ಬೆಂಗಳೂರು: ವಿಶ್ವವಿದ್ಯಾಲಯಗಳು ಸರ್ಕಾರದ ಪ್ರಚಾರ ಕಾರ್ಯದ ವೇದಿಕೆಗಳಾದರೆ ಅವುಗಳ ಅಸ್ತಿತ್ವವೇ ಇರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಹೇಳಿದರು.
ಚಿರಂತ್ ಪ್ರಕಾಶನ ಪ್ರಕಟಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರ ಸಂಶೋಧನಾ ಗ್ರಂಥ ‘ಹುಡುಕಾಟ’ ಬಿಡುಗಡೆ ಕಾರ್ಯಕ್ರಮದಲ್ಲಿ ಗುರುವಾರ ಅವರು ಮಾತನಾಡಿದರು.
‘ವಿಶ್ವವಿದ್ಯಾಲಯಗಳು ಮುಕ್ತ ಚರ್ಚೆಯ ಕೇಂದ್ರಗಳಾಗಬೇಕು ಹಾಗೂ ಆರ್ಥಿಕ ಪ್ರಗತಿಗೆ ವೇಗವರ್ಧಕವಾಗಿರಬೇಕು. ಯಾವ ಉದ್ದೇಶದೊಂದಿಗೆ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಸ್ಥಾಪನೆಯಾಯಿತು. ಈಗ ಅದಕ್ಕೆ ತದ್ವಿರುದ್ದವಾಗಿ ಕಾರ್ಯನಿರ್ವಹಿಸುತ್ತಿರುವ ಪರಿಸ್ಥಿತಿ ಕಾಣುತ್ತಿದ್ದೇವೆ. ಜೆಎನ್‌ಯು ಪತನವಾಗುವುದನ್ನು ಕಂಡಾಗ ಉಳಿದ ವಿಶ್ವವಿದ್ಯಾಲಯಗಳ ಪರಿಸ್ಥಿತಿ ಹೇಳುವಂತಿಲ್ಲ. ಇದು ದೇಶದ ದುರಂತ’ ಎಂದು ಬೇಸರ ವ್ಯಕ್ತಪಡಿಸಿದರು.
‘ಸಂಶೋಧನೆಗಾಗಿ ಹುಟ್ಟಿಕೊಂಡ ಕನ್ನಡ ವಿಶ್ವವಿದ್ಯಾಲಯ ಸಹ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಪುರುಷೋತ್ತಮ ಬಿಳಿಮಲೆ ಅವರು ಪ್ರಾದೇಶಿಕ ಸಂಸ್ಕೃತಿಗೆ ಕೊಡುಗೆ ನೀಡಿದ್ದಾರೆ. ನಾಲ್ಕು ದಶಕಗಳಿಂದ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದರು.
‘ಸಾಹಿತ್ಯ ಮತ್ತು ಜಾನಪದಲ್ಲಿ ಸಂಶೋಧನೆ ಅಗತ್ಯ. ಎಂ.ಎಂ. ಕಲಬುರ್ಗಿ ಅವರು ತಮ್ಮ ಸಂಶೋಧನೆಗಳ ಸತ್ಯಗಳಿಂದಾಗಿಯೇ ಕೊಲೆಯಾದರು. ಹಾಗಾಗಿ ಭಯ, ಆತಂಕ ಸಂಶೋಧಕರನ್ನು ಕಾಡುತ್ತಿದೆ. ಸಂಶೋಧನೆಯಲ್ಲಿ ಸತ್ಯ ಇರಬೇಕು. ಆದರೆ ಈಗ ಸತ್ಯ ಬೇಕಾಗಿಲ್ಲ. ಆದ್ದರಿಂದ ಸಂಶೋಧಕರು ತಮ್ಮ ಜೀವದ ಮೇಲೆ ಭಯ ಇಟ್ಟುಕೊಳ್ಳುವುದು ಬೇಡ’ ಎಂದರು.
ಸಾಹಿತಿ ಹಂ.ಪ. ನಾಗರಾಜಯ್ಯ ಗ್ರಂಥ ಬಿಡುಗಡೆ ಮಾಡಿದರು. ಚಿರಂತ್ ಪ್ರಕಾಶನದ ಎಚ್.ಪರಮೇಶ್ವರ, ದೆಹಲಿ ಮಿತ್ರದ ವಸಂತ ಶೆಟ್ಟಿ ಬೆಳ್ಳಾರೆ ಪಾಲ್ಗೊಂಡಿದ್ದರು. ಟಿ.ತಿಮ್ಮೇಶ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.