ಬೆಂಗಳೂರು: ‘ಲೋಕಾಯುಕ್ತವನ್ನು ನಿಷ್ಕ್ರಿಯಗೊಳಿಸಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಸ್ತಿತ್ವಕ್ಕೆ ತರಲಾಯಿತು. ಆದರೆ, ಅಕ್ರಮಗಳಲ್ಲಿ ಭಾಗಿಯಾದ ಯಾವ ಶಾಸಕರ ವಿರುದ್ಧವೂ ಎಸಿಬಿ ಇದುವರೆಗೂ ಪ್ರಕರಣ ದಾಖಲಿಸಿಲ್ಲ’ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು.
ಪೀಸ್‌ಫುಲ್ ಇಂಡಿಯಾ ಟ್ರಸ್ಟ್ ಮತ್ತು ಪೀಸ್‌ಫುಲ್ ಇಂಡಿಯಾ ಟಿವಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಮಾನವ ಹಕ್ಕು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಗುರುವಾರ ಆಯೋಜಿ ಸಿದ್ದ‘ನ್ಯಾಯಕ್ಕಾಗಿ ಲೋಕಾಯುಕ್ತ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲೋಕಾಯುಕ್ತ ಮತ್ತು ಎಸಿಬಿ ಕಾರ್ಯವೈಖರಿಯನ್ನು ವಿಶ್ಲೇಷಿಸಿದರು.
‘ಇತ್ತೀಚೆಗಷ್ಟೇ ಐಎಎಸ್ ಅಧಿಕಾರಿ ಯನ್ನು ಎಸಿಬಿ ಬಂಧಿಸಿದೆ. ಈ ಪ್ರಕರಣವನ್ನು ಹೊರತುಪಡಿಸಿದರೆ ಭ್ರಷ್ಟಾಚಾರದಲ್ಲಿ ಭಾಗಿಯಾದಯಾವ ಐಐಎಸ್ ಅಧಿಕಾರಿ ವಿರುದ್ಧವೂ ಪ್ರಕರಣ ದಾಖಲಿಸಿಲ್ಲ. ಸರ್ಕಾರಗಳು ಎಸಿಬಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ನಡೆಸಿಕೊಳ್ಳುತ್ತಿವೆ’ ಎಂದು ಟೀಕಿಸಿದರು.
‘ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎಸಿಬಿ ಸ್ಥಾಪಿಸಿತು. ಆಗ ವಿರೋಧ ಪಕ್ಷದಲ್ಲಿದ್ದ ಬಿಜೆಪಿ, ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ಎಸಿಬಿ ರದ್ದುಪಡಿಸಿ ಲೋಕಾಯುಕ್ತ ಬಲ
ಪಡಿಸುವುದಾಗಿ ಘೋಷಿಸಿತ್ತು. 24 ತಿಂಗಳಾದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬದಲಾಗಿ ಎಸಿಬಿಯನ್ನು ಬಿಜೆಪಿ ಪೋಷಿಸುತ್ತಿದೆ.ಇದರಿಂದ, ಭ್ರಷ್ಟ ವ್ಯವಸ್ಥೆಗೆ ಯಾವುದೇ ಭಯ ಇಲ್ಲದಂತಾಗಿದೆ.ಎಲ್ಲ ರಾಜಕೀಯ ಪಕ್ಷಗಳ ಧೋರಣೆ ಮತದಾರರನ್ನು ಮಂಕು ಮಾಡುವ ಉದ್ದೇಶವೇ ಆಗಿದೆ’ ಎಂದು ಟೀಕಿಸಿದರು.
‘ಕಾನೂನುಗಳನ್ನು ರೂಪಿಸುವುದು ಶಾಸಕಾಂಗದ ಜವಾಬ್ದಾರಿ. ಆದರೆ, ಕಾನೂನು ರೂಪಿಸುವುದಕ್ಕೆಸೀಮಿತವಾಗದೆಯೇ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವುದೇ ಹೆಚ್ಚು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಇದೆ. ಭ್ರಷ್ಟಾಚಾರ ಹೆಚ್ಚಾದಂತೆ ರಾಜ್ಯದಲ್ಲಿಯೂ ಲೋಕಾಯುಕ್ತ ಸ್ಥಾಪಿಸಲಾಯಿತು. ಆದರೆ,ಕರ್ನಾಟಕದಲ್ಲಿ ಲೋಕಾಯುಕ್ತ ಸಂಸ್ಥೆಯ ಅಸ್ತಿತ್ವ ತೋರಿಸಿಕೊಟ್ಟಿದ್ದು ಎನ್. ವೆಂಕಟಾಚಲಯ್ಯ’ ಎಂದರು.
‘ನಾನು ಅಕ್ರಮ ಗಣಿಗಾರಿಕೆ ವಿರುದ್ಧ ವರದಿ ನೀಡಿದ್ದೆ. ಮುಖ್ಯಮಂತ್ರಿಗಳಾಗಿದ್ದ ಮೂವರ ಹೆಸರು ಈ ವರದಿಯಲ್ಲಿದೆ. ಈ ವರದಿ ಜಾರಿಗೆ 2012ರಲ್ಲಿ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ನಡೆ ಸಿತು. ಆದರೆ, ಅಧಿಕಾರಕ್ಕೆ ಬಂದ ನಂತರ ಜಾರಿಗೊಳಿಸಲಿಲ್ಲ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.