ಬೆಂಗಳೂರು: ವಾಸವಿ ಆಸ್ಪತ್ರೆಯಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರದ ಎರಡು ಪ್ರೋಬ್ಸ್‌ಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆಂಗೇರಿಯ ನಿವಾಸಿ ಹೇಮಲತಾ (40) ಹಾಗೂ ಲಗ್ಗೆರೆಯ ರಾಜಗೋಪಾಲ ನಗರದ ಮಂಜುನಾಥ್(44) ಬಂಧಿತರು.
‘ಕೆ.ಎಸ್. ಲೇಔಟ್ ಬಸ್ ನಿಲ್ದಾಣದ ಬಳಿಯ ವಾಸವಿ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಒಇ) ಗಾಯತ್ರಿ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಯಿತು. ಆಸ್ಪತ್ರೆಯಲ್ಲಿ ₹10 ಲಕ್ಷ ಮೌಲ್ಯದ ಎರಡು ವೈದ್ಯಕೀಯ ಉಪಕರಣಗಳನ್ನು ಕಳವು ಮಾಡಿದ್ದರು. ಆರೋಪಿಗಳು ಆಸ್ಪತ್ರೆಯ ಮಾಜಿ ಸಿಬ್ಬಂದಿ’ ಎಂದು ಪೊಲೀಸರು ತಿಳಿಸಿದರು.
‘ಆಸ್ಪತ್ರೆಯ ರೇಡಿಯಾಲಜಿ ವಿಭಾಗದ ಉಸ್ತುವಾರಿ ನೋಡಿಕೊಳ್ಳಲು ಒಬ್ಬ ಪುರುಷ ಹಾಗೂ ಇಬ್ಬರು ಮಹಿಳಾ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿತ್ತು. ಆಗಸ್ಟ್ 10ರಂದು ರಾತ್ರಿ ಪಾಳಿಯಲ್ಲಿ ಇದ್ದವರು ಕೆಲಸ ಮುಗಿಸಿಕೊಂಡು ಮನೆಗೆ ತೆರಳಿದ್ದರು. ಮರು ದಿನ ಪರಿಶೀಲಿಸಿದಾಗ ವೈದ್ಯಕೀಯ ಉಪಕರಣಗಳು ಕಳ್ಳತನ ಆಗಿರುವುದು ಪತ್ತೆಯಾಗಿತ್ತು’ ಎಂದು ಮೂಲಗಳು ತಿಳಿಸಿವೆ.
‘ವಾಸವಿ ಆಸ್ಪತ್ರೆಯಲ್ಲೇ ಆರೋಪಿ ಹೇಮಲತಾ ಈ ಹಿಂದೆ ಕೆಲಸ ಮಾಡುತ್ತಿದ್ದಳು. ಬಳಿಕ ಕನ್ನಿಂಗ್‌ಹ್ಯಾಮ್ ರಸ್ತೆಯ ಆಸ್ಪತ್ರೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದಳು. ಅಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಯಿತು. ಕದ್ದ ಉಪಕರಣವನ್ನು ಈ ಹಿಂದೆ ಸಹೋದ್ಯೋಗಿ ಆಗಿದ್ದ ಮಂಜುನಾಥ್‌ಗೆ ಮಾರಾಟ ಮಾಡಿದ್ದಳು. ಮಂಜುನಾಥ್‌ನನ್ನು ಕೋಣನಕುಂಟೆ ಕ್ರಾಸ್‌ನ ಆಸ್ಪತ್ರೆಯೊಂದರಲ್ಲಿ ವಶಕ್ಕೆ ಪಡೆದುಕೊಳ್ಳಲಾಯಿತು’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.