ಕೆ ವಿರುದ್ಧವಾಗಿ ಉಪ ವಿಭಾಗಾಧಿಕಾರಿ ಆದೇಶ ಹೊರಡಿಸಿರುವುದು ಅಚ್ಚರಿ ಉಂಟುಮಾಡಿದೆ. ಈ ಪ್ರಕರಣವನ್ನು ಕಂದಾಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.