ADVERTISEMENT

ಆಧುನಿಕ ಜೀವನಶೈಲಿಯಿಂದ ಕ್ಯಾನ್ಸರ್ ಹೆಚ್ಚಳ: ತಜ್ಞರ ಕಳವಳ

​ಪ್ರಜಾವಾಣಿ ವಾರ್ತೆ
Published 27 ಜನವರಿ 2024, 15:41 IST
Last Updated 27 ಜನವರಿ 2024, 15:41 IST
ಫೋರ್ಟಿಸ್ ಕ್ಯಾನ್ಸರ್ ಶೃಂಗವನ್ನು ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಡಾ.ನಿತಿ ರೈಝಾದಾ, ಡಾ. ಅಶುತೋಷ್ ರಘುವಂಶಿ ಹಾಗೂ ಕ್ಯಾನ್ಸರ್ ತಜ್ಞರು ಪಾಲ್ಗೊಂಡಿದ್ದರು
ಫೋರ್ಟಿಸ್ ಕ್ಯಾನ್ಸರ್ ಶೃಂಗವನ್ನು ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಡಾ.ನಿತಿ ರೈಝಾದಾ, ಡಾ. ಅಶುತೋಷ್ ರಘುವಂಶಿ ಹಾಗೂ ಕ್ಯಾನ್ಸರ್ ತಜ್ಞರು ಪಾಲ್ಗೊಂಡಿದ್ದರು   

ಬೆಂಗಳೂರು: ‘ಆಧುನಿಕ ಜೀವನ ವಿಧಾನ, ಪಾಶ್ಚಾತ್ಯ ಆಹಾರ ಪದ್ಧತಿ ಹಾಗೂ ವಾಯು ಮಾಲಿನ್ಯದಿಂದಾಗಿ ನಗರ ಪ್ರದೇಶದಲ್ಲಿ ಕ್ಯಾನ್ಸರ್ ಪೀಡಿತರಾಗುವವರ ಸಂಖ್ಯೆ ಹೆಚ್ಚಳವಾಗುತ್ತಿದೆ’ ಎಂದು ಕ್ಯಾನ್ಸರ್ ತಜ್ಞರು ಕಳವಳ ವ್ಯಕ್ತಪಡಿಸಿದರು. 

ಫೋರ್ಟಿಸ್‌ ಆಸ್ಪತ್ರೆ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಫೋರ್ಟಿಸ್ ಕ್ಯಾನ್ಸರ್ ಶೃಂಗ’ದಲ್ಲಿ 250ಕ್ಕೂ ಹೆಚ್ಚು ಕ್ಯಾನ್ಸರ್ ತಜ್ಞರು ಭಾಗವಹಿಸಿದ್ದರು. ಈ ಶೃಂಗದಲ್ಲಿ ಕ್ಯಾನ್ಸರ್ ತಪಾಸಣೆ, ಚಿಕಿತ್ಸೆ, ರೋಗದ ಬಗ್ಗೆ ಜಾಗೃತಿಗೆ ಕೈಗೊಳ್ಳಬೇಕಾದ ಕ್ರಮಗಳು, ತಂತ್ರಜ್ಞಾನದ ಬಳಕೆ, ಮನೆ ಆರೈಕೆ ಸೇರಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು. 

ಶೃಂಗ ಉದ್ಘಾಟಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ವ್ಯಕ್ತಿಯನ್ನು ದೈಹಿಕ, ಮಾನಸಿಕ ಮತ್ತು ಆರ್ಥಿಕವಾಗಿ ಕುಗ್ಗಿಸುತ್ತಿದ್ದ ಕ್ಯಾನ್ಸರ್ ಕಾಯಿಲೆ, ಇತ್ತೀಚೆಗೆ ಸಾಮಾನ್ಯವಾಗಿದೆ. ಈ ಕಾಯಿಲೆ ಬಗ್ಗೆ ಜಾಗೃತಿಯೂ ಮೂಡುತ್ತಿದ್ದು, ತಂತ್ರಜ್ಞಾನದ ನೆರವಿನಿಂದ ಚಿಕಿತ್ಸೆಗಳು ವ್ಯಕ್ತಿಯನ್ನು ಪ್ರಾಣಾಪಾಯದಿಂದ ಪಾರು ಮಾಡುತ್ತಿವೆ. ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳು ನಿಖರ ಚಿಕಿತ್ಸೆಗೆ ಸಹಕಾರಿಯಾಗುತ್ತಿವೆ. ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆ ಮಾಡಿದಲ್ಲಿ ಸುಲಭವಾಗಿ ಕಾಯಿಲೆಯನ್ನು ವಾಸಿ ಮಾಡಬಹುದು’ ಎಂದು ಹೇಳಿದರು. 

ADVERTISEMENT

ಕ್ಯಾನ್ಸರ್ ತಜ್ಞೆ ಡಾ.ನಿತಿ ರೈಝಾದಾ, ‘ಪುರುಷರಲ್ಲಿ ಹೆಚ್ಚಾಗಿ ಪ್ರಾಸ್ಪೇಟ್ (ಮೂತ್ರನಾಳ), ಬಾಯಿ, ಜಠರ ಮತ್ತು ಅನ್ನನಾಳದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಸ್ತನ ಮತ್ತು ಗರ್ಭಕಂಠದ ಗರ್ಭಾಶಯದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಪತ್ತೆಯಾಗುತ್ತಿದೆ. ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ, ನಗರ ಪ್ರದೇಶದಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ವೇಗವಾಗಿ ಹೆಚ್ಚಳವಾಗುತ್ತಿದೆ. ಪುರುಷರಲ್ಲಿ ಪತ್ತೆಯಾಗುವ ಕ್ಯಾನ್ಸರ್‌ಗಳಲ್ಲಿ ಇದು ಎರಡನೆಯ ಸ್ಥಾನದಲ್ಲಿದೆ. ಬಹುತೇಕ ಕ್ಯಾನ್ಸರ್ ಪೀಡಿತರು ರೋಗ ಉಲ್ಬಣಗೊಂಡ ಬಳಿಕ ಚಿಕಿತ್ಸೆಗೆ ಬರುತ್ತಾರೆ’ ಎಂದು ತಿಳಿಸಿದರು. 

ಫೋರ್ಟಿಸ್ ಹೆಲ್ತ್‌ಕೇರ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಅಶುತೋಷ್ ರಘುವಂಶಿ, ‌‘ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡಲ್ಲಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆಗಳನ್ನು ಒದಗಿಸಲು ಸಾಧ್ಯ. ದೇಶದ ಬಹುತೇಕ ಜನರಿಗೆ ಕ್ಯಾನ್ಸರ್ ಕಾಯಿಲೆಯ ಬಗ್ಗೆ ಸರಿಯಾದ ತಿಳಿವಳಿಕೆಯಿಲ್ಲ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.