ADVERTISEMENT

‘ಸಶಕ್ತ ಭಾಷಾ ನೀತಿ’ ರೂಪಿಸಲು ತಜ್ಞರ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 15:38 IST
Last Updated 21 ಅಕ್ಟೋಬರ್ 2024, 15:38 IST
<div class="paragraphs"><p>ಕನ್ನಡ ಮತ್ತು ಸಂಸ್ಕೃತಿ ಇಲಾಖೆ</p></div>

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

   

ಬೆಂಗಳೂರು: ಕನ್ನಡದ ಸಹ ಭಾಷೆಗಳ ಸಂರಕ್ಷಣೆಗಾಗಿ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ‘ಕರ್ನಾಟಕಕ್ಕೊಂದು ಸಶಕ್ತ ಭಾಷಾ ನೀತಿ’ಯನ್ನು ರೂಪಿಸಲು ತಜ್ಞರ ಸಮಿತಿ ರಚಿಸಿದೆ.

ತುಳು, ಕೊರಗ, ಕೊಡವ, ಬಡಗ, ಸಿದ್ಧಿ, ಕುರುಬ, ವರ್ಲಿ, ಚೆಂಚು, ಇರುಳ, ಗೌಳಿ, ಯರವ, ಸೋಲಿಗ, ಉರ್ದು, ಬ್ಯಾರಿ ಮೊದಲಾದ ಸಣ್ಣ ಭಾಷೆಗಳ ಸಂರಕ್ಷಣೆ ಇದರ ಗುರಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತನ್ನ ಆದೇಶದಲ್ಲಿ ಹೇಳಿದೆ.

ADVERTISEMENT

ಉತ್ತಮ ತೀರ್ಮಾನ:

ಕರ್ನಾಟಕದಲ್ಲಿ 230 ಭಾಷೆಗಳಿದ್ದು, ಸರ್ಕಾರದ ಈ ತೀರ್ಮಾನವು ಕನ್ನಡ ಭಾಷೆಯನ್ನು ಇನ್ನಷ್ಟು ಸಮಗ್ರ ಮತ್ತು ಸಶಕ್ತಗೊಳಿಸಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡದ ಸಹ ಭಾಷೆಗಳೊಂದಿಗೆ ಹಲವು ಸ್ವತಂತ್ರ ಭಾಷೆಗಳೂ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಶ್ರೀಮಂತಗೊಳಿಸಿವೆ. ತುಳು, ಕೊಡವ, ಹವ್ಯಕ, ಅರೆಭಾಷೆ, ಉರ್ದು ಮೊದಲಾದ ಭಾಷೆಗಳ ಸಂಯೋಜನೆಯ ಮೂಲಕ ಬಳಸಿ ಕನ್ನಡದಲ್ಲಿ ಬರೆದವರೂ ಇದ್ದಾರೆ. ಕರ್ನಾಟಕದ ದಲಿತರ ಭಾಷೆಯು ವೈವಿಧ್ಯವೂ ಶ್ರೀಮಂತವೂ ಆಗಿದೆ.

ಕರ್ನಾಟಕವು ಭಾಷಾ ದೃಷ್ಠಿಯಿಂದ ಸಮೃದ್ಧವಾಗಿದ್ದರೂ ಯುನೆಸ್ಕೊ ಹೇಳಿರುವಂತೆ ಇಲ್ಲಿನ ಸಂಸ್ಕೃತಿಯ ಭಾಗವಾದ 72 ಭಾಷೆಗಳು ಅಳಿವಿನಂಚಿನಲ್ಲಿವೆ. ಇಂತಹ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡದ ಸಮೃದ್ಧಿಗಾಗಿ ಸಹಕರಿಸಿದ ಭಾಷೆಗಳನ್ನು ಉಳಿಸುವ ಮೂಲಕ ಕನ್ನಡವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಯೋಜನೆಯನ್ನು ರೂಪಿಸಿದೆ. ಇದಕ್ಕೆ ಪೂರಕವೆಂಬಂತೆ, ಕನ್ನಡವನ್ನು ಬೆಳೆಸಿದ ಇತರ ಸಣ್ಣ ಭಾಷೆಗಳನ್ನು ಸಂರಕ್ಷಿಸಿಕೊಳ್ಳಲು ದೇಶಕ್ಕೆ ಮಾದರಿಯಾಗಲಿರುವ ಭಾಷಾ ನೀತಿಯನ್ನು ಸರ್ಕಾರ ರಚಿಸಿದೆ ಎಂದೂ ಬಿಳಿಮಲೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.